ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ಕಾವೇರಿ ನೀರು ಕೊನೇ ಭಾಗಕ್ಕೆ ಯಾವುದೇ ಸಮಸ್ಯೆ ಇಲ್ಲದಂತೆ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.ತಾಲೂಕಿನ ಹಲಗೂರು ಹೋಬಳಿಯ ತೋರೆಕಾಡನಹಳ್ಳಿಯಲ್ಲಿ ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆಗೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಹೆಬ್ಬಾಳ ಚನ್ನಯ್ಯ ನಾಲೆ ಸಮಗ್ರವಾಗಿ ಅಭಿವೃದ್ಧಿಗೊಳಿಸಿ ಕೊನೇ ಭಾಗಕ್ಕೆ ನೀರು ತಲುಪಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು.
ಜೈಕಾ (ಜಪಾನ್ ಇಂಟರ್ ನ್ಯಾಷನಲ್ ಕೋ ಅಪರೇಶನ್ ಏಜೆನ್ಸಿ) ಸಹಭಾಗಿತ್ವದಲ್ಲಿ 5ನೇ ಹಂತದ ಯೋಜನೆಗೆ ಚಾಲನೆ ಕೊಟ್ಟಿದ್ದು ಸಿದ್ದರಾಮಯ್ಯ ಅವರು. ಈಗ ಅವರೇ ಉದ್ಘಾಟನೆ ಮಾಡಿದ್ದಾರೆ. ಇದು ನಮ್ಮ ಪುಣ್ಯ, ಬೆಂಗಳೂರಿನ 110 ಹಳ್ಳಿಗಳ ಸುಮಾರು ಒಂದೂವರೆ ಕೋಟಿ ಜನರಿಗೆ ನೀರಿನ ಸೌಲಭ್ಯ ಒದಗಿಸಲಾಗಿದೆ ಎಂದರು.ಎತ್ತಿನಹೊಳೆ ಯೋಜನೆ ಸಾಧ್ಯನಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವು ಮಂದಿ ಟೀಕಿಸಿದ್ದರು. ಆದರೆ, ಈ ಯೋಜನೆ ಯಶಸ್ವಿಯಾಗಿದೆ. ಒಳ್ಳೆಯ ಕೆಲಸಗಳಲ್ಲಿ ಟೀಕೆಗಳು ಸಹಜ. ಈ ರೀತಿಯ ಟೀಕೆಗಳು ಸತ್ತಿವೆ. ಕೆಲಸಗಳು ಬದುಕಿವೆ ಎಂದರು.
ಹಣ್ಣು ಚನ್ನಾಗಿದ್ದರೆ ಕಲ್ಲು ಹೊಡೆಯುವವರೇ ಹೆಚ್ಚು. ಕಲ್ಲು ಹೊಡೆಯೊರಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಪಕ್ಷ ಭೇದವಿಲ್ಲದೆ ಹಲವರು ನಮಗೆ ಬೆಂಬಲ ನೀಡಿದ್ದಾರೆ. ರಾಜಕೀಯದಲ್ಲಿ ವ್ಯತ್ಯಾಸವಿದ್ದರೂ ಸಹಕಾರ ನೀಡಿದ್ದಾರೆ ಎಂದರು.ಕೆಆರ್‌ಎಸ್‌ನಿಂದ 174 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಈಗ 217 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ. ನಾವು ಮೇಕೆದಾಟು ಯೋಜನೆಗೆ ಹೋರಾಟ ಮಾಡಿದ್ದೇವು. ಹಂತ ಹಂತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ ಎಂದರು.ಮೇಕೆದಾಟು ಯೋಜನೆಗೆ ತಯಾರಿ ಮಾಡುತ್ತಿದ್ದೇವೆ. ಯೋಜನೆಯ ಭೂಮಿ ಪೂಜೆ ಮಾಡುವ ಶಕ್ತಿ ಚಾಮುಂಡಿ ತಾಯಿ ಕೊಡುತ್ತಾಳೆ ಎಂಬ ನಂಬಿಕೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಮೇಕೆದಾಟು ಯೋಜನೆಗೆ ಚಾಲನೆ ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಸಾಧನೆಗಳ ಮೂಲಕ ಜನರ ಮಧ್ಯ ನಾವು ಇರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ನಾವು ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಇದಕ್ಕಾಗಿ ಪರಿಶುದ್ಧ ಆಡಳಿತ ಮಾಡುತಿದ್ದೇವೆ. ಜನರಿಗೆ ಕೊಟ್ಟ ಮಾತನ್ನು ಈಡೇರಿಸಲು ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ ಎಂದರು.ಸಮಾರಂಭದಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಎನ್.ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಶಾಸಕರಾದ ಎಸ್.ಟಿ. ಸೋಮಶೇಖರ್, ಭೈರತಿ ಸುರೇಶ್, ಹ್ಯಾರೀಸ್, ಉದಯ್, ವಿಧಾನ ಪರಿಷತ್ ಸದಸ್ಯರಾದ ಮಧು ಜಿಮಾದೇಗೌಡ, ದಿನೇಶ್ ಗೂಳಿಗೌಡ, ಜಪಾನ್ ದೇಶದ ಪ್ರತಿನಿಧಿಗಳು ಇದ್ದರು.ಎಷ್ಟೇ ಮಳೆ ಬಂದರೂ ಅರ್ಧ ಗಂಟೆಯಲ್ಲಿ ಸರಿ ಮಾಡುತ್ತೇವೆ: ಡಿಕೆಶಿ
ಮಳವಳ್ಳಿ:ಮಳೆ ಬರಬೇಕು ಬರಲಿ. ಯಾವುದೇ ಅವಾಂತರವೂ ಇಲ್ಲ. ಎಷ್ಟೇ ಮಳೆ ಬಂದರೂ ಅರ್ಧ ಗಂಟೆಯಲ್ಲಿ ಸರಿ ಮಾಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.ತೊರೆಕಾಡನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಳೆ ಅವಾಂತರ ವಿಚಾರವಾಗಿ ಮಾತನಾಡಿ, ಎಷ್ಟೇ ಮಳೆ ಬಂದ್ರು ತಡೆದುಕೊಳ್ಳುವ ಶಕ್ತಿ ನಮಗಿದೆ. ಈ ಬಗ್ಗೆ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.ಎಲ್ಲಾ ಇಲಾಖೆಯ ಅಧಿಕಾಗಳಿಗೆ ನಿರ್ದೇಶನ ಕೊಟ್ಟಿದ್ದೇನೆ. ಬೆಂಗಳೂರಿಗೆ ಹೋದ ತಕ್ಷಣ ಮತ್ತೆ ಅಧಿಕಾರಿಗಳ ಸಭೆ ಮಾಡುತ್ತೇನೆ. ಯಾರೂ ಗಾಬರಿ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಮುಂಜಾಗ್ರತವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಿದ್ದೇವೆ. ಈ ಸಂಬಂಧ ಟೀಕೆ ಟಿಪ್ಪಣಿಗಳು ಇದ್ದೇ ಇರುತ್ತವೆ ಎಂದರು.