ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಕಲಬುರಗಿ ವಿಭಾಗದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿನ ಪಶು ಸಂಗೋಪನಾ ಇಲಾಖೆಯಲ್ಲಿ ಅಧಿಕಾರಿ, ಸಿಬ್ಬಂದಿ ಕೊರತೆ ಹೆಚ್ಚಾಗಿದ್ದು, ಈ ಹಿನ್ನೆಲೆ ಜಿಲ್ಲೆವಾರು ಹುದ್ದೆಗಳ ಮಾಹಿತಿ ಪಡೆದು, ಜಾನುವಾರುಗಳ ಸಂಖ್ಯೆಗಾನುಗುಣವಾಗಿ ಹೊರಗುತ್ತಿಗೆಯ ಆಧಾರದ ಮೇಲೆ ಪಶು ವೈದ್ಯರು, ಸಿಬ್ಬಂದಿ ವರ್ಗದವರನ್ನು ನೇಮಕ ಮಾಡಿಕೊಳ್ಳುವುದಕ್ಕೆ ಕ್ರಮ ವಹಿಸಲಾಗುವುದು ಎಂದು ಪಶು ಸಂಗೋಪನಾ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ ತಿಳಿಸಿದರು.ಸ್ಥಳೀಯ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆಯ ಕಲಬುರಗಿ ವಿಭಾಗದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಶು ಸಂಗೋಪನಾ ಇಲಾಖೆಯಿಂದ ಜಾನುವಾರುಗಳಿಗೆ ಔಷಧಿ ಲಭ್ಯತೆ, ವೈದ್ಯಕೀಯ ಸೌಲಭ್ಯ, ಸಂಚಾರಿ ಪಶು ಚಿಕಿತ್ಸಾ ವಾಹನಗಳ ನಿರ್ವಹಣೆ, ಲಸಿಕೆ, ಮೇವು ಸಂಗ್ರಹಣೆ ಸೇರಿದಂತೆ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮಗಳು ವಹಿಸಬೇಕು ಎಂದರು.
ಪಶು ಸಂಗೋಪನೆ ಇಲಾಖೆ ಮೂಲಕ ಜಾರಿಗೆ ತಂದಿರುವ ಸರ್ಕಾರದ ಜನಪರ ಯೋಜನೆಗಳ ಸಂಪೂರ್ಣ ಮಾಹಿತಿಯನ್ನು ರೈತರಿಗೆ ತಿಳಿಸುವ ಮೂಲಕ ಯೋಜನೆಯ ಸೌಲಭ್ಯವನ್ನು ಸದುಪಯೋಗ ಪಡೆದುಕೊಳ್ಳುವಂತೆ ತಿಳಿ ಹೇಳಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆ ನೀಡಿ:
ಜಾನುವಾರುಗಳ ಲಸಿಕಾ ಕಾರ್ಯಕ್ರಮಗಳನ್ನು ಮುಂಬರುವ ದಿನಗಳಲ್ಲಿ ಜಾನುವಾರುಗಳು ರೋಗಕ್ಕೆ ತುತ್ತಾಗದಂತೆ ತಡೆಯಲು ಕಡ್ಡಾಯವಾಗಿ ಜಾನುವಾರುಗಳಿಗೆ ಲಸಿಕೆಯನ್ನು ನೀಡಬೇಕು. ಅಲ್ಲದೆ ಲಸಿಕಾ ಕಾರ್ಯಕ್ರಮದಲ್ಲಿ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳು ಶೇ.100ರಷ್ಟು ಸಾಧನೆ ಮಾಡಬೇಕೆಂದು ಕಲಬುರಗಿ ವಿಭಾಗದ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.ಸಭೆಯಲ್ಲಿ ಶಾಸಕ ಡಾ.ಶಿವರಾಜ ಪಾಟೀಲ್, ಇಲಾಖೆ ಆಯಕ್ತೆ ರೂಪಾ, ನಿರ್ದೇಶಕ ಡಾ.ಮಂಜುನಾಥ ಪಾಳೇಗಾರ, ಅಪರ ನಿರ್ದೇಶಕ ಡಾ.ಪ್ರಸಾದ ಮೂರ್ತಿ ಸೇರಿ ಕಲಬುರಗಿ ವಿಭಾಗದ ಏಳು ಜಿಲ್ಲೆಗಳ ಪಶು ಸಂಗೋಪನಾ ಮತ್ತು ರೇಷ್ಮೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹಾಜರಿದ್ದರು.ಈ ಭಾಗದಲ್ಲಿ ರೇಷ್ಮೆ ಬೆಳೆಯಲು ಉತ್ತೇಜನ ನೀಡಿ: ಕಲಬುರಗಿ ವಿಭಾಗದ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಕುಸಿತವಾದಾಗ ಪರ್ಯಾಯ ಕೃಷಿ ಪದ್ಧತಿ ಅನುಸರಿಸುವ ಅಗತ್ಯವಿದ್ದು, ರೇಷ್ಮೆ ಕೃಷಿ ರೈತರಿಗೆ ಲಾಭದಾಯಕವಾಗಿದ್ದು, ರೈತರಿಗೆ ಹೆಚ್ಚಿನ ಮಟ್ಟದಲ್ಲಿ ಮಾಹಿತಿ ನೀಡಿ ರೇಷ್ಮೆ ಬೆಳೆಯಲು ಉತ್ತೇಜನ ನೀಡಬೇಕೆಂದು ಸಚಿವ ಕೆ.ವೆಂಕಟೇಶ ಅವರು ಸೂಚನೆ ನೀಡಿದರು.
ರಾಮನಗರ, ಕೋಲಾರ, ದೊಡ್ಡಬಳ್ಳಾಪೂರ, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ರೈತರು ರೇಷ್ಮೆ ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಆದರೆ ಈ ಕಲಬುರಗಿ ಭಾಗದ ಜಿಲ್ಲೆಯಲ್ಲಿ ಮಾತ್ರ ಮಾಹಿತಿ ಕೊರತೆಯಿಂದ ರೇಷ್ಮೆ ಬೆಳೆಗಳ ಬೆಳೆಯಲು ರೈತರು ಹಿಂದೇಟು ಹಾಕುತ್ತಿದ್ದು, ಸರಿಯಾಗಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಪೂರ್ಣ ಪ್ರಮಾಣದಲ್ಲಿ ಕಲಬುರಗಿ ಭಾಗದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಗಳನ್ನು ಬೆಳೆಯಲು ಕ್ರಮಕೈಗೊಳ್ಳಬೇಕು ಎಂದರು.ನರೇಗಾ ಯೋಜನೆಯಡಿ ರೇಷ್ಮೆ ಬೆಳೆಯಲು ರೈತರಿಗೆ ನೆರವು ನೀಡಲಾಗುತ್ತಿದ್ದು, ಈ ಬಗ್ಗೆ ಕಲಬುರಗಿ ಭಾಗದಲ್ಲಿ ಹೆಚ್ಚಿನ ಮಟ್ಟದಲ್ಲಿ ರೈತರಿಗೆ ಮಾಹಿತಿ ನೀಡಿ, ರೇಷ್ಮೆ ಬೆಳೆಯಲು ರೈತರಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ರೇಷ್ಮೆ ಬೆಳೆಯಲು ರೈತರನ್ನು ಭೇಟಿ ಮಾಡಿ ರೇಷ್ಮೆ ಬೆಳೆಯಲು ಸರ್ಕಾರದ ವತಿಯಿಂದ ದೊರೆಯುವ ಸೌಲಭ್ಯಗಳ ಕುರಿತು ಅವರಿಗೆ ಮಾಹಿತಿ ನೀಡಬೇಕೆಂದು ಹೇಳಿದರು.