ಸಾರಾಂಶ
ಹುಬ್ಬಳ್ಳಿ: ಜಿಲ್ಲೆಯಲ್ಲಿ 330ಕ್ಕೂ ಅಧಿಕ ಶಾಲಾ ಕಟ್ಟಡಗಳು ಮಳೆಯಿಂದ ಹಾನಿಗೀಡಾಗಿದ್ದು, ಈ ಪೈಕಿ 100 ಶಾಲಾ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾಡಳಿತದ ವಿವಿಧ ಅಧಿಕಾರಿಗಳೊಂದಿಗೆ ಮಳೆಹಾನಿ ಬಗ್ಗೆ ಚರ್ಚೆ ನಡೆಸಿದ ಸಚಿವರು, ಸಿಎಸ್‌ಆರ್ ಯೋಜನೆಯಡಿ ನೂರು ಶಾಲಾ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಪ್ರಸ್ತಾವನೆ ನೀಡಿದ್ದಾಗಿ ತಿಳಿಸಿದರು.ಸಿಎಸ್‌ಆರ್ ಯೋಜನೆಯಡಿ ಶಾಲಾ ಕಟ್ಟಡಗಳ ಮರು ನಿರ್ಮಾಣಕ್ಕೆ ಶೀಘ್ರವೇ ಅನುಮೋದನೆ ದೊರೆಯುವ ವಿಶ್ವಾಸವಿದ್ದು, 100 ಕಟ್ಟಡಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗುತ್ತದೆ. ಇನ್ನುಳಿದ ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಕೂಡಲೇ ಅನುದಾನ ಒದಗಿಸಿ ಕಟ್ಟಡ ನಿರ್ಮಾಣ ಮಾಡಬೇಕೆಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.
ತ್ವರಿತ ಪರಿಹಾರ ಕ್ರಮಕ್ಕೆ ಸೂಚನೆ: ಜಿಲ್ಲೆಯಲ್ಲಿ ಮಳೆಹಾನಿ ತೀವ್ರವಾಗಿದ್ದು, ಎನ್‌ಡಿಆರ್‌ಎಫ್ ವಿಪತ್ತು ಪರಿಹಾರ ನಿಧಿ ಮತ್ತು ಎಸ್‌ಡಿಆರ್‌ಎಫ್ ವಿಪತ್ತು ಪರಿಹಾರ ನಿಧಿಯಿಂದ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಸ್ಥಳೀಯ ವಿಪತ್ತು ಸಮೀಕ್ಷೆ ಪೂರ್ಣಗೊಳಿಸಿ ತ್ವರಿತವಾಗಿ ಸಂಬಂಧಪಟ್ಟ ಬೆಳೆವಿಮಾ ಕಂಪನಿಗೆ ವರದಿ ನೀಡಿ ಮತ್ತು ಮಳೆ ಹಾನಿಗೊಳಗಾದ ರೈತರಿಗೆ ಕೂಡಲೇ ಪರಿಹಾರ ದೊರಕಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಜಂಟಿ ಸಮೀಕ್ಷೆ ವರದಿ ಶೀಘ್ರ ಸಲ್ಲಿಸಿ: ಧಾರವಾಡ ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಗಿಂತ ಅತಿ ಹೆಚ್ಚು ಮಳೆ ಸುರಿದಿದೆ. ನೂರಾರು ಮನೆ, ಹೊಲ ಹಾಗೂ ಶಾಲಾ ಕಟ್ಟಡಗಳು ಹಾನಿಗೊಳಗಾಗಿವೆ. ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಶೀಘ್ರವೇ ಬೆಳೆ ಹಾನಿ ಸಮೀಕ್ಷೆ ಕೈಗೊಂಡು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸೂಚಿಸಿದರು.ಕೇಂದ್ರ ಸರ್ಕಾರದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಕೊಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ, ಎನ್.ಎಚ್. ಕೋನರೆಡ್ಡಿ, ಪ್ರಸಾದ್ ಅಬ್ಬಯ್ಯ, ಜಿಲ್ಲಾಧಿಕಾರಿ, ಜಿಲ್ಲಾ ಕಾರ್ಯ ನಿರ್ವಾಹಕ ಅಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.