ಪಾರದರ್ಶಕ ಚುನಾವಣೆ ಪ್ರಕ್ರಿಯೆಗೆ ಕ್ರಮ: ಜಿಲ್ಲಾಧಿಕಾರಿ

| Published : Apr 24 2024, 02:23 AM IST

ಪಾರದರ್ಶಕ ಚುನಾವಣೆ ಪ್ರಕ್ರಿಯೆಗೆ ಕ್ರಮ: ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಮಂಗಳವಾರ ಚುನಾವಣಾ ವೀಕ್ಷಕರೊಂದಿಗೆ ಭೇಟಿ ನೀಡಿದ ಅವರು ಡಿಮಸ್ಟರಿಂಗ್ ಹಾಗೂ ಮತ ಏಣಿಕೆ ಕಾರ್ಯಗಳ ಸಿದ್ಧತೆಗಳ ಕುರಿತು ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ಲೋಕಸಭಾ ಚುನಾವಣೆ ಮೇ 7ರಂದು ಜರುಗಲಿದ್ದು, ಮತಗಳ ಏಣಿಕಾ ಕಾರ್ಯ ಜೂ. 4ರಂದು ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಕಟ್ಟಡದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಚಲಾವಣೆಗೊಂಡ ಮತಯಂತ್ರಗಳ ಸಂಗ್ರಹಾ ಕೊಠಡಿ (ಸ್ಟ್ರಾಂಗ್ ರೂಂ) ಹಾಗೂ ಮತಗಳ ಏಣಿಕಾ ಕಾರ್ಯಕ್ಕೆ ಕೈಗೊಳ್ಳಲಾಗುತ್ತಿರುವ ಸಿದ್ಧತೆಗಳ ಕುರಿತು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಚುನಾವಣಾ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರಿಗೆ ಮಾಹಿತಿ ನೀಡಿ ಮನವರಿಕೆ ಮಾಡಿಕೊಟ್ಟರು.

ಬಳ್ಳಾರಿ ನಗರದ ರಾವ್ ಬಹದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಮಂಗಳವಾರ ಚುನಾವಣಾ ವೀಕ್ಷಕರೊಂದಿಗೆ ಭೇಟಿ ನೀಡಿದ ಅವರು ಡಿಮಸ್ಟರಿಂಗ್ ಹಾಗೂ ಮತ ಏಣಿಕೆ ಕಾರ್ಯಗಳ ಸಿದ್ಧತೆಗಳ ಕುರಿತು ಚುನಾವಣಾ ವೀಕ್ಷಕರಿಗೆ ಮಾಹಿತಿ ನೀಡಿದರು.

ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆ ಪ್ರಕ್ರಿಯೆಗಳನ್ನು ಅತ್ಯಂತ ಪಾರದರ್ಶಕವಾಗಿ ಕೈಗೊಳ್ಳಲಾಗುತ್ತಿದೆ. ಲೋಕಸಭೆ ಚುನಾವಣೆ ನಿಮಿತ್ತ ಮೇ 7ರಂದು ಮತದಾನ ನಡೆಯಲಿದ್ದು, ಅದೇ ದಿನ ಸಂಜೆ ಮತದಾನ ಪ್ರಕ್ರಿಯೆ ಮುಗಿದ ಬಳಿಕ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಬಳ್ಳಾರಿ (ಗ್ರಾಮೀಣ), ಬಳ್ಳಾರಿ (ನಗರ), ಸಂಡೂರು ಹಾಗೂ ಕೂಡ್ಲಿಗಿ ಸೇರಿದಂತೆ ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಕಾಲೇಜು ಕಟ್ಟಡದಲ್ಲಿಯೇ ಪ್ರತ್ಯೇಕ ಕೊಠಡಿಗಳಲ್ಲಿ ಸಂಗ್ರಹಿಸಲಾಗುವುದು. ಮತಯಂತ್ರಗಳನ್ನು ಅತ್ಯಂತ ಭದ್ರತೆಯಲ್ಲಿ, ನಿಯಮಾನುಸಾರ ಇರಿಸಲಾಗುವುದು ಎಂದರು.ಮತಗಳ ಏಣಿಕಾ ಕಾರ್ಯ ಜೂ. 4ರಂದು ಇದೇ ಕಾಲೇಜಿನ ಕಟ್ಟಡದಲ್ಲಿ ನಡೆಯಲಿದ್ದು, ಚುನಾವಣಾ ಆಯೋಗದ ಮಾರ್ಗಸೂಚಿಯನುಸಾರ ಇದಕ್ಕೆ ಬೇಕಾದ ಸಿದ್ಧತೆಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಕಾಲೇಜು ಕಟ್ಟಡದ ನೆಲ ಮಹಡಿ, ಮೊದಲನೆ ಮಹಡಿ ಹಾಗೂ ಎರಡನೆ ಮಹಡಿಯನ್ನು ಸ್ಟ್ರಾಂಗ್ ರೂಂ ಆಗಿ ಹಾಗೂ ಮತ ಏಣಿಕಾ ಕಾರ್ಯಗಳಿಗೆ ಬಳಸಿಕೊಳ್ಳಲಾಗುವುದು. ಕಾಲೇಜು ಕಟ್ಟಡ ಸುತ್ತ ಇರುವ ಕಾಂಪೌಂಡ್ ವ್ಯವಸ್ಥೆ, ಕೈಗೊಳ್ಳಲಾಗುವ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿಗಳು ವಿವರ ಒದಗಿಸಿದರು.

ಬಳ್ಳಾರಿ ಕ್ಷೇತ್ರ ಚುನಾವಣಾ ವೀಕ್ಷಕ ಚಂದ್ರಶೇಖರ ಸಖಮುರಿ ಅವರು, ಎಲ್ಲ ವಿಧಾನಸಭಾ ಕ್ಷೇತ್ರಗಳಿಂದ ಬರುವ ಮತಯಂತ್ರಗಳನ್ನು ಇಡುವ ಸ್ಟ್ರಾಂಗ್ ರೂಂಗಳಿಗೆ ಹಾಗೂ ಮತ ಏಣಿಕಾ ಕೊಠಡಿಗಳಿಗೆ ಭೇಟಿ ನೀಡಿ, ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಇಡೀ ಕಾಲೇಜು ಕಟ್ಟಡದ ನೀಲಿ ನಕ್ಷೆಯನ್ನು ಪಡೆದು, ಯಾವ ಯಾವ ಕೊಠಡಿಯಲ್ಲಿ ಯಾವ ಕ್ಷೇತ್ರದ ಮತಯಂತ್ರಗಳನ್ನು ಇರಿಸುವುದು ಹಾಗೂ ಮತ ಏಣಿಕೆ ನಡೆಸಲಾಗುವುದು ಎಂಬುದರ ಮಾಹಿತಿ ಪಡೆದು ಕೂಲಂಕಷವಾಗಿ ಪರಿಶೀಲಿಸಿದರು.

ಸ್ಟ್ರಾಂಗ್ ರೂಂ ಸಿದ್ಧಪಡಿಸುವುದು, ಬಂದೋಬಸ್ತ್ ಹಾಗೂ ಮತ ಏಣಿಕಾ ಕೊಠಡಿಗಳ ಸಿದ್ಧತೆಗಳು, ಅಂಚೆ ಮತಗಳ ಏಣಿಕೆಗೆ ಸಿದ್ಧತೆ, ಚುನಾವಣಾ ಏಜೆಂಟರು, ಸಿಬ್ಬಂದಿ ಆಗಮನ, ನಿರ್ಗಮನ ವಿಷಯಗಳು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇರಬೇಕು, ಕಟ್ಟಡದಲ್ಲಿ ವಿದ್ಯುತ್ ಸಂಪರ್ಕ ಸುರಕ್ಷತೆ, ಕೊಠಡಿಗಳ ಸುರಕ್ಷತೆ ಕುರಿತು ಅತ್ಯಂತ ಎಚ್ಚರಿಕೆ ವಹಿಸಬೇಕು. ಸುಗಮ ಡಿಮಸ್ಟರಿಂಗ್ ಹಾಗೂ ಮತ ಏಣಿಕಾ ಕಾರ್ಯ ನಡೆಸಲು ಕೆಲವು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.

ಬಳ್ಳಾರಿ ಲೋಕಸಭಾ ಚುನಾವಣೆಯ ಪೊಲೀಸ್ ವೀಕ್ಷಕ ಧರ್ಮೇಂದ್ರ ಸಿಂಗ್ ಭದೌರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜೀತ್ ಕುಮಾರ್ ಬಂಡಾರು ಅವರು ಉಪಸ್ಥಿತರಿದ್ದರು.