ಗೃಹ ಬಳಕೆ ಅಥವಾ ಸಣ್ಣ ಸಿಲಿಂಡರ್‌ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬರುತ್ತಿವೆ. ಹಾಗೊಂದು ವೇಳೆ ಮಾರಾಟ ಮಾಡಿದ್ದೇ ಆದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಧಾರವಾಡ:

ಕಾಳಸಂತೆಯಲ್ಲಿ ಸಿಲಿಂಡರ್‌ ಮಾರಾಟ ಮಾಡಿದರೆ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಆರ್‌ ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್‌ಪಿಜಿ ವಿತರಕರ, ಹೋಟೆಲ್ ಮಾಲೀಕರ ಮತ್ತು ಸಿಲಿಂಡರ್ ಏಜೆನ್ಸಿ ಪ್ರತಿನಿಧಿಗಳ ಸಭೆ ಜರುಗಿಸಿ ಮಾತನಾಡಿದರು.

ಗೃಹಬಳಕೆ ಸಿಲಿಂಡರ್‌ಗಾಗಿ ಬುಕ್‌ ಮಾಡಲು ನಗರ ಪ್ರದೇಶದ ಗ್ರಾಹಕರಿಗೆ 25 ದಿನ ಮತ್ತು ಗ್ರಾಮೀಣ ಭಾಗದ ಗ್ರಾಹಕರಿಗೆ 45 ದಿನ ಅವಕಾಶವಿದೆ. ಯಾರು ಕೂಡಾ ವದಂತಿಗಳಿಗೆ ಒಳಗಾಗಿ ಅವಸರ ಪಡದೇ ಸಹಕಾರ ನೀಡಬೇಕೆಂದು ಆಗ್ರಹಿಸಿದರು.

ಗೃಹ ಬಳಕೆ ಅಥವಾ ಸಣ್ಣ ಸಿಲಿಂಡರ್‌ ಹೆಚ್ಚಿನ ದರಕ್ಕೆ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಬರುತ್ತಿವೆ. ಹಾಗೊಂದು ವೇಳೆ ಮಾರಾಟ ಮಾಡಿದ್ದೇ ಆದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಇದಕ್ಕಾಗಿ ತಂಡಗಳನ್ನೂ ರಚಿಸಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ದೇಶನದ ಪ್ರಕಾರ ಗ್ರಾಹಕರಿಗೆ ಸಿಲಿಂಡರ್‌ ವಿತರಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ಐಒಸಿ 13, ಬಿಪಿಸಿ 18, ಎಚ್‌ಪಿಸಿ 22 ಒಟ್ಟು 55 ಗ್ಯಾಸ್ ಡೀಲರ್ಸ ಇದ್ದಾರೆ. ಐಒಸಿ, ಬಿಪಿಸಿ, ಎಚ್‌ಪಿಸಿ ಕಂಪನಿಗಳು ಸೇರಿ ಸಿಂಗಲ್ ಗ್ಯಾಸ್ ಕನೆಕ್ಷನ್ 2,83,796 ಮತ್ತು ಡಬಲ್ ಗ್ಯಾಸ್ ಕನೆಕ್ಷನ್ 3,47,265 ಸೇರಿ ಒಟ್ಟು 6,31,061 ಗ್ಯಾಸ್ ಸಂಪರ್ಕಗಳಿವೆ. ವಾಣಿಜ್ಯ ಬಳಕೆಗಾಗಿ 11,799 ವಾಣಿಜ್ಯ ಸಿಲಿಂಡರ್ ಸಂಪರ್ಕಗಳಿವೆ. ಒಟ್ಟಾರೆಯಾಗಿ ಗೃಹಬಳಕೆ ಮತ್ತು ವಾಣಿಜ್ಯ ಬಳಕೆ ಸೇರಿ ೬,೪೨,೮೬೦ ಗ್ಯಾಸ್ ಸಂಪರ್ಕಗಳಿವೆ. ಕಳೆದ ೬೦ ದಿನಗಳ ಸರಾಸರಿಯಂತೆ ಪ್ರತಿದಿನ ಜಿಲ್ಲೆಯಲ್ಲಿ 10,987 ಸಿಲಿಂಡರ್‌ ವಿತರಿಸಲಾಗುತ್ತಿದೆ ಎಂದು ಹೇಳಿದರು.

ಆದ್ಯತೆ ನೀಡಿ:

ಸಿಲಿಂಡರ್‌ ವಿತರಣೆಯಲ್ಲಿ ವೈದ್ಯಕೀಯ, ಶಾಲಾ-ಕಾಲೇಜು, ಅಂಗನವಾಡಿ, ಹಾಸ್ಟೆಲ್, ಇಂದಿರಾ ಕ್ಯಾಂಟಿನ್‌ಗಳಿಗೆ ಆದ್ಯತೆ ನೀಡಬೇಕು. ಸಿಲಿಂಡರ್‌ ರೀಫಿಲಿಂಗ್ ಬುಕ್ಕಿಂಗ್ ಮಾಡಿದ ಕನಿಷ್ಠ 25 ದಿನ ನಂತರ ನಗರ ಹಾಗೂ 45 ದಿನಗಳ ನಂತರ ಗ್ರಾಮೀಣ ಭಾಗದಲ್ಲಿ ಸಿಲಿಂಡರ್‌ ದೊರೆಯುತ್ತವೆ. ಗೃಹ ಬಳಕೆಯ ಸಿಲಿಂಡರ್‌ ಅಕ್ರಮವಾಗಿ ವಾಣಿಜ್ಯ ಬಳಕೆಗೆ ಬಳಸಿಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ಅಕ್ರಮ ಅನಿಲ ಸಿಲಿಂಡರ್‌ ವಿತರಣೆ ಕಂಡು ಬಂದಲ್ಲಿ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಜಿಲ್ಲೆಯಲ್ಲಿ ಕೊರತೆ ಇಲ್ಲ:

ಜಿಲ್ಲೆಯಲ್ಲಿ ಎಲ್‌ಪಿಜಿ ಸಿಲಿಂಡರ್‌ ಕೊರತೆ ಇಲ್ಲ. ಆದ್ದರಿಂದ ಸಾರ್ವಜನಿಕರು, ಜಿಲ್ಲೆಯ ಎಲ್ಲ ಎಲ್‌ಪಿಜಿ ಗ್ರಾಹಕರು ಭಯಪಡುವ ಅಗತ್ಯವಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬಾರದು. ಗ್ರಾಹಕರು ಸಿಲಿಂಡರ್‌ ರೀಫಿಲಿಂಗ್ ಬುಕ್ಕಿಂಗ್ ಮಾಡಿದ ನಂತರ ಕನಿಷ್ಠ ಅವಧಿಗೆ ಕಾಯಬೇಕು. ಅನಗತ್ಯವಾಗಿ ಗ್ಯಾಸ್ ವಿತರಕರ ಹಾಗೂ ಗ್ಯಾಸ್ ಡಿಲರ್‌ಗಳ ಕಚೇರಿ ಅಥವಾ ಉಗ್ರಾಣಗಳಿಗೆ ತೆರಳಿ ಒತ್ತಡ ಹಾಕಬಾರದು. ಅವರು ಸಹ ಸರ್ಕಾರದ ಸೂಚನೆಗಳ ಪ್ರಕಾರ ಕಾರ್ಯನಿರ್ವಹಿಸಬೇಕು. ಆದ್ದರಿಂದ ಸಾರ್ವಜನಿಕರು ಸಹಕಾರ ನೀಡಬೇಕೆಂದು ಹೇಳಿದರು.

ಧಾರವಾಡ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ ಶೆಟ್ಟಿ ಹಾಗೂ ಗ್ಯಾಸ್ ಡಿಲರ್ಸ್‌ ಮಾಲೀಕರು ಮಾತನಾಡಿದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಂಟಿ ನಿರ್ದೇಶಕ ವಿನೋದಕುಮಾರ ಹೆಗ್ಗಳಗಿ, ಐಒಸಿ, ಬಿಪಿಸಿ, ಎಚ್‌ಪಿಸಿ ಕಂಪನಿಗಳ ಪ್ರತಿನಿಧಿಗಳು, ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳು, ಹೋಟೆಲ್ ಮಾಲೀಕರು, ಗ್ಯಾಸ್ ವಿತರಕರು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಆಹಾರ ನಿರೀಕ್ಷಕರು ಭಾಗವಹಿಸಿದ್ದರು.