ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ರಾಜ್ಯದಲ್ಲಿ ಈಗಾಗಲೇ ಪೊಲೀಸ್ ಸಿಬ್ಬಂದಿ ನೇಮಕ ಕಾರ್ಯ ನಡೆದಿದೆ, ತರಬೇತಿ ನಂತರ ಅಗತ್ಯವಿರುವ ಜಿಲ್ಲೆಗಳಲ್ಲಿ ನಿಯೋಜನೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭರವಸೆ ನೀಡಿದ್ದಾರೆ.ಕುಶಾಲನಗರದಲ್ಲಿ ಕಾಂಗ್ರೆಸ್ ಪ್ರಮುಖ ಮಂಜುನಾಥ್ ಗುಂಡೂರಾವ್ ಅವರ ನಿವಾಸಕ್ಕೆ ಗುರುವಾರ ಸಚಿವರು ಭೇಟಿ ನೀಡಿದ ಸಂದರ್ಭ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ಪಿ ಶಶಿಧರ್, ಕೆಪಿಸಿಸಿ ವಕ್ತಾರ ನಟೇಶ್ ಗೌಡ ಮತ್ತು ಪ್ರಮುಖರಾದ ಕೆ ಪಿ ಚಂದ್ರಕಲಾ ಸಚಿವರಿಗೆ ಸ್ಥಳೀಯ ಪೊಲೀಸ್ ಅಧಿಕಾರಿ ಸಿಬ್ಬಂ ಸಮಸ್ಯೆಗಳ ಬಗ್ಗೆ ಮಾಹಿತಿ ಒದಗಿಸಿದರು.
ಪ್ರತಿಕ್ರಿಯಿಸಿದ ಸಚಿವರು, ಚುನಾವಣಾ ನೀತಿ ಸಂಹಿತೆ ತೆರವಾದ ನಂತರ ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿ ಪಡೆದು ಯೋಜನೆ ರೂಪಿಸಲಾಗುವುದು ಎಂಬ ಆಶ್ವಾಸನೆ ನೀಡಿದರು.ಕೊಡಗು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಸಿಬ್ಬಂದಿ ಕೊರತೆ, ಠಾಣೆಗಳಿಗೆ ಸ್ವಂತ ಕಟ್ಟಡ ನಿರ್ಮಾಣ, ಅಧಿಕಾರಿ, ಸಿಬ್ಬಂದಿ ವಸತಿ ಗೃಹ ನಿರ್ಮಾಣ ಇತ್ಯಾದಿ ವಿಷಯಗಳ ಬಗ್ಗೆ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಮಾಹಿತಿ ಒದಗಿಸಲಾಯಿತು.ಮಂಜುನಾಥ್ ಗುಂಡೂರಾವ್ ಮತ್ತು ಕೆ ಪಿ ಚಂದ್ರಕಲಾ ಅವರು ಕುಶಾಲನಗರ ಸಮೀಪದ ಕೂಡ್ಲೂರು ವ್ಯಾಪ್ತಿಯಲ್ಲಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಸುಮಾರು 2.5 ಎಕರೆ ಜಾಗವನ್ನು ರೇಷ್ಮೆ ಇಲಾಖೆಯಿಂದ ಪೊಲೀಸ್ ಇಲಾಖೆಗೆ ವರ್ಗಾಯಿಸುವ ಪ್ರಕ್ರಿಯೆ ಬಗ್ಗೆ ಸಚಿವರಿಗೆ ಮಾಹಿತಿ ಒದಗಿಸಿದರು.
ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ ಏರಿದ್ದು, ಸಿಬ್ಬಂದಿಗಳ ಕೊರತೆಯೊಂದಿಗೆ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ವಸತಿ ಗೃಹಗಳ ನಿರ್ಮಾಣದ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮದ ಉತ್ತಪ್ಪ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರ್ ನಾಥ್, ಮಾಜಿ ಎಂಎಲ್‌ಸಿ ವೀಣಾ ಅಚ್ಚಯ್ಯ, ಪ್ರಮುಖರಾದ ಪ್ರಮೋದ್ ಮುತ್ತಪ್ಪ, ಜೋಸೆಫ್ ವಿಕ್ಟರ್ ಸೋನ್ಸ್, ಪುರಸಭೆ ಸದಸ್ಯರು, ಜನಪ್ರತಿನಿಧಿಗಳು, ಕಾರ್ಯಕರ್ತರು ಇದ್ದರು.