ಸಾರಾಂಶ
ಬಳ್ಳಾರಿ: ಪೌರ ಕಾರ್ಮಿಕರು ನೈಜ ಕಾಯಕಯೋಗಿಗಳು, ಸ್ವಚ್ಛತಾ ರೂವಾರಿಗಳು. ಸಂದಿಗ್ಧ ಸ್ಥಿತಿಯಲ್ಲಿಯೂ ಬಿಡುವಿಲ್ಲದ ನೈರ್ಮಲೀಕರಣ ಕಾರ್ಯ ಕೈಗೊಳ್ಳುತ್ತಿರುವ ಅವರ ಸೇವೆ ಅನನ್ಯವಾದದ್ದು ಎಂದು ಮೇಯರ್ ಮುಲ್ಲಂಗಿ ನಂದೀಶ್ ಶ್ಲಾಘಿಸಿದರು.ಮಹಾನಗರ ಪಾಲಿಕೆ ವತಿಯಿಂದ ನಗರದ ಕಮ್ಮ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಗರದ ಸ್ವಚ್ಛತೆ ಕಾಪಾಡುವ ಗುರುತರ ಜವಾಬ್ದಾರಿ ಪೌರಕಾರ್ಮಿಕರ ಮೇಲಿದೆ. ಗಾಳಿ, ಮಳೆ, ಬಿಸಿಲು, ಚಳಿ ಎನ್ನದೇ ದಿನನಿತ್ಯ ನಸುಕಿನಜಾವದಿಂದ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರು ತಮ್ಮ ಕಾಯಕದ ಬಗ್ಗೆ ನಿರಾಸಕ್ತಿ ತೋರದೆ, ಮನಪೂರ್ವಕವಾಗಿ, ಶ್ರದ್ಧೆಯಿಂದ ಕಾಯಕ ಮಾಡಬೇಕು ಎಂದು ಹೇಳಿದರು.ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 334 ಖಾಯಂ ಪೌರಕಾರ್ಮಿಕರು ಇದ್ದಾರೆ. ಅದೇರೀತಿಯಾಗಿ 190 ಪೌರ ಕಾರ್ಮಿಕರು ನೇರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. 150 ಹೊರಗುತ್ತಿಗೆ ಮತ್ತು 90 ಪೌರ ಕಾರ್ಮಿಕರು ಒಳ ಚರಂಡಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಪೌರ ಕಾರ್ಮಿಕರಿದ್ದು, ಹೊರ ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸುವ ಕುರಿತು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪೌರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿವೇತನ, ಉಚಿತ ಲ್ಯಾಪ್‌ಟಾಪ್‌ಗಳನ್ನು ಪಾಲಿಕೆಯ ವಿಶೇಷ ಅನುದಾನದಲ್ಲಿ ವಿತರಿಸಲಾಗುತ್ತದೆ. ಪೌರ ಕಾರ್ಮಿಕರು ಪ್ರತಿ ಮೂರು ತಿಂಗಳಿಗೊಮ್ಮೆ ಉಚಿತ ತಪಾಸಣಾ ಚಿಕಿತ್ಸೆಗೆ ಒಳಗೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಮೇಯರ್ ನಂದೀಶ್ ಸಲಹೆ ನೀಡಿದರು.ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಎನ್. ಮಾತನಾಡಿ, ಯಾವುದೇ ಹುದ್ದೆ ಮೇಲು-ಕೀಳು ಎಂಬ ಭೇದ-ಭಾವವಿಲ್ಲ. ದೇಶ ಸೇವೆ-ಈಶ ಸೇವೆ ಎನ್ನುವ ರೀತಿಯಲ್ಲಿ ಪ್ರತಿಯೊಂದು ಹುದ್ದೆಯು ತನ್ನದೇ ಆದ ಮಹತ್ವ ಹೊಂದಿದೆ. ಪೌರ ಕಾರ್ಮಿಕರಂತಹ ವ್ಯಕ್ತಿಗಳನ್ನು ಪ್ರತಿವರ್ಷ ಗೌರವಿಸುವುದು ಜನಮೆಚ್ಚುವ ಕಾರ್ಯವಾಗಿದೆ ಎಂದು ಹೇಳಿದರು.
ನಗರ ಸ್ವಚ್ಛತೆಯಲ್ಲಿ ಪೌರ ಕಾರ್ಮಿಕರ ಪಾತ್ರ ಪ್ರಮುಖವಾಗಿದೆ. ನಮ್ಮ ಸುತ್ತ-ಮುತ್ತಲಿನ ಪರಿಸರ ಸ್ವಚ್ಛತೆ ಕಾಪಾಡುವಿಕೆಗೆ ನಾವೆಲ್ಲರೂ ಸೇರಿ ಕೈಜೋಡಿಸಬೇಕಿದೆ ಎಂದರು.ಪ್ರತಿದಿನ ಕೆಲಸದ ಒತ್ತಡದಲ್ಲಿರುವ ಕಾರ್ಮಿಕರಿಗೆ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಮತ್ತಷ್ಟು ಉತ್ಸಾಹ ಮೂಡುತ್ತದೆ ಎಂದು ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ ಕಾರ್ಮಿಕರಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ಕ್ರೀಡಾಕೂಟದ ಅಂಗವಾಗಿ ಕ್ರಿಕೆಟ್, ಥ್ರೋಬಾಲ್, ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.ಉಪಮೇಯರ್ ಡಿ.ಸುಕುಂ, ವಿವಿಧ ಸ್ಥಾಯಿ ಸಮಿತಿಯ ಸದಸ್ಯರಾದ ಸುರೇಖಾ ಮಲ್ಲನಗೌಡ, ಈರಮ್ಮ ಸೂರಿ, ಪದ್ಮರೋಜ ಸೇರಿದಂತೆ ಪಾಲಿಕೆಯ ಸದಸ್ಯರು, ಅಧಿಕಾರಿ, ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.