ವೃಷಭಾವತಿ-ಅರ್ಕಾವತಿ ನೀರು ಕಲುಷಿತ ತಡೆಗೆ ಕ್ರಮ

| Published : May 20 2025, 01:49 AM IST

ಸಾರಾಂಶ

ರಾಮನಗರ: ಮಂಚನಬೆಲೆ, ಬೈರಮಂಗಲ, ತಿಪ್ಪಗೊಂಡನಹಳ್ಳಿ ಮತ್ತು ಅರ್ಕಾವತಿ ಅಣೆಕಟ್ಟುಗಳಿಗೆ ಹರಿಯುವ ನೀರು ಕಲುಷಿತಗೊಳ್ಳುವುದನ್ನು ತಡೆಗಟ್ಟುವ ಹಾಗೂ ವೃಷಭಾವತಿ - ಅರ್ಕಾವತಿ ಕಣಿವೆಗಳ ಮಾಲಿನ್ಯ ನಿಯಂತ್ರಣ ಕುರಿತು ಪರಿಹಾರ ಮಾರ್ಗೋಪಾಯಗಳ ತಾಂತ್ರಿಕ ವರದಿಯನ್ನು ಶೀಘ್ರದಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ತಿಳಿಸಿದರು.

ರಾಮನಗರ: ಮಂಚನಬೆಲೆ, ಬೈರಮಂಗಲ, ತಿಪ್ಪಗೊಂಡನಹಳ್ಳಿ ಮತ್ತು ಅರ್ಕಾವತಿ ಅಣೆಕಟ್ಟುಗಳಿಗೆ ಹರಿಯುವ ನೀರು ಕಲುಷಿತಗೊಳ್ಳುವುದನ್ನು ತಡೆಗಟ್ಟುವ ಹಾಗೂ ವೃಷಭಾವತಿ - ಅರ್ಕಾವತಿ ಕಣಿವೆಗಳ ಮಾಲಿನ್ಯ ನಿಯಂತ್ರಣ ಕುರಿತು ಪರಿಹಾರ ಮಾರ್ಗೋಪಾಯಗಳ ತಾಂತ್ರಿಕ ವರದಿಯನ್ನು ಶೀಘ್ರದಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ತಿಳಿಸಿದರು.

ತಿಪ್ಪಗೊಂಡನಹಳ್ಳಿಯಿಂದ ಮಂಚನಬೆಲೆವರೆಗೆ ಪರಿಶೀಲನೆ ನಡೆಸಿದ ತರುವಾಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಣಿವೆಗಳಲ್ಲಿನ ನೀರು ಒಳಚರಂಡಿ ತ್ಯಾಜ್ಯ, ಘನತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಮತ್ತು ಇತರೆ ರೀತಿಯ ಮಾಲಿನ್ಯಕಾರಕ ಅಂಶಗಳಿಂದಾಗಿ ಕಲುಷಿತಗೊಳ್ಳುತ್ತಿರುವುದು ಅಧ್ಯಯನದ ವೇಳೆ ಗಮನಿಸಿದ್ದೇವೆ. ಮಾಲಿನ್ಯದ ಮೂಲಗಳು, ಮಾಲಿನ್ಯಕ್ಕೆ ಕಾರಣಗಳು ಹಾಗೂ ಪರಿಹಾರೋಪಾಯಗಳನ್ನು ಅಧ್ಯಯನ ವರದಿಯಲ್ಲಿ ಇರಲಿದೆ ಎಂದರು.

ಕಲುಷಿತ ನೀರು ಕಣಿವೆಗಳಲ್ಲಿ ಸೇರುತ್ತಿರುವುದರಿಂದ ಜನ ಜಾನುವಾರುಗಳ ಆರೋಗ್ಯ ಸಂಬಂಧಿ ಸಮಸ್ಯೆಗಳು ಹಾಗೂ ಬೆಳೆಗಳ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಅಣೆಕಟ್ಟುಗಳು/ಕೆರೆಗಳು ಮತ್ತು ನದಿ ಕಣಿವೆಗಳ ಪರಿವೀಕ್ಷಣೆ ಮಾಡುವುದರ ಜೊತೆಗೆ ಈಗಾಗಲೇ ಕೆಲ ಇಲಾಖೆಗಳು ಕಾಲಾನುಕಾಲಕ್ಕೆ ಮಾಲಿನ್ಯ ಸುಧಾರಿಸಲು ಕೆಲವು ಕ್ರಮಗಳನ್ನು ವಹಿಸಿವೆ. ಅದರ ಬಗ್ಗೆಯೂ ಮಾಹಿತಿ ಕಲೆ ಹಾಕಿದ್ದೇವೆ. ರಾಜ್ಯ ಸರ್ಕಾರಕ್ಕೆ ನೈಜ ವರದಿಯನ್ನು ಸಿದ್ಧಪಡಿಸಿ ನೀಡುತ್ತೇವೆ ಎಂದು ಹೇಳಿದರು.

ನೀರಿನ ಗುಣಮಟ್ಟ ಪರೀಕ್ಷೆ ಮಾಡುವುದರ ಜೊತೆಗೆ ನೀರಿನ ಸದ್ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಮಾಲಿನ್ಯ ನಿಯಂತ್ರಣ ಹಾಗೂ ನದಿಯ ನೀರಿನ ಗುಣಮಟ್ಟವನ್ನು ಸುಧಾರಿಸಲು ತೆಗೆದುಕೊಳ್ಳಬೇಕಾದ ಮಾರ್ಗೋಪಾಯಗಳನ್ನು ವರದಿಯಲ್ಲಿ ಶಿಫಾರಸ್ಸು ಮಾಡುತ್ತೇವೆ ಎಂದು ಜೈ ಪ್ರಕಾಶ್ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಳೆದ ಮಾರ್ಚ್ 6ರಂದು ರಚನೆಗೊಂಡ ಅಧ್ಯಯನ ಸಮಿತಿಯು 2 ಸಭೆಗಳನ್ನು ನಡೆಸಿದೆ. ಹೆಸರಘಟ್ಟ ಟ್ಯಾಂಕ್‌ನಿಂದ ಬೆಂಗಳೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸೇತುವೆಯವರೆಗೆ ಮಾರನಾಯಕನಹಳ್ಳಿಯಲ್ಲಿನ ಅರ್ಕಾವತಿ ಕಣಿವೆಯ ಪರಿಶೀಲನೆ ನಡೆಸಲಾಗಿದೆ. ಗುರುವಾರ ಅಥವಾ ಶುಕ್ರವಾರ ಅರ್ಕಾವತಿ ಡ್ಯಾಂ ನಿಂದ ಕನಕಪುರ, ಸಂಗಮದವರೆಗೆ ಪರಿವೀಕ್ಷಣೆ ಮಾಡಲಿದ್ದೇವೆ ಎಂದು ಹೇಳಿದರು.

ಈಗ ಬೆಂಗಳೂರು ನಗರವನ್ನು "ಗ್ರೇಟರ್ ಬೆಂಗಳೂರು " ಎಂದು ವಿಂಗಡಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸುವುದು ಆದ್ಯತೆಯ ಅಂಶವಾಗಿದೆ. ಬೆಂಗಳೂರು ನಗರದ ವ್ಯಾಪ್ತಿಯಲ್ಲಿ ವೃಷಭಾವತಿ ಮತ್ತು ಅರ್ಕಾವತಿ ಕಣಿವೆಗಳು ಇದ್ದು, ಸದರಿ ಕಣಿವೆಯ ಈ ನದಿಗಳನ್ನು ಪುನರುಜ್ಜೀವನಗೊಳಿಸುವುದು ಮತ್ತು ಸ್ವಚ್ಛಗೊಳಿಸುವುದು ಅಗತ್ಯವಾಗಿದೆ ಎಂದರು. ಈ ನದಿಗಳನ್ನು ಶುದ್ದಗೊಳಿಸುವುದು ಹಾಗೂ ಸ್ವಚ್ಚಗೊಳಿಸುವ ಮೂಲಕ ಬೆಂಗಳೂರು ನಗರವನ್ನು ಮೇಲ್ದರ್ಜೆಗೇರಿಸುವ ಉದ್ದೇಶವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅರ್ಕಾವತಿ ಮತ್ತು ವೃಷಭಾವತಿ ನದಿಗಳಿಗೆ ಆರೋಗ್ಯಕರ ವಾತಾವರಣ ಕೊಡಬೇಕಿದೆ ಎಂದು ಕೆ.ಜೈಪ್ರಕಾಶ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯರಾದ ಜಲಸಂಪನ್ಮೂಲ ಇಲಾಖೆ ಜಂಟಿ ಕಾರ್ಯದರ್ಶಿ, ಬಿಬಿಎಂಪಿ ಸ್ಟಾರ್ಮ್ ವಾಟರ್ ಡ್ರೇನ್ ವಲಯ ಮುಖ್ಯ ಎಂಜಿನಿಯರ್ , ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ , ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಇಲಾಖೆ , ಸಣ್ಣ ನೀರಾವರಿ ಇಲಾಖೆ ದಕ್ಷಿಣ ವಲಯ ಹಾಗೂ ಪೌರಾಡಳಿತ ನಿರ್ದೇಶನಾಲಯದ ಮುಖ್ಯಎಂಜಿನಿಯರ್ ಇದ್ದರು.

19ಕೆಆರ್ ಎಂಎನ್ 4.ಜೆಪಿಜಿ

ರಾಮನಗರದಲ್ಲಿ ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.