ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕಿನ ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳು ಕಾಮಗಾರಿಗಳ ಗುಣಮಟ್ಟಗಳನ್ನು ಪರಿಶೀಲಿಸಬೇಕು ಹಾಗೂ ಕೆಲವು ಗ್ರಾಮ ಪಂಚಾಯತಿಯ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದೇ ಜನರ ಕೆಲಸಗಳಿಗೆ ಸುಖಾ ಸುಮ್ಮನೆ ವಿಳಂಬಮಾಡಿ ಸಮಯ ಕಳೆಯುತ್ತಿರುವುದು ಗಮನಕ್ಕೆ ಬಂದಿದ್ದು ಮುಂದೇ ಈ ರೀತಿಯ ದೂರುಗಳು ನನ್ನ ಗಮನಕ್ಕೆ ಬಂದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಎಚ್ಚರಿಕೆ ನೀಡಿದರು.ನಗರದ ತಾಲೂಕು ಪಂಚಾಯಿತಿ ಆವರಣದಲ್ಲಿನ ಸಾಮರ್ಥ್ಯ ಸೌಧದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಕಾಮಗಾರಿ ಚುರುಕುಗೊಳಿಸಿ
ತಾಲೂಕಿನ ಸರ್ವಾವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಪ್ರತೀ ಇಲಾಖೆಯ ಅಧಿಕಾರಿಗಳು ಶಿಸ್ತು, ಸಂಯಮ ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ಗ್ರಾಮೀಣ ಭಾಗದ ನಾಗರೀಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳಿಗೆ ಆಯಾ ಇಲಾಖೆಗಳ ಅಧಿಕಾರಿಗಳ ದಕ್ಷತೆಯಿಂದ ಪರಿಹಾರ ಕಲ್ಪಿಸಬೇಕು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಜೆ.ಜೆ.ಎಂ. ಕಾಮಗಾರಿಗಳು ಆಮೆ ವೇಗದಲ್ಲಿದ್ದು ಕಾಮಗಾರಿಯ ಪೂರ್ಣತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ವಸತಿಶಾಲೆಯ ವಿದ್ಯಾರ್ಥಿಗಳು ಮತ್ತು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಜಿಲ್ಲೆಯಲ್ಲಿಯೇ ಹಿಂದುಳಿದಿರುವುದು ನಿಜಕ್ಕೂ ಆವೈಜ್ಞಾನಿಕವಾಗಿದೆ. ಸರ್ಕಾರಿ ಶಾಲೆಯ ಶಿಕ್ಷಕರಲ್ಲಿ ಬದ್ಧತೆ ಇಲ್ಲದಂತಾಗಿದೆ. ಇಲಾಖೆಯಲ್ಲಿ ಸಾಕಷ್ಟು ನ್ಯೂನತೆಗಳಿವೆ. ಕೂಡಲೇ ಇವುಗಳನ್ನು ಸರಿಪಡಿಸಿ ತಾಲೂಕಿನ ಗೌರವ ಉಳಿಸಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕಾಗಿದೆ ಎಂದು ಹೇಳಿದರು.ಸಾಮಾನ್ಯ ಹೆರಿಗೆಗೆ ಒತ್ತುನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವೈದ್ಯರು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ವ್ಯಾಪಕ ದೂರುಗಳು ಕೇಳಿ ಬರುತ್ತಿವೆ, ಹೆರಿಗೆಗಾಗಿ ಬರುವ ಶೇ.80 ಭಾಗ ಸಾಮಾನ್ಯ ಹೆರಿಗೆ ಮಾಡಿಸಲು ಪ್ರಯತ್ನ ಮಾಡಬೇಕು, ಮತ್ತು ಈ ವರದಿಯನ್ನು ಪ್ರತಿ ತಿಂಗಳು ಕಡ್ಡಾಯವಾಗಿ ನನಗೆ ನೀಡಬೇಕು ಎಂದರು. ಕೆಡಿಪಿ ಸಭೆಯ ಸದಸ್ಯಕಾರ್ಯದರ್ಶಿ ಹಾಗೂ ತಾಪಂ ಇಒ ಜೆ.ಕೆ.ಹೊನ್ನಯ್ಯ ಮಾತನಾಡಿ, ಚರಂಡಿ, ರಸ್ತೆಯಲ್ಲಿ ಕುಡಿಯುವ ನೀರು, ಸೇರಿದಂತೆ ಮೂಲ ಸೌಕರ್ಯಗಳ ಅಭಿವೃದ್ಧಿಯ ಜೊತೆಗೆ ನಿವೇಶನ ರಹಿತರಿಗೆ, ನಿವೇಶನ ನೀಡಲು 500 ಎಕರೆ ಜಮೀನನ್ನು ಗುರುತಿಸಲಾಗುತ್ತಿದೆ ಎಂದು ತಿಳಿಸಿದರು.ಸಭೆಯಲ್ಲಿ ನಗರಸಭೆ ಆಯುಕ್ತ ಡಿ.ಎಂ. ಗೀತಾ, ಸಿಪಿಐ ಕೆ.ಪಿ.ಸತ್ಯನಾರಾಯಣ ಸೇರಿದಂತೆ ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.