ಸಾರಾಂಶ
ಕನ್ನಡಪ್ರಭ ವಾರ್ತೆ ವಿಧಾನಸಭೆ
ಮುಖ್ಯಮಂತ್ರಿಗಳು 28 ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವ ವ್ಯಕ್ತಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್ ಹೇಳಿದ್ದಾರೆ.ಶೂನ್ಯ ವೇಳೆಯಲ್ಲಿ ಸೋಮವಾರ ಬಿಜೆಪಿ ಸದಸ್ಯರ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಗಳ ಕುರಿತು ಹೇಳಿಕೆ ನೀಡಿದ ವ್ಯಕ್ತಿ ಹೆಸರನ್ನು ಇಲ್ಲಿ ತೆಗೆದುಕೊಳ್ಳಲೂ ಆತ ಅರ್ಹನಲ್ಲ. ಆ ವ್ಯಕ್ತಿ 2023ರ ಮೇ 27ರಂದು ಹೇಳಿಕೆ ನೀಡಿದ್ದಾನೆ. ಆಗ ನಮ್ಮ ಸರ್ಕಾರ ಇರಲಿಲ್ಲ. ಆಗ ಮಾತನಾಡಿದ್ದನ್ನು ಈಗ ಏಕೆ ಪ್ರಸ್ತಾಪಿಸುತ್ತಿದ್ದಾರೋ ಗೊತ್ತಿಲ್ಲ. ಆತನ ವಿರುದ್ಧ 18 ಅಪರಾಧ ಪ್ರಕರಣಗಳಿದ್ದು, ಈ ಪೈಕಿ ಕೆಲ ಪ್ರಕರಣಗಳು ವಜಾಗೊಂಡಿವೆ. ಹಾಗಂತ ಆತನ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿ ಯಾವುದೇ ರಾಜೀ ಇಲ್ಲ. ಸರ್ಕಾರ ಅಸಹಾಯಕವಾಗಿಲ್ಲ. ಆತನ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇದಕ್ಕೂ ಮುನ್ನ ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಮಾತನಾಡಿ, ಸರ್ಕಾರ ಧರ್ಮಸ್ಥಳದಲ್ಲಿ 25 ವರ್ಷಗಳ ಹಿಂದೆ ನಡೆದ ನಡೆದ ಕೊಲೆಗಳ ತನಿಖೆಗೆ ಎಸ್ಐಟಿ ರಚಿಸಿದೆ. 2 ವರ್ಷದ ಹಿಂದೆ ಮುಖ್ಯಮಂತ್ರಿ ಬಗ್ಗೆ ಮಾತನಾಡಿದ ವ್ಯಕ್ತಿ ಬಗ್ಗೆ ಕ್ರಮ ತೆಗೆದುಕೊಳ್ಳಲು ಏಕೆ ಹಿಂದೇಟು ಹಾಕುತ್ತಿದೆ ಪ್ರಶ್ನಿಸಿದರು.ಸರ್ಕಾರ ಅಸಹಾಯಕವೇ?:
ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್ ಮಾತನಾಡಿ, ಈ ಹಿಂದೆ ಸುಳ್ಯದಲ್ಲಿ ವ್ಯಕ್ತಿಯೊಬ್ಬ ಇಂಧನ ಸಚಿವರೊಂದಿಗೆ ಉದ್ವೇಗದಲ್ಲಿ ಮಾತನಾಡಿದ ಎಂಬ ಕಾರಣಕ್ಕೆ ಪೊಲೀಸರು ಆತನ ಮನೆಯ ಹಂಚು ತೆಗೆದು ಬಂಧಿಸಿದ್ದರು. ಇಲ್ಲಿ ಮುಖ್ಯಮಂತ್ರಿಗಳನ್ನು ಕೊಲೆಗಾರ ಎಂದಿರುವ ವ್ಯಕ್ತಿ ಮೇಲೆ ತಕ್ಷಣ ಕ್ರಮ ಏಕಾಗಿಲ್ಲ? ಸರ್ಕಾರ ಅಷ್ಟೊಂದು ಅಸಹಾಯಕವಾಗಿದೆಯೇ ಎಂದು ಪ್ರಶ್ನಿಸಿದರು.ಇದೇ ವೇಳೆ ಪಕ್ಷಗಳ ಶಾಸಕರು, ಮುಖ್ಯಮಂತ್ರಿಗಳನ್ನು ಕೆಲವರು ಕೊಲೆಗಡುಕ ಎಂದು ಹೇಳಿದ್ದರೂ ಸರ್ಕಾರ ಸುಮ್ಮನೆ ಕೂತಿದೆ ಎಂದು ದನಿ ಗೂಡಿಸಿದರು.
ಆ ವ್ಯಕ್ತಿ ಬಗ್ಗೆ ಸದನದಲ್ಲಿ ಚರ್ಚೆ ಬೇಡ:ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಯಾರು ಯಾವ ಯಾವ ಹೇಳಿಕೆ ನೀಡಿದ್ದಾರೆ ಎಂದು ನಾನು ನೋಡಿದ್ದೇನೆ. ಮುಖ್ಯಮಂತ್ರಿಯವರನ್ನು ಕೊಲೆಗಡುಕ ಎಂದು ಹೇಳಿರುವುದನ್ನೂ ನೋಡಿದ್ದೇನೆ. ನನ್ನ ಬಗ್ಗೆಯೂ ಮಾತನಾಡಿದ್ದಾರೆ. ನಿಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಬಗ್ಗೆ ಮಾತನಾಡಿದ್ದಾರೆ. ಈ ರೀತಿ ಹೇಳಿಕೆಗಳನ್ನು ನೀಡುತ್ತಿರುವವರ ಹೆಸರನ್ನು ವಿಧಾನಸಭೆಯಲ್ಲಿ ಹೇಳಿ ಅವರನ್ನು ನಾಯಕರನ್ನಾಗಿ ಮಾಡುವುದು ಬೇಡ. ಈ ವಿಚಾರವಾಗಿ ಗೃಹ ಸಚಿವರು ಹೇಳುವುದನ್ನು ಕೇಳೋಣ ಎಂದರು.
ತಮ್ಮ ಮೇಲೆ ಕೊಲೆ ಆರೋಪ ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೇ ಗೊತ್ತಿರಲಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲಿ ನಮ್ಮ ಶಾಸಕರಾದ ಶಿವಲಿಂಗೇಗೌಡ ಅವರು ಈ ವಿಚಾರ ಪ್ರಸ್ತಾಪಿಸಿದ್ದರು. ನಾನು ಮುಖ್ಯಮಂತ್ರಿಗಳಿಗೆ ಈ ಬಗ್ಗೆ ವಿವರಿಸಿದೆ. ಅವರು ಬಳಸಿದ ಭಾಷೆ ಎಲ್ಲವನ್ನೂ ನೋಡಿದ್ದೇನೆ. ನಾನು ಗೃಹ ಸಚಿವನಲ್ಲದಿದ್ದರೂ ಅನೇಕರು ನನಗೆ ಈ ವಿಚಾರಗಳನ್ನು ಕಳುಹಿಸುತ್ತಿದ್ದಾರೆ. ಅದೇ ಸಭೆಯಲ್ಲಿ ಮುಖ್ಯಮಂತ್ರಿ, ಗೃಹ ಸಚಿವರಿಗೆ ಯಾವ ನಿರ್ದೇಶನ ನೀಡಬೇಕೋ ನೀಡಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚೆ ಮಾಡುವುದು ಬೇಡ. ಗೃಹ ಸಚಿವರು ಈ ವಿಚಾರ ನಿಭಾಯಿಸುತ್ತಾರೆ ಎಂದು ಹೇಳಿದರು.