ಚುನಾವಣಾ ಕರ್ತವ್ಯ ನಿರ್ಲಕ್ಷಿಸಿದರೆ ಕ್ರಮ

| Published : Feb 22 2024, 01:50 AM IST

ಸಾರಾಂಶ

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಲೋಕಸಭಾ ಚುನಾವಣೆ ಕಾರ್ಯಗಳಿಗೆ ನೂತನವಾಗಿ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳ, ಚುನಾವಣಾ ಅಧಿಕಾರಿ, ಸಿಬ್ಬಂದಿ ಸಭೆ ನಡೆಯಿತು.

ಧಾರವಾಡ:ಲೋಕಸಭಾ ಚುನಾವಾಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಚುನಾವಣಾ ಕರ್ತವ್ಯದ ಅಧಿಕಾರಿ, ಸಿಬ್ಬಂದಿ ಜಿಲ್ಲಾ ಚುನಾವಣಾಧಿಕಾರಿಗಳ ಪೂರ್ವಾನುಮತಿ ಇಲ್ಲದೆ ರಜೆ ಅಥವಾ ಗೈರು ಹಾಜರಾಗಬಾರದು. ಅನುಮತಿ ಪಡೆಯದೇ ಗೈರಾದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು. ಅಂತಹವರನ್ನು ಜಿಲ್ಲೆಯಿಂದ ಬಿಡುಗಡೆ ಮಾಡಿ ಚುನಾವಣಾ ಆಯೋಗಕ್ಕೆ ಶಿಸ್ತು ಕ್ರಮಕೈಗೊಳ್ಳಲು ಶಿಫಾರಸು ಮಾಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯಪ್ರಭು ಎಚ್ಚರಿಕೆ ನೀಡಿದರು.

ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಲೋಕಸಭಾ ಚುನಾವಣೆ ಕಾರ್ಯಗಳಿಗೆ ನೂತನವಾಗಿ ನಿಯೋಜಿತರಾಗಿರುವ ನೋಡಲ್ ಅಧಿಕಾರಿಗಳ, ಚುನಾವಣಾ ಅಧಿಕಾರಿ, ಸಿಬ್ಬಂದಿ ಸಭೆಯಲ್ಲಿ ಮಾತನಾಡಿದರು.

ಚುನಾವಣಾ ಸಂಬಂಧಿತ ಎಲ್ಲ ಕಾರ್ಯಗಳು ಸುಗಮವಾಗಿ, ಕಾಲಮಿತಿಯಲ್ಲಿ ನಡೆಸಲು ವಿವಿಧ ವಿಭಾಗಗಳಿಗೆ ಜಿಲ್ಲೆಯ 21 ಜನ ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ತನ್ನ ಅಧೀನದಲ್ಲಿ ಕರ್ತವ್ಯ ನಿರ್ವಹಿಸಲು ಅಧಿಕಾರಿ ಮತ್ತು ಸಿಬ್ಬಂದಿಯನ್ನು ಅವರ ತಂಡದ ಸದಸ್ಯರನ್ನಾಗಿ ನೇಮಿಸಿದೆ. ಪ್ರತಿ ನೊಡಲ್ ಅಧಿಕಾರಿ ತನ್ನ ವಿಭಾಗದ ಜವಾಬ್ದಾರಿ ಕುರಿತು ತರಬೇತಿ ನೀಡಿ, ತನ್ನ ತಂಡವನ್ನು ಸುಸಜ್ಜಿತಗೊಳಿಸುವುದು ಅವರ ಕರ್ತವ್ಯ. ಪ್ರತಿಯೊಬ್ಬ ಅಧಿಕಾರಿ ತನಗೆ ನಿಯೋಜಿಸಿದ ಕೆಲಸದ ಕಾನೂನು, ಐಪಿಸಿ ತಿಳಿದಿರಬೇಕು. ತನ್ನ ಜವಾಬ್ದಾರಿ ಮತ್ತು ಕರ್ತವ್ಯ ಅರ್ಥೈಸಿಕೊಂಡು ಕೆಲಸ ಮಾಡಲು ತಿಳಿಸಿದರು.

ಫ್ಲಾಯಿಂಗ್‌ ಸ್ಕಾಡ್‌ ತಂಡ (ಎಫ್‌ಎಸ್‌ಟಿ), ಸ್ಟ್ಯಾಟಿಕ್‌ ಸರ್ವೆಲೆನ್ಸ್‌ ತಂಡ (ಎಸ್‌ಎಸ್‌ಟಿ) ಹಾಗೂ ಇತರ ತಂಡಗಳ ಮಧ್ಯ ಪರಸ್ಪರ ಸಮನ್ವಯ, ಸಂವಹನ ಇರಬೇಕು. ಚುನಾವಣಾ ಕಾರ್ಯಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕಣ್‌ ತಪ್ಪಿನಿಂದಲೂ ಯಾವುದೇ ಚುನಾವಣಾ ಕರ್ತವ್ಯ ಲೋಪವಾಗಬಾರದು. ಜಿಲ್ಲಾ ಚುನಾವಣಾ ಆಯೋಗಕ್ಕೆ ಸಾರ್ವಜನಿಕರು, ರಾಜಕೀಯ ಪಕ್ಷಗಳು, ಮಾಧ್ಯಮಗಳು ಮತ್ತು ಇತರ ಮೂಲಗಳಿಂದಲೂ ಮಾಹಿತಿ ಬರುತ್ತವೆ. ನಾನೂ ಜಿಲ್ಲಾದ್ಯಂತ ಸ್ವತಃ ಪ್ರಯಾಣಿಸಿ ನಿಯೋಜಿತ ತಂಡಗಳ ಕಾರ್ಯವನ್ನು ಪರಿಶೀಲಿಸುತ್ತೇನೆ ಎಂದರು.

ಚುನಾವಣಾ ಸಹಾಯವಾಣಿ, ಕಂಟ್ರೋಲ್ ರೂಂ ಸರಿಯಾಗಿ ಕೆಲಸ ಮಾಡುವಂತೆ ನೋಡಿಕೊಳ್ಳಬೇಕು. ಯಾವುದೇ ಚುನಾವಣಾ ಸಿಬ್ಬಂದಿ ರಜೆ, ಗೈರಿನ ಬಗ್ಗೆ ಆಯಾ ನೋಡಲ್ ಅಧಿಕಾರಿಗಳು ನಿಗಾವಹಿಸಬೇಕು. ಉದಾಸೀನ ತೋರುವ, ನಿಯಮ ಮೀರುವ ಸಿಬ್ಬಂದಿ, ಅಧಿಕಾರಿಗಳಿಗೆ ಆಯಾ ನೋಡಲ್ ಅಧಿಕಾರಿಗಳು, ನೋಟಿಸ್ ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಲು ತಮ್ಮ ವರದಿಯೊಂದಿಗೆ ಶಿಸ್ತುಕ್ರಮಕ್ಕಾಗಿ ಜಿಲ್ಲಾ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂದು ಜಿಲ್ಲಾಧಿಕಾರಿಗಳು, ಅಧಿಕಾರಿಗಳಿಗೆ ನಿಯಮಾನುಸಾರ ಮತ್ತು ಅಧಿಕಾರಯುತವಾಗಿ ಚುನಾವಣಾ ಕಾರ್ಯ ನಿರ್ವಹಿಸಲು ದಂಡಾಧಿಕಾರಿಗಳಿಗೆ ಅಧಿಕಾರವಿದೆ ಎಂದರು.

ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಸಭೆ ನಿರ್ವಹಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ, ಉಪ ಪೊಲೀಸ್ ಆಯುಕ್ತ ರಾಜೀವ ಎಂ. ಮಾತನಾಡಿದರು. ನೋಡಲ್ ಅಧಿಕಾರಿಗಳು, ಜಿಲ್ಲಾಧಿಕಾರಿಗಳ ಕಚೇರಿ ಚುನಾವಣಾ ತಹಸೀಲ್ದಾರರು ಇದ್ದರು.