ಆರ್‌ಬಿಐ ನಿಯಮ ಉಲ್ಲಂಘಿಸಿದ್ದರೆ ಮೈಕ್ರೋ ಫೈನಾನ್ಸ್‌ಗಳ ಮೇಲೆ ಕ್ರಮ : ಕೆ.ಎನ್. ರಾಜಣ್ಣ

| N/A | Published : Jan 27 2025, 12:49 AM IST / Updated: Jan 27 2025, 12:12 PM IST

ಆರ್‌ಬಿಐ ನಿಯಮ ಉಲ್ಲಂಘಿಸಿದ್ದರೆ ಮೈಕ್ರೋ ಫೈನಾನ್ಸ್‌ಗಳ ಮೇಲೆ ಕ್ರಮ : ಕೆ.ಎನ್. ರಾಜಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮೀಟರ್‌ ಬಡ್ಡಿ ದಂಧೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಮುಖ್ಯಮಂತ್ರಿಗಳೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾನೂನುಗಳು ಕಠಿಣಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

 ಹಾಸನ : ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮೀಟರ್‌ ಬಡ್ಡಿ ದಂಧೆ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವವರ ವಿರುದ್ಧ ಮುಖ್ಯಮಂತ್ರಿಗಳೇ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಕಾನೂನುಗಳು ಕಠಿಣಗೊಳ್ಳಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು.

ನಗರದಲ್ಲಿ ಭಾನುವಾರ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 30 ವರ್ಷಗಳಿಂದ ಮೀಟರ್‌ ಬಡ್ಡಿ ದಂಧೆ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುವುದನ್ನು ನಾನೂ ಕೂಡ ಕಂಡಿದ್ದೇನೆ. ಹಾಗಾಗಿ ಇಂತಹ ಯಾವುದೇ ಬೆಳವಣಿಗೆಗಳಿಗೆ ಸರ್ಕಾರ ಅವಕಾಶ ಕೊಡುವುದಿಲ್ಲ. ಜಿಲ್ಲೆಯಲ್ಲಿ ಅರಕಲಗೂಡು ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್‌ಗಳು ಜನರಿಗೆ ತೊಂದರೆ ನೀಡುತ್ತಿರುವುದು ಕಂಡುಬಂದಿದೆ. ರಿಸರ್ವ್‌ ಬ್ಯಾಂಕ್‌ ನಿಯಮಗಳನ್ನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಶ್ರೀರಾಮುಲು ಸಂಭಾವಿತ ರಾಜಕಾರಣಿ: ಪಕ್ಷದ ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಯಾರೂ ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ, ಈ ಬಗ್ಗೆ ಹೆಚ್ಚು ಹೇಳುವುದಿಲ್ಲ. ಕೆ.ಎನ್. ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಅಕಾಂಕ್ಷಿ ಎನ್ನುವ ವಿಚಾರದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ಅಧ್ಯಕ್ಷ ಸ್ಥಾನಕ್ಕೆ ನಾನೂ ಕೂಡ ನಿರೀಕ್ಷಿತ ವ್ಯಕ್ತಿ ಅಂತ ನಾನು ಹೇಳಿದ್ದೀನಿ. ಅದು ನನ್ನ ಅಭಿಪ್ರಾಯ. ಅಧ್ಯಕ್ಷ ಸ್ಥಾನ ನೀಡಿದರೆ ಮಂತ್ರಿಸ್ಥಾನ ತ್ಯಜಿಸಿ ಆ ಸ್ಥಾನ ನಿಭಾಯಿಸುತ್ತೇನೆ ಅಂತ ಅಭಿಪ್ರಾಯ ಹೇಳಿದ್ದೇನೆ. ಹಾಗಂದ ಮಾತ್ರಕ್ಕೆ ನಾನು ಅರ್ಜಿ ಹಾಕಿ ಕೇಳೋಕೆ ಹೋಗಿಲ್ಲ ಎಂದರು. 

ಶ್ರೀರಾಮುಲು ವಿಷಯವಾಗಿ ಬಿಜೆಪಿಯೊಳಗೆ ನಡೆಯುತ್ತಿರೋ ಘಟನೆ ನಮ್ಮ ಪಕ್ಷಕ್ಕೆ ಸಂಬಂಧ ಇಲ್ಲ. ಶ್ರೀರಾಮುಲು ಸ್ವತಃ ನಮ್ಮ ಪಕ್ಷಕ್ಕೆ ಬರುತ್ತೇನೆ ಎಂದರೆ ನಮ್ಮ ವಿರೋಧ ಇಲ್ಲ. ಸತೀಶ್ ಜಾರಕಿ ಹೊಳಿ ಕೂಡ ಹೇಳಿದ್ದಾರೆ. ಶ್ರೀರಾಮುಲು ಸಂಭಾವಿತ ರಾಜಕಾರಣಿ. ಶಾಸಕರನ್ನ ಸ್ವಂತ ಬಲದ ಮೇಲೆ ಕಟ್ಟೋ ನಾಯಕ. ಅವರು ಬಂದರೆ ಪಕ್ಷದ ಬಲ ಹೆಚ್ಚುತ್ತದೆ. ಸತೀಶ್ ಜಾರಕಿಹೊಳಿಗೆ ಟಾಂಗ್ ಕೊಡಲಿಕ್ಕಾಗಿ ಹೀಗೆಲ್ಲಾ ಮಾಡ್ತಿದ್ದಾರೆ ಅನ್ನೋದು ಸುಳ್ಳು, ಇದು ಮಾಧ್ಯಮ ಸೃಷ್ಟಿ. ನಾನು, ಸತೀಶ್ ಅವ್ರು ರಾಮುಲು ಎಲ್ಲಾ ಚನ್ನಾಗೆ ಇದ್ದೀವಿ ಎಂದು ಉತ್ತರಿಸಿದರು.

 ಮುಡಾ ಪ್ರಕರಣ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಮುಡಾ ಸೇರಿದಂತೆ ಇತರ ಯಾವುದೇ ಸರ್ಕಾರದ ಜಾಗ ಕಬಳಿಸೋದು ಪಾಪದ ಕೆಲಸ. ಹಾಗೇ ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತನಿಖೆ ನಡಿಯುತ್ತಿದೆ. ಜಾತಿವಾರು ಜನಗಣತಿ ವರದಿಯನ್ನು ಗೌಪ್ಯವಾಗಿ ಕ್ಯಾಬಿನೇಟ್ ಮುಂದೆ ತರಲು ಇಡಲಾಗಿದೆ. ವರದಿ ಮಂಡನೆ ಆದಾಕ್ಷಣ ಅದೆಲ್ಲಾ ಜಾರಿ ಅಯ್ತು ಅಂತೇನಿಲ್ಲ. ಅದೇನು ಸಂವಿಧಾನ ಅಲ್ಲ, ಅದೊಂದು ಜನರ ಮಾಹಿತಿ. ಅದು ಬಂದ ನಂತರ ಸರಿ ಇದೆ ಇಲ್ಲ ಅನ್ನೊ ಬಗ್ಗೆ ಚರ್ಚೆ ಮಾಡೋಣ. 

ವರದಿಯನ್ನು ತಪ್ಪಾಗಿ ಗ್ರಹಿಸಬಾರದು. ಮಾಹಿತಿ ಕೊಡೊ ವರದಿ, ಇದೇ ಅಂತಿಮ ಅಲ್ಲ. ಇದು ಕಾಲಕಾಲಕ್ಕೆ ಬದಲಾವಣೆ ಆಗುತ್ತಾ ಇರುತ್ತೆ. ಇದನ್ನ ಭಗವದ್ಗೀತೆ, ಕುರಾನ್, ಬೈಬಲ್‌ ರೀತಿ ಭಾವನೆ ಮಾಡಬೇಡಿ. ಇವೆಲ್ಲಾ ಬದಲಾವಣೆ ಅಗೋ ಅಂತವಲ್ಲ ಎಂದು ಹೇಳಿದರು. ಹಾಸನ ಜಿಲ್ಲೆಯ ಇಬ್ಬರಿಗೆ ಪದ್ಮಭೂಷಣ ಪದ್ಮವಿಭೂಷಣ ಬಂದಿದೆ. ಅವರಿಗೂ ಅಭಿನಂದನೆಗಳನ್ನು ಇದೇ ವೇಳೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸದ ಶ್ರೇಯಸ್ ಎಂ. ಪಟೇಲ್, ಕಾಂಗ್ರೆಸ್ ಮುಖಂಡ ಜಾವಗಲ್ ಮಂಜುನಾಥ್, ಇತರರು ಉಪಸ್ಥಿತರಿದ್ದರು.