ಕೊಡಗು ಜಿಲ್ಲೆಯಲ್ಲಿ ಮೂಲದಿಂದಲೇ ಕಲುಷಿತಗೊಂಡು ಹರಿಯುತ್ತಿರುವ ಜೀವ ನದಿ ಕಾವೇರಿಯ ಸಂರಕ್ಷಣೆ ಮಾಡುವ ಸಂಬಂಧ ಮುಂದಿನ ಕೇಂದ್ರ ಬಜೆಟ್ ನಲ್ಲಿ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುದಾನ ಕಲ್ಪಿಸಿ ಅನುಷ್ಠಾನಗೊಳಿಸುವಂತೆ ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ಕೊಡಗು ಜಿಲ್ಲೆಯಲ್ಲಿ ಮೂಲದಿಂದಲೇ ಕಲುಷಿತಗೊಂಡು ಹರಿಯುತ್ತಿರುವ ಜೀವ ನದಿ ಕಾವೇರಿಯ ಸಂರಕ್ಷಣೆ ಮಾಡುವ ಸಂಬಂಧ ಮುಂದಿನ ಕೇಂದ್ರ ಬಜೆಟ್ ನಲ್ಲಿ ಕ್ರಿಯಾ ಯೋಜನೆಗೆ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಅನುದಾನ ಕಲ್ಪಿಸಿ ಅನುಷ್ಠಾನಗೊಳಿಸುವಂತೆ ಕೊಡಗು ಮೈಸೂರು ಲೋಕಸಭಾ ಸದಸ್ಯರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಸಂಸದರಿಗೆ ನೀಡಿದ ನದಿ ಕಲುಷಿತ ಬಗೆಗಿನ ಸಮಗ್ರ ಮಾಹಿತಿಯನ್ನು ಆಧರಿಸಿ ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರಿಗೆ ವಿವರವಾಗಿ ಪತ್ರ ಬರೆದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಗ್ರಾಮಗಳು ಪಟ್ಟಣದ ಕಲುಷಿತ ತ್ಯಾಜ್ಯ ನೇರವಾಗಿ ನದಿ ಒಡಲು ಸೇರಿ ನೀರಿನ ಗುಣಮಟ್ಟ ಕ್ಷೀಣಿಸುತ್ತಿದೆ. ನದಿ ತಟದ ಅಕ್ರಮ ಒತ್ತುವರಿ ವಾಣಿಜ್ಯ ಕಟ್ಟಡಗಳು ಪ್ರವಾಸಿಗರ ಮೂಲಕ ಉತ್ಪಾದನೆ ಆಗುವ ತ್ಯಾಜ್ಯಗಳು ನೇರವಾಗಿ ನದಿ ಒಡಲು ಸೇರುತ್ತಿದೆ.ಈ ಸಂಬಂಧ ತಕ್ಷಣ ನದಿ ತಟದ ಸರ್ವೆ ಮಾಡಲು ಕ್ರಮ ಕೈಗೊಳ್ಳಬೇಕಾಗಿದೆ. ಒತ್ತುವರಿ ತೆರವುಗೊಳಿಸುವ ಕ್ರಮ ಆಗಬೇಕಾಗಿದೆ. ನವೀನ್ ತಟದಿಂದ ತೆರವು ಆಗುವ ನಿರಾಶ್ರಿತ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಮಡಿಕೇರಿ ತಾಲೂಕು ವ್ಯಾಪ್ತಿಯಲ್ಲಿ 9 ಗ್ರಾಮ ಹಳ್ಳಿಗಳ ಮೂಲಕ ಕಾವೇರಿ ನದಿ ಹರಿಯುತ್ತಿದ್ದು, ಪಟ್ಟಣ ವ್ಯಾಪ್ತಿಯಲ್ಲಿ ಒಳ ಚರಂಡಿ ಯೋಜನೆಯನ್ನು ತಕ್ಷಣ ಪೂರ್ಣ ಗೊಳಿಸಬೇಕು, ತಡೆಗೋಡೆ ನಿರ್ಮಾಣ ನದಿ ತಟದ ಸಂರಕ್ಷಣೆ ಸೇರಿದಂತೆ ಒತ್ತುವರಿ ತೆರವುಗೊಳಿಸುವ ಕ್ರಮ ಆಗಬೇಕಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ವಿರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಆರು ಗ್ರಾಮಗಳು ಒಳಗೊಂಡಿದ್ದು, ತ್ಯಾಜ್ಯಗಳು ನೇರವಾಗಿ ಹರಿಯದಂತೆ ಒಳ ಚರಂಡಿ ಯೋಜನೆ ನಿರ್ಮಾಣವಾಗಬೇಕು. ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ೯ ಗ್ರಾಮಗಳು ಒಂದು ಪುರಸಭೆ ನದಿ ತಟದಲ್ಲಿದ್ದು ಪ್ರವಾಹ ನಿಯಂತ್ರಣಕ್ಕೆ ಶಾಶ್ವತ ಯೋಜನೆ ರೂಪಿಸಬೇಕು. ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸಬೇಕು. ಪರಿಸರ ಸ್ನೇಹಿ ಯೋಜನೆಗಳ ಮೂಲಕ ಸ್ವಚ್ಛ ಕಾವೇರಿ ನಿರ್ಮಾಣವಾಗಬೇಕಾಗಿದೆ. ದಕ್ಷಿಣ ಭಾರತದ ಜೀವನಾಡಿ ಅಂತರರಾಜ್ಯ ಜನರ ಜೀವ ನದಿ ಆಗಿರುವ ಕಾವೇರಿಗೆ ಕೇಂದ್ರ ಸರ್ಕಾರ ಕ್ರಿಯಾ ಯೋಜನೆ ಮೂಲಕ ಅಗತ್ಯ ಅನುದಾನ ಮುಂದಿನ ಬಜೆಟ್ ನಲ್ಲಿ ಮೀಸಲಿರಿಸಬೇಕು. ನದಿ ಸಂರಕ್ಷಣೆಗೆ ತ್ಯಾಜ್ಯ ವಿಲೇವಾರಿ ನದಿ ತಟ ಸಂರಕ್ಷಣೆ ಸಂಬಂಧ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ. ಕ್ರಮಕ್ಕೆ ಶಾಸಕರ ಆಗ್ರಹ:ಈ ನಡುವೆ ಇತ್ತೀಚೆಗೆ ಹೇಳಿಕೆ ನೀಡಿರುವ ಮಡಿಕೇರಿ ಕ್ಷೇತ್ರ ವಿಧಾನಸಭಾ ಶಾಸಕರಾದ ಡಾ. ಮಂತರ್ ಗೌಡ, ನದಿ ತಟದ ಬಫರ್ ಜೋನ್ ಪ್ರದೇಶಗಳ ಒತ್ತುವರಿ ಬಗ್ಗೆ ಕಳೆದ ಆರು ತಿಂಗಳಿಂದ ಅಧಿಕಾರಿಗಳು ಸರ್ವೆ ಕಾರ್ಯ ಕೈಗೊಂಡಿದ್ದು, ಒತ್ತುವರಿ ಮಾಡಿರುವ ನದಿ ತಟಗಳಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲು ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಎರಡು ದಶಕಗಳಿಂದ ನಡೆಯುತ್ತಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸ್ವಚ್ಛ ಕಾವೇರಿ ಕನಸು ಕೇಂದ್ರ ಸರ್ಕಾರದ ಅಂಗಳಕ್ಕೆ ತಲುಪಿದ್ದು, ಇನ್ನೊಂದೆಡೆ ಸಮಿತಿಯ ಹೋರಾಟ ಮತ್ತಿತರ ನಿರಂತರ ಚಟುವಟಿಕೆಗಳು ಗೂಗಲ್ ಪುಟ ಸೇರಿದ್ದು, ಕಾವೇರಿ ನದಿ ಸಂರಕ್ಷಣೆಯ ಕೂಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ದಾಖಲಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.