ಧರ್ಮಸ್ಥಳ ಪ್ರಕರಣ ಕುರಿತು ಡಾ.ಪರಮೇಶ್ವರ್‌ ಉತ್ತರಕ್ಕೆ ವಿಪಕ್ಷ ಅಸಮಾಧಾನ

| N/A | Published : Aug 19 2025, 01:00 AM IST / Updated: Aug 19 2025, 06:30 AM IST

Dr G Parameshwar

ಸಾರಾಂಶ

ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೀಡಿದ ಉತ್ತರ ಸದನದಲ್ಲಿ ಗದ್ದಲ ಎಬ್ಬಿಸಿತು. ಆಡಳಿತ ಪಕ್ಷ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ-ಜೆಡಿಎಸ್‌ ಸದಸ್ಯರು ಪರಮೇಶ್ವರ್‌ ಉತ್ತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಪ್ರಸಂಗವೂ ನಡೆಯಿತು.

 ವಿಧಾನಸಭೆ :  ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ನೀಡಿದ ಉತ್ತರ ಸದನದಲ್ಲಿ ಗದ್ದಲ ಎಬ್ಬಿಸಿತು. ಆಡಳಿತ ಪಕ್ಷ-ವಿಪಕ್ಷ ಸದಸ್ಯರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು. ಬಿಜೆಪಿ-ಜೆಡಿಎಸ್‌ ಸದಸ್ಯರು ಪರಮೇಶ್ವರ್‌ ಉತ್ತರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ ಪ್ರಸಂಗವೂ ನಡೆಯಿತು.

ಸಚಿವ ಪರಮೇಶ್ವರ್‌ ಅವರ ಸುದೀರ್ಘ ಉತ್ತರ ಬಳಿಕ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಮಾತನಾಡಿ, ಗೃಹ ಸಚಿವರು ತಮ್ಮ ಉತ್ತರದಲ್ಲಿ ಧರ್ಮಸ್ಥಳ ಗ್ರಾಮ ಪ್ರಕರಣದ ಷಡ್ಯಂತ್ರದಲ್ಲಿ ಯಾರಿದ್ದಾರೆ ಎಂದು ಹೇಳುತ್ತಾರೆ ಎಂದು ಭಾವಿಸಿದ್ದೆ. ಊಟವನ್ನೂ ಮಾಡದೆ ಉತ್ತರ ಕೇಳಿಸಿಕೊಳ್ಳಲು ಓಡೋಡಿ ಬಂದೆ. ನೀವು ಷಡ್ಯಂತ್ರ ಮಾಡಿದವರು ಯಾರು ಎಂದು ಒಂದೇ ಒಂದು ಹೇಳಿಕೆ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕ ಸುನೀಲ್‌ ಕುಮಾರ್‌ ಮಾತನಾಡಿ, ಎಸ್‌ಐಟಿ ತನಿಖೆ ನೆಪದಲ್ಲಿ ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಇದರ ಹಿಂದೆ ಧರ್ಮಸ್ಥಳದ ಹೆಸರಿಗೆ ಕೆಸರು ಎರಚುವ ಹುನ್ನಾರ ನಡೆಯುತ್ತಿದೆ. ಸರ್ಕಾರದ ಉದ್ದೇಶವೂ ಅದೇ ಆಗಿದೆ ಎಂದರು.

ಇದನ್ನು ಕಾಂಗ್ರೆಸ್‌ ಸದಸ್ಯರು ವಿರೋಧಿಸಿದರು. ಈ ವೇಳೆ ಸ್ಪೀಕರ್‌ ಖಾದರ್‌ ಅವರು ಆ ಪದವನ್ನು ಕಡತದಿಂದ ತೆಗೆಯುವಂತೆ ಸೂಚಿಸಿದಾಗ, ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಸದನಲ್ಲಿ ಗದ್ದಲ ಉಂಟಾಯಿತು.

ಧಾರ್ಮಿಕ ಕ್ಷೇತ್ರದ ಬಗ್ಗೆ ಅಪಪ್ರಚಾರ:

ಗದ್ದಲದ ನಡುವೆ ಮಾತು ಮುಂದುವರೆಸಿದ ಶಾಸಕ ಸುನೀಲ್‌ ಕುಮಾರ್‌, ಸರ್ಕಾರ ಎಸ್ಐಟಿ ರಚನೆ ಮಾಡಿ ಹಿಂದೂ ಧಾರ್ಮಿಕ ಕ್ಷೇತ್ರದದ ಬಗ್ಗೆ ಅಪಪ್ರಚಾರ ಮಾಡಿದೆ. ಕಾಂಗ್ರೆಸ್‌ ಹೈಕಮಾಂಡ್‌ ನಿರ್ದೇಶನದ ಮೇರೆಗೆ ಸರ್ಕಾರವೇ ಈ ಅಪಪ್ರಚಾರ ಮಾಡುತ್ತಿದೆ ಎಂದು ನೇರವಾಗಿ ಆರೋಪಿಸಿದರು.

ವಿಪಕ್ಷಗಳಿಂದ ಸಭಾತ್ಯಾಗ:

ಇದಕ್ಕೆ ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಬಳಿಕ ಕಾಂಗ್ರೆಸ್‌-ಬಿಜೆಪಿ ಸದಸ್ಯರ ನಡುವೆ ಕೆಲ ಕಾಲ ವಾಕ್ಸಮರ ನಡೆದು ಗಲಾಟೆ ಶುರುವಾಯಿತು. ಬಳಿಕ ಸ್ಪೀಕರ್‌ ಖಾದರ್‌ ಅವರು ಸದನವನ್ನು 10 ನಿಮಿಷ ಮುಂದೂಡಿದರು. ಬಳಿಕ ಕಲಾಪ ಆರಂಭಗೊಂಡರೂ ಗದ್ದಲ ಮುಂದುವರೆಯಿತು. ಗೃಹ ಸಚಿವರ ಉತ್ತರ ನಮಗೆ ತೃಪ್ತಿ ನೀಡಲಿಲ್ಲ ಎಂದು ಬಿಜೆಪಿ-ಜೆಡಿಎಸ್‌ ಸದಸ್ಯರು ಸಭಾತ್ಯಾಗ ಮಾಡಿ ಹೊರ ನಡೆದರು.

Read more Articles on