ಕನ್ನಡಪ್ರಭವಾರ್ತೆ ಸೋಮವಾರಪೇಟೆ

ವಿವಿಧ ಯೋಜನೆಗಳಲ್ಲಿ ತಾಲೂಕಿನ ಹಲವೆಡೆಗಳಲ್ಲಿ ರು. 8.5 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಡಾ. ಮಂತರ್ ಗೌಡ ಶನಿವಾರ ಭೂಮಿ ಪೂಜೆ ನೆರವೇರಿಸಿದರು.ಕಾಗಡಿಕಟ್ಟೆ ಗ್ರಾಮದ ಐಯ್ಯಪ್ಪ ಕಾಲೋನಿಯಲ್ಲಿ ರು. 30 ಲಕ್ಷದ ರಸ್ತೆ ಮತ್ತು ಚರಂಡಿ ನಡೆಸಿ, ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿಗೂ ಸಾಕಷ್ಟು ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಿಂದ ಜನರು ವಂಚಿತರಾಗಿದ್ದಾರೆ. ಜನರಿಗೆ ಕೇವಲ ರಸ್ತೆ ಮತ್ತು ಚರಂಡಿ ಮುಖ್ಯವಲ್ಲ. ಅದರೊಂದಿಗೆ ತಾವು ವಾಸಿಸುವ ಮನೆಗೆ ಹಕ್ಕುಪತ್ರವನ್ನು ಪಡೆಯುವುದು ಪ್ರತಿಯೊಬ್ಬರ ಕನಸಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ನೆಲೆಯಿರುವ 103 ಕುಟುಂಬಗಳು ನಿವೇಶನಕ್ಕೆ ದಾಖಲಾತಿ ಪಡೆಯಲು ಸಾಧ್ಯವಾಗಿಲ್ಲ. ಮುಂದಿನ 10 ದಿನಗಳಲ್ಲಿ ಕಂದಾಯ, ಎ.ಸಿ. ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳು ಒಟ್ಟಿಗೆ ಜಂಟಿ ಸರ್ವೆ ನಡೆಸಿ, ದಾಖಲಾತಿ ಕೊಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.ಗ್ರಾಮದ ನಿವಾಸಿ ಸುಂದರ್ ಮಾತನಾಡಿ, ಇಲ್ಲಿ ಎಲ್ಲರೂ ಕೂಲಿ ಕಾರ್ಮಿಕರಾಗಿದ್ದಾರೆ. ಆದರೆ, ಯಾರಿಗೂ ಹಕ್ಕುಪತ್ರಗಳಿಲ್ಲದೆ, ಸರ್ಕಾರದ ಯಾವುದೇ ಯೋಜನೆಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಹಲವು ಭಾರಿ ಜಂಟಿ ಸರ್ವೆ ನಡೆಸಿ, ದಾಖಲಾತಿ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಲ್ಲಿ ಮನವಿ ಮಾಡಲಾಗಿತ್ತು. ಆದರೆ, ಇಲ್ಲಿಯವರೆಗೂ ಯಾವುದೇ ಕೈಗೂಡಿಲ್ಲ. ಕೂಡಲೇ ಇಲ್ಲಿನವರಿಗೆ ಹಕ್ಕುಪತ್ರ ನೀಡಬೇಕೆಂದು ಮನವಿ ಮಾಡಿದರು.ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್, ಖಜಾಂಚಿ ಚೇತನ್, ಅಯ್ಯಪ್ಪ ದೇವಾಲಯ ಸಮಿತಿ ಅಧ್ಯಕ್ಷ ಜಗದೀಶ್, ಗಂಗಾಧರ್, ಧರ್ಮ, ಶಿವಣ್ಣ, ರೇಂಜರ್ ಶೈಲೇಂದ್ರಕುಮಾರ್, ಚೌಡ್ಲು ಗ್ರಾಮ ಪಂಚಾಯಿತಿ ಪಿಡಿಒ ಪೂರ್ಣಕುಮಾರ್ ಇದ್ದರು.ತಾಲ್ಲೂಕಿನ ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡ್ತಕೊಪ್ಪಲು ಗ್ರಾಮದಲ್ಲಿ ನೂತನ ಸೇತುವೆ ಮತ್ತು ರಸ್ತೆಗೆ ರು. 8 ಕೋಟಿ, ಶಾಂತಳ್ಳಿಯಲ್ಲಿ ರು. 15 ಲಕ್ಷದ ಬಸ್ ನಿಲ್ದಾಣ ಹಾಗೂ 5 ಲಕ್ಷ ವೆಚ್ಚದ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ, ಸರ್ಕಾರಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಒಳಾಂಗಣ ಬ್ಯಾಸ್ಕೇಟ್ ಬಾಲ್ ಸ್ಟೇಡಿಯಂಗೆ ಭೂಮಿ ಪೂಜೆ ಹಾಗೂ ಶಾಂತಳ್ಳಿಯಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ, ಸೋಮವಾರಪೇಟೆ ಕೃಷಿ ಮಾರುಕಟ್ಟೆಯಲ್ಲಿ ರು. 8. 5 ಲಕ್ಷ ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳಿಸಿದರು.