ಮೆಡಿಕಲ್‌ ತ್ಯಾಜ್ಯ ಎಸೆದವರ ವಿರುದ್ಧ ಕ್ರಮ: ಡಾ.ಎಂ.ಬಿ. ಪಾಟೀಲ

| Published : Jul 02 2025, 11:49 PM IST

ಸಾರಾಂಶ

ಗುಳೇದಗುಡ್ಡ ಪಟ್ಟಣದ ಕಂದಗಲ್ಲ ಹನಮಂತರಾಯರ ಬಯಲು ರಂಗಮಂದಿರ ಆವರಣದಲ್ಲಿ ಅವಧಿ ಮೀರಿದ ಮಾತ್ರೆಗಳು, ಸಿರಿಂಜ್, ಔಷಧ ಬಾಟಲಿಗಳನ್ನು ಎಸೆದವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ಪಟ್ಟಣದ ಕಂದಗಲ್ಲ ಹನಮಂತರಾಯರ ಬಯಲು ರಂಗಮಂದಿರ ಆವರಣದಲ್ಲಿ ಅವಧಿ ಮೀರಿದ ಮಾತ್ರೆಗಳು, ಸಿರಿಂಜ್, ಔಷಧ ಬಾಟಲಿಗಳನ್ನು ಎಸೆದವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ. ಪಾಟೀಲ ಹೇಳಿದರು.

ಗುರುವಾರ ಸ್ಥಳಕ್ಕೆ ಭೇಟಿ ನೀಡಿದ ಅವರು, ಇಲ್ಲಿ ಚೆಲ್ಲಿರುವ ಔಷಧಿಗಳು ಸರ್ಕಾರಿ ಔಷಧಿಗಳಲ್ಲ. ಖಾಸಗಿ ಆಸ್ಪತ್ರೆಗೆ ಸಂಬಂಧಿಸಿವೆ. ಮಾತ್ರೆಗಳು, ಸಿರೇಂಜ್, ಸಲಾಯಿನ್, ಔಷಧಿ ಬಾಟಲ್‌ಗಳು ಸೇರಿದಂತೆ ಆಸ್ಪತ್ರೆಗೆ ಸಂಬಂಧಿಸಿದ ಮೆಡಿಕಲ್‌ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಚೆಲ್ಲುವಂತಿಲ್ಲ. ಮಾತ್ರೆ, ಇಂಜೆಕ್ಷನ್, ಸಲಾಯನ್ ಹೀಗೆ ಯಾವುದೇ ವಸ್ತುಗಳಿರಲಿ. ಅವುಗಳನ್ನು ನಿಗದಿತ ಸ್ಥಳದಲ್ಲಿ ಮಾತ್ರ ವಿಸರ್ಜನೆ ಮಾಡಬೇಕು. ಇಲ್ಲವೆ ಒಂದು ಸ್ಥಳದಲ್ಲಿ ಹಾಕಿ ಸುಡಬೇಕು. ಎಲ್ಲೆಂದರಲ್ಲಿ ಅವಧಿ ಮೀರಿದ ಔಷಧಿ ಎಸೆಯುವಂತಿಲ್ಲ.ಇಲ್ಲಿನ ಎಲ್ಲ ಔಷಧಿ ಪರಿಶೀಲಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಹಾಗೂ ಔಷಧ ನಿಯಂತ್ರಕರ ಗಮನಕ್ಕೆ ತಂದಿದ್ದೇನೆ. ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇನೆ.ಇಲ್ಲಿ ಬಿದ್ದಿರುವ ಔಷಧಿಗಳು ಯಾವ ಆಸ್ಪತ್ರೆಗೆ ಸಂಬಂಧಿಸಿದ್ದು ಎಂದು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ ತಿಳಿಸಿದರು.