ಅಸ್ಪೃಶ್ಯತೆ ನಿಷೇಧ ನಾಮಫಲಕ ಅಳವಡಿಕೆಗೆ ಕ್ರಮ: ಡೀಸಿ

| Published : Aug 24 2024, 01:19 AM IST

ಸಾರಾಂಶ

ಚಾಮರಾಜನಗರದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆಯು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಸ್ಪೃಶ್ಯತೆ ನಿಷೇಧ ನಾಮಫಲಕವನ್ನು ಜಿಲ್ಲೆಯ ಎಲ್ಲ ಹೊಟೇಲ್‌, ದೇವಸ್ಥಾನಗಳಲ್ಲಿ ಅಳವಡಿಸಲು ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಅವರು ಹೇಳಿದರು.

ಜಿಲ್ಲಾಡಳಿತ ಭವನದಲ್ಲಿರುವ ಹಳೇ ಕೆಡಿಪಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ಅಸ್ಪೃಶ್ಯತೆ ನಿಷೇಧ ನಾಮಫಲಕ ಜಿಲ್ಲೆಯಲ್ಲಿ ಹಾಕುವುದಕ್ಕೆ ಆಗ್ರಹಿಸಿದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್‌ ಮಾತನಾಡಿ, ಇದು ರಾಜ್ಯಕ್ಕೆ ಮಾದರಿಯಾಗುವುದಾದರೆ ಆಗಲಿ ಚಾಮರಾಜನಗರ ಜಿಲ್ಲೆಯಿಂದಲೇ ಪ್ರಾರಂಭವಾಗಲಿ ಎಂದು ಹೇಳಿದರು.

ಸಭೆಯಲ್ಲಿ ಮುಖಂಡರು ಮಾತನಾಡಿ, ಹಿಂದುಳಿದ ಜಿಲ್ಲೆಯಾಗಿರುವ ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಆಚರಣೆ ಕೆಲವು ಕಡೆಗಳಲ್ಲಿ ಮುಂದುವರೆದಿದೆ. ಅಸ್ಪೃಶ್ಯತೆ ಆಚರಣೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಮಾದರಿಯಾದ ಕ್ರಮ ವಹಿಸಬೇಕಿದೆ ಎಂದರು.

ಜಿಲ್ಲೆಯಲ್ಲಿರುವ ಎಲ್ಲ ದೇವಾಲಯ, ಹೋಟೆಲ್‌ಗಳಲ್ಲಿ ಅಸ್ಪೃಶ್ಯತೆ ನಿಷೇಧ ಎಂಬ ನಾಮಫಲಕವನ್ನು ಹಾಕಬೇಕು, ನಾಮಫಲಕದಲ್ಲಿ ಅಸ್ಪೃಶ್ಯತೆ ಆಚರಣೆ ಕಂಡುಬಂದರೆ ಅವರ ಆಧಾರ್‌ ಕಾರ್ಡ್‌ ಹಾಗೂ ರೇಷನ್‌ ಕಾರ್ಡ್‌ ರದ್ದು ಪಡಿಸಲಾಗುವುದು ಎಂದು ನಾಮಫಲಕದಲ್ಲಿ ಹಾಕಬೇಕು ಎಂದು ಆಗ್ರಹಿಸಿದರು.

ಎಸ್ಪಿ ಡಾ.ಬಿ.ಟಿ. ಕವಿತಾ ಮಾತನಾಡಿ, ಜಿಲ್ಲೆಯ ಎಲ್ಲ ಭಾಗಗಳಲ್ಲಿ ಸಂಚರಿಸಿ ಪರಿಶಿಷ್ಟ ಸಮುದಾಯದ ಮೇಲೆ ಯಾವುದೇ ದೌರ್ಜನ್ಯಗಳಾಗದಂತೆ ಎಚ್ಚರ ವಹಿಸಲಾಗುತ್ತಿದೆ. ಪ್ರತಿ ತಿಂಗಳು ಸಮುದಾಯದ ಸಮಸ್ಯೆಗಳನ್ನು ಪರಿಹರಿಸಲು ಪರಿಶಿಷ್ಟ ಹಿತರಕ್ಷಣಾ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಅಸ್ಪೃಶ್ಯತೆ ಆಚರಣೆಯಾಗದಂತೆ ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲೆಯ ಹಲವು ಭಾಗಗಳಲ್ಲಿ ಜೀತಪದ್ದತಿಯಿಂದ ವಿಮುಕ್ತರಾದವರಿಗೆ ಪುನರ್ವಸತಿ ಕಲ್ಪಿಸಿರುವುದಿಲ್ಲ. ಜೀತಮುಕ್ತರಾದವರಿಗೆ ಗುರುತಿನ ಚೀಟಿ ಇಲ್ಲದಿರುವುದರಿಂದ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಇವರಿಗೆ ಮೀಸಲಾಗಿದ್ದ ಜಮೀನಿನ ಸಾಗುವಳಿಗೆ ಹಕ್ಕುಪತ್ರ ನೀಡಿದ್ದರೂ ಸದರಿ ಜಮೀನಿನಲ್ಲಿ ಬೇರೆಯವರು ಕೃಷಿ ಮಾಡುತ್ತಿದ್ದಾರೆ. ಸರ್ಕಾರಿ ಜಾಗ ಇರುವೆಡೆ ಸೂಕ್ತ ಜಮೀನು ಕೊಟ್ಟು ಜೀತ ಮುಕ್ತರಿಗೆ ಹಾಗೂ ಪುನರ್ವಸತಿ ಕಲ್ಪಿಸಬೇಕು ಎಂದು ಸಮುದಾಯದ ಮುಖಂಡರು ಸಭೆಯಲ್ಲಿ ತಿಳಿಸಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಡಿಸಿ ಮುಂಬರುವ ಸೆಪ್ಟೆಂಬರ್ ಮಾಹೆಯಲ್ಲಿ ಜಿಲ್ಲಾದ್ಯಂತ ಜೀತಮುಕ್ತ ಜಿಲ್ಲೆ ಅಭಿಯಾನ ಹಮ್ಮಿಕೊಳ್ಳಲಾಗುವುದು. ಅಭಿಯಾನ ಅಂಗವಾಗಿ ಜಿಲ್ಲೆಯ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮಸಭೆ ಏರ್ಪಡಿಸಿ ಜೀತಮುಕ್ತರಿಗೆ ಪುನರ್ವಸತಿ ಕಲ್ಪಿಸಲು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ಸಮುದಾಯದ ಮುಖಂಡರೊಬ್ಬರು ಮಾತನಾಡಿ, ಮುಕ್ಕಡಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ 8 ಜನರು ಜೀತ ವಿಮುಕ್ತರಾಗಿದ್ದಾರೆ. ಇವರಿಗೆ 10 ಸಾವಿರ ಪರಿಹಾರ ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಕ್ಕಿಲ್ಲ. ಮನೆ, ಜಮೀನು ಕೊಡಿಸುವಂತೆ ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಡಿಸಿ ಇದನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರಿ ಜಾಗದಲ್ಲಿ ಪುನರ್ವಸತಿ ಕಲ್ಪಿಸಲು ಕ್ರಮವಹಿಸಲಾಗುವುದು. ಒಂದು ವೇಳೆ ಸರ್ಕಾರಿ ಜಾಗ ಇಲ್ಲದಿದ್ದರೆ ಖಾಸಗಿಯವರಿಂದ ಜಾಗ, ಜಮೀನು ಖರೀದಿಸಿ ಕೊಡಲಾಗುವುದು. ಅಲ್ಲದೆ ಗ್ರಾಪಂಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಜೀತಮುಕ್ತರಿಗೆ ಆದ್ಯತೆ ನೀಡಲಾಗುವುದು. ಈ ಬಗ್ಗೆ ಸಭಾ ನಡಾವಳಿಗಳಲ್ಲಿ ನಮೂದಿಸಿ ಕಾರ್ಯರೂಪಕ್ಕೆ ತರಲು ತಿಳಿಸಲಾಗುವುದು ಎಂದರು.

ತಾಲೂಕಿನ ಬಸವನಪುರ ಗ್ರಾಮದಲ್ಲಿರುವ 3.20 ಎಕರೆ ಸರ್ಕಾರಿ ಜಾಗದ ಪೈಕಿ 1 ಎಕರೆ ಜಾಗವನ್ನು ಪರಿಶಿಷ್ಟ ಜನಾಂಗದ ಸ್ಮಶಾನಕ್ಕೆ ಮಂಜೂರಾಗಿದ್ದರೂ ಅಧಿಕಾರಿಗಳು ಅದನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಯಣಗುಂಬ ಗ್ರಾಮದಲ್ಲಿ 5 ಜನರಿಗೆ ಸಾಗುವಳಿ ಚೀಟಿ ಇದ್ದರು ಖಾತೆ ಮಾಡಿಕೊಟ್ಟಿಲ್ಲ. ಅಲ್ಲದೇ ಹನೂರು ತಾಲೂಕಿನ ಅಂಬಿಕಾಪುರ ಗ್ರಾಮದಲ್ಲಿ ಸ್ಮಶಾನ ಅಭಿವೃದ್ಧಿಪಡಿಸಿಲ್ಲ. ದಲಿತ ಕುಟುಂಬಗಳಿಗೆ ಗ್ರಾಮದಲ್ಲಿರುವ 1 ಎಕರೆ 53ಸೆಂಟ್‌ ಜಾಗದಲ್ಲಿ ನಿವೇಶನ ನೀಡುವ ಕುರಿತ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ನೀಡುವಂತೆ ತಹಸೀಲ್ದಾರ್‌ಗೆ ನಿರ್ದೇಶನ ನೀಡಿದರು.

ಸಿದ್ದಯ್ಯನಪುರ ಗ್ರಾಮದಲ್ಲಿ ಕಳೆದ 10 ವರ್ಷಗಳಿಂದಲೂ ಸಾಗುವಳಿ ಮಾಡುತ್ತಿದ್ದು ಈ ಸಂಬಂಧ ತಹಸೀಲ್ದಾರ್‌ಗೆ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ವಿದ್ಯಾರ್ಥಿನಿಲಯಗಳು ಊರಿನ ಹೊರಭಾಗದಲ್ಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಿಬರಲು ಕಷ್ಟವಾಗುತ್ತಿದೆ. ನಗರದ ಕೇಂದ್ರ ಭಾಗಕ್ಕೆ ವಿದ್ಯಾರ್ಥಿ ನಿಲಯವನ್ನು ಸ್ಥಳಾಂತರಿಸಿಕೊಡಬೇಕು ಎಂಬ ಮುಖಂಡರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಿನೋಟಿಫಿಕೇಶನ್‌ಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಅಲ್ಲದೆ ಸಿದ್ದಯ್ಯನಪುರ ಕಂದಾಯ ಗ್ರಾಮಕ್ಕೆ ಪ್ರಸ್ತಾವನೆ ಕೂಡ ಕಳುಹಿಸಿಕೊಡಲಾಗಿದೆ. ವಿದ್ಯಾರ್ಥಿನಿಲಯಗಳ ಸಂಬಂಧ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ನಗರದ ಮಧ್ಯಭಾಗದಲ್ಲಿ ವಿದ್ಯಾರ್ಥಿನಿಲಯಗಳ ಸ್ಥಾಪನೆಗೆ ಒತ್ತು ನೀಡಿ ಮೂಲಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸಮುದಾಯದ ಮಕ್ಕಳಿಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳ ಸಂಖ್ಯೆಯನ್ನು ಹೆಚ್ಚಿಸಲು ಆದ್ಯತೆ ನೀಡುವಂತೆ ಮುಖಂಡರೊಬ್ಬರ ಮನವಿಗೆ ಉತ್ತರಿಸಿದ ಡಿಸಿ ವಿಷಯವನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆ ಪರಿಹರಿಸಲಾಗುವುದು ಎಂದರು. ಚಾಮರಾಜನಗರ ನಗರಸಭಾ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಬೇಕು. ಜನರಿಗೆ ಬ್ಯಾಂಕುಗಳಲ್ಲಿ ದೊರೆಯುವ ಸಾಲ ಸೌಲಭ್ಯ ಸಕಾಲದಲ್ಲಿ ಸಿಗುತ್ತಿಲ್ಲ. ಇದರಿಂದ ಪರಿಶಿಷ್ಟ ಸಮುದಾಯದ ಅರ್ಥಿಕ ಸಬಲೀಕರಣ ಕುಂಠಿತವಾಗಿದೆ ಎಂದು ಮುಖಂಡರು ತಿಳಿಸಿದರು. ಸಮುದಾಯ ಭವನದ ಮೂಲಸೌಲಭ್ಯ, ಬದನಗುಪ್ಪೆ-ಕೆಲ್ಲಂಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಉದ್ಯೋಗಗಳಿಗೆ ಪರಿಶಿಷ್ಟರ ಕಡೆಗಣನೆ, ಜಾಗದ ಒತ್ತುವರಿ, ಸಂಚಾರಕ್ಕೆ ಸುಗಮ ರಸ್ತೆ, ಸ್ಮಶಾನಗಳ ಅಭಿವೃದ್ಧಿ, ಪರಿಶಿಷ್ಟಜಾತಿ ಪ್ರಮಾಣಪತ್ರದ ದುರುಪಯೋಗ, ಭೂ ಮಂಜೂರಾತಿ ನಿಯಮಗಳ ದುರುಪಯೋಗ, ಸಾಗುವಳಿ ನೀಡದಿರುವಿಕೆ ಸೇರಿದಂತೆ ಹಲವು ಸಮಸ್ಯೆಗಳು ಸಭೆಯಲ್ಲಿ ವಿವರವಾಗಿ ಚರ್ಚಿತವಾದವು. ಜಿಪಂ ಸಿಇಒ ಮೋನಾ ರೋತ್, ಎಡಿಸಿ ಗೀತಾ ಹುಡೇದ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಬಿಂದ್ಯಾಶ್ರೀ, ವಿವಿಧ ಇಲಾಖೆಗಳ ಅಧಿಕಾರಿಗಳು, ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.