ಕನ್ನಡಪ್ರಭ ವಾರ್ತೆ ಬೆಂಗಳೂರು
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಪರಿಣಾಮ ತಗ್ಗಿಸಲು ಕರ್ನಾಟಕ ರಾಜ್ಯ ಕ್ರಿಯಾ ಯೋಜನೆ (ಕೆಎಸ್ಎಪಿಸಿಸಿ) ರೂಪಿಸಲಾಗಿದ್ದು, ಇದರ ಸಮರ್ಪಕ ಅನುಷ್ಠಾನಕ್ಕೆ ಕ್ರಮ ವಹಿಸಲು ಸೂಚಿಸಲಾಗಿದೆ ಎಂದು ಸಚಿವ ಈಶ್ವರ ಬಿ ಖಂಡ್ರೆ ಹೇಳಿದರು.ಕರ್ನಾಟಕ ಮಾಧ್ಯಮ ಅಕಾಡಮಿ ಆಯೋಜಿಸಿದ್ದ ತಾಪಮಾನ ಏರಿಕೆ ಮತ್ತು ಬೆಂಗಳೂರಿನ ಮೇಲೆ ಅದರ ಪರಿಣಾಮ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಕ್ರಿಯಾ ಯೋಜನೆಯನ್ನು ರಾಜ್ಯದ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಜಾರಿಗೆ ತರಲು ಪರಿಸರ ಇಲಾಖೆ ವ್ಯಾಪ್ತಿಗೆ ಒಳಪಡುವ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ -ಎಂಪ್ರಿ ಕ್ರಮ ಕೈಗೊಂಡಿದೆ.
ಜಿಲ್ಲಾ ಪಂಚಾಯತಿ ಕಚೇರಿಗಳ ಸಹಯೋಗದೊಂದಿಗೆ ಕೆಎಸ್ಎಪಿಸಿಸಿ ಅನುಷ್ಠಾನ ಮತ್ತು ಅದರ ಪ್ರಗತಿ ಕುರಿತು ಜಿಲ್ಲಾ ಅಧಿಕಾರಿಗಳು ಮತ್ತು ಇತರ ಸಂಬಂಧಿತ ಸಂಸ್ಥೆಗಳಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಕಾರ್ಯಕ್ರಮ ನಡೆಸಲಾಗುವುದು ಎಂದೂ ತಿಳಿಸಿದರು.ಶ್ವಾಸತಾಣ ಸಂರಕ್ಷಣೆ, ಸಂವರ್ಧನೆಗೆ ಕ್ರಮ
ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಈಗ ಋತುಮಾನಗಳೇ ಬದಲಾಗುತ್ತಿವೆ. ಇದನ್ನು ಮನಗಂಡು ಬೆಂಗಳೂರು ನಗರ ಹಾಗೂ ರಾಜ್ಯದಾದ್ಯಂತ ಹಸಿರು ಹೊದಿಕೆ ಹೆಚ್ಚಿಸಲು ಸಕಲ ರೀತಿಯಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ರಾಜ್ಯದೆಲ್ಲೆಡೆ ಹಸಿರುಹೊದಿಕೆ ಹೆಚ್ಚಿಸಲು ಶ್ರಮಿಸುತ್ತಿದ್ದೇನೆ. ಕಳೆದ 3 ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಸುಮಾರು 11 ಕೋಟಿ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳ ಪೈಕಿ ಎಷ್ಟು ಬದುಕುಳಿದಿವೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ಹಾಕುವ ಮೂಲಕ ಪಬ್ಲಿಕ್ ಡೊಮೈನ್‌ನಲ್ಲಿ ಮಾಹಿತಿ ಒದಗಿಸಲಾಗಿದೆ ಎಂದರು. ಬೆಂಗಳೂರು ನಗರದ ಕೊತ್ತನೂರು, ಕಾಡುಗೋಡಿ, ಬಿ.ಎಂ. ಕಾವಲ್, ತುರಹಳ್ಳಿ ಕಡೆಗಳಲ್ಲಿ ಆಗಿದ್ದ ಸುಮಾರು 10 ಸಾವಿರ ಕೋಟಿ ಬೆಲೆ ಬಾಳುವ 250 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಮಾಡಿಸಲಾಗಿದೆ. ಒತ್ತುವರಿ ತೆರವು ಮಾಡಿದ ಜಾಗದಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ನೆಡುತೋಪು ನಿರ್ಮಾಣ ಮಾಡಲಾಗಿದೆ. ಈ ಮೂಲಕ ಬೆಂಗಳೂರು ನಗರಕ್ಕೆ ಅತ್ಯಗತ್ಯ ಶ್ವಾಸತಾಣ (ಲಂಗ್ಸ್ ಸ್ಪೇಸ್) ಉಳಿಸಲಾಗಿದೆ ಎಂದು ಈಶ್ವರ ಖಂಡ್ರೆ ತಿಳಿಸಿದರು.ಹಿಂದೆ ಕೈಗಾರಿಕೆ ಉದ್ದೇಶಕ್ಕಾಗಿ ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್.ಎಂ.ಟಿ ಸಂಸ್ಥೆಗೆ ಪೀಣ್ಯ ಪ್ಲಾಂಟೇಷನ್‌ನಲ್ಲಿ ಸುಮಾರು 400 ಎಕರೆಗೂ ಹೆಚ್ಚು ಅರಣ್ಯ ಭೂಮಿ ನೀಡಲಾಗಿತ್ತು. ಎಚ್ಎಂಟಿ ಯಲ್ಲಿ 160 ಎಕರೆ ಅರಣ್ಯ ಭೂಮಿಯನ್ನು ಮಾರಾಟ ಮಾಡಿದೆ. ಇನ್ನೂ ಅಲ್ಲಿ 280 ಎಕರೆ ಅರಣ್ಯ ಉಳಿದಿದ್ದು, ಇದನ್ನು ಮರಳಿ ಇಲಾಖೆಗೆ ಪಡೆದು ಬೆಂಗಳೂರು ನಗರಕ್ಕೆ ಶ್ವಾಸತಾಣವನ್ನು ಉಳಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕಾನೂನು ಹೋರಾಟ ನಡೆಯುತ್ತಿದೆ. ಪ್ರಸ್ತುತ ಪ್ರಕರಣ ಸುಪ್ರೀಂಕೋರ್ಟ್ ನಲ್ಲಿದೆ ಎಂದರು.ಏರ್ ಶೋ ನಡೆಯುವ ಭೂಮಿಯೂ ಅರಣ್ಯ
ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನ ಏರ್ ಶೋ ನಡೆಯುವ ಗಂಟಿಗಾನಹಳ್ಳಿಯ ಯಲಹಂಕ ವಾಯುನೆಲೆ ಕೂಡ ಅರಣ್ಯ ಭೂಮಿಯಾಗಿದೆ. ಇಲ್ಲಿ 159 ಎಕರೆ ಪ್ರದೇಶ ಸರ್ಕಾರಿ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿದ್ದು, ವಾಯುಪಡೆ ತಿರುವಳಿ ಪ್ರಸ್ತಾವನೆ ಸಲ್ಲಿಸಿ, ಪರ್ಯಾಯ ಭೂಮಿ ನೀಡಿದರೆ ಈ ಪ್ರದೇಶವನ್ನು ಪಡೆಯದಿದ್ದರೆ, ಅದನ್ನು ಅರಣ್ಯ ಇಲಾಖೆಗೆ ಹಿಂಪಡೆಯಲು ಕ್ರಮ ವಹಿಸಲಾಗುವುದು ಎಂದರು. ಬಸವಣ್ಣ ಜೈವಿಕ ಉದ್ಯಾನಕ್ಕೆ ಶಂಕುಸ್ಥಾಪನೆ
ಬೆಂಗಳೂರು ಉತ್ತರ ತಾಲೂಕು ಮಾದಪ್ಪನಹಳ್ಳಿಯಲ್ಲಿ 153 ಎಕರೆ ಪ್ರದೇಶದಲ್ಲಿ ವಿಶ್ವಗುರು ಬೃಹತ್ ಜೈವಿಕ ಉದ್ಯಾನ ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದ್ದು, ಸಚಿವ ಸಂಪುಟದ ಅನುಮೋದನೆ ದೊರೆತಿದೆ. ಮುಂದಿನ ತಿಂಗಳು ಮುಖ್ಯಮಂತ್ರಿಗಳಿಂದ ಶಂಕುಸ್ಥಾಪನೆ ಮಾಡಿಸಲಾಗುವುದು. ಇದು ಲಾಲ್ ಬಾಗ್, ಕಬ್ಬನ್ ಪಾರ್ಕ್ ನಂತರದ ಅತಿ ದೊಡ್ಡ ಉದ್ಯಾನವಾಗಲಿದೆ. ಇದು ಶತಮಾನದ ಸಾಧನೆ ಎಂದರು. ಕಾರ್ಯಕ್ರಮದಲ್ಲಿ ಅಕಾಡಮಿ ಅಧ್ಯಕ್ಷೆ ಆಯೇಶಾ ಖಾನ್, ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಎಂ.ಎಸ್.ದಿವಾಕರ, ಎಸ್.ಸ್ವಾತಿ, ಹೀಟ್ ವಾಚ್ ಸಂಸ್ಥಾಪಕರಾದ ಅಪೇಕ್ಷಿತಾ, ಜಿಬಿಎ ಎಂಜಿನಿಯರ್ ನಿತ್ಯಾ ಜೆ.ಹಾಜರಿದ್ದರು.