2 ವರ್ಷದಲ್ಲಿ 54 ಕೆರೆಗೆ ಎತ್ತಿನಹೊಳೆ ನೀರು ಹರಿಸಲು ಕ್ರಮ

| Published : Jul 04 2024, 01:03 AM IST

ಸಾರಾಂಶ

ತಾಲೂಕಿನ ದೊಡ್ಡೇರಿ ಹೋಬಳಿಯ 9 ಕೆರೆ ಸೇರಿ ಒಟ್ಟು 54 ಕೆರೆಗಳಿಗೆ ಇನ್ನೆರೆಡು ವರ್ಷದ ಒಳಗೆ ಎತ್ತಿನಹೊಳೆ ನೀರು ತುಂಬಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ತಾಲೂಕಿನ ದೊಡ್ಡೇರಿ ಹೋಬಳಿಯ 9 ಕೆರೆ ಸೇರಿ ಒಟ್ಟು 54 ಕೆರೆಗಳಿಗೆ ಇನ್ನೆರೆಡು ವರ್ಷದ ಒಳಗೆ ಎತ್ತಿನಹೊಳೆ ನೀರು ತುಂಬಿಸಲಾಗುವುದು ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ಭರವಸೆ ನೀಡಿದರು.

ತಾಲೂಕಿನ ರಂಟಲವಳಲು ಗ್ರಾಮದಲ್ಲಿ ತಾಪಂಯಿಂದ ಆಯೋಜಿಸಿದ್ದ ಗ್ರಾಪಂ ಮಟ್ಟದ ಜನಸ್ಪಂದನಾ ಹಾಗೂ ಖಾತಾ ಆಂದೋಲನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎತ್ತಿನಹೊಳೆ ನೀರು ರಂಟವಳಲು ಸೇರಿ, ತಾಲೂಕಿನಲ್ಲಿ 54 ಕೆರೆಗಳಿಗಳಿಗೆ ಹರಿಸುತ್ತೇನೆ. ಇದರಿಂದ ರೈತರ, ಕೃಷಿಕರ ಮತ್ತು ಕೂಲಿ ಕಾರ್ಮಿಕರ ಬದುಕು ಹಸನಾಗಲಿದೆ. ಸರ್ಕಾರದಿಂದ ಸಾರ್ವಜನಿಕರ ಕುಂದುಕೊರತೆ ನಿವಾರಿಸುವುದು ಜನಸ್ಪಂದನಾ ಕಾರ್ಯಕ್ರಮದ ಉದ್ದೇಶ. ವಾಡಿಕೆ ರಸ್ತೆ ತೆರವುಗೊಳಿಸಿ ಜನರು ಮತ್ತು ಶಾಲಾ ಮಕ್ಕಳು ಓಡಾಡಲು ಅನುಕೂಲ ಮಾಡಿ ಕೊಡಲಾಗುವುದು ಎಂದು ತಿಳಿಸಿದರು.

ಪೌತಿ ಖಾತೆ ಮಾಡಲು ವಿಳಂಬವಾಗಿದೆ. ಗ್ರಾಮಗಳಲ್ಲಿ ರೈತರ ಜಮೀನುಗಳ ಪೌತಿ ಖಾತೆಗಳು ಆಗದಿರುವುದು ಬೇಸರದ ಸಂಗತಿ, ಸುಮಾರು ಎರಡು ತಲೆಮಾರಿನ ಜನರ ಖಾತೆ ಬದಲಾವಣೆ ಆಗಿಲ್ಲ. ಹಕ್ಕುಗಳನ್ನು ತಮ್ಮ ಹೆಸರಿಗೆ ಮಾಡಿಕೊಳ್ಳಲು ಅರ್ಜಿ ಹಿಡಿದು ಕಚೇರಿಗೆ ಹೋಗಲು ಜನರು ಸಹ ಉದಾಸೀನ ತೋರಿದ್ದಾರೆ. ಜನಸಂಖ್ಯೆ ಹೆಚ್ಚಿದಂತೆಲ್ಲಾ ಹಳ್ಳಿಗಳು ನಗರೀಕರಣವಾಗುತ್ತಿರುವ ಪರಿಣಾಮ ಭೂಮಿ ಬೆಲೆ ಹೆಚ್ಚುತ್ತಿದೆ ಎಂದರು.

ಜನರು ಭೂಮಿ ಮೇಲೆ ಆಕರ್ಷಿತರಾಗಿ ಯಾರೂ ಸಹ ಒಂದಿಂಚು ಭೂಮಿ ಬಿಡುವುದಿಲ್ಲ. ರೈತ ವರ್ಗದವರು ಭೂಮಿ ವಿಚಾರವಾಗಿ ಸಣ್ಣ ಪುಟ್ಟ ಗಲಾಟೆ ಮಾಡಿಕೊಳ್ಳುವುದು ಬೇಡ. ಖಾತೆ ಮಾಡಿಸಿಕೊಂಡು ಸರ್ಕಾರದಿಂದ ಬರುವ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು. ಅಧಿಕಾರಿಗಳು ಸಹ ನಿಮ್ಮ ಮನೆ ಬಾಗಿಲಿಗೆ ಬಂದು ಪೌತಿ ಖಾತೆ, ಮರಣ, ಜನನ ಪ್ರಮಾಣ ಪತ್ರ ಮಾಡಿ ಕೊಡಲಿದ್ದು, ತಮಗೆ ಸಂಬಂಧಪಟ್ಟ ಭೂಮಿ ದಾಖಲಾತಿ, ಬ್ಯಾಂಕ್‌ ಖಾತೆ, ಪತ್ರಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ರೈತರ ಆದ್ಯ ಕರ್ತವ್ಯ ಎಂದು ಹೇಳಿದರು.

ಜಮೀನುಗಳು ದಾಖಲಾತಿ ಪತ್ರಗಳು ಸರಿಯಲ್ಲದ ಕಾರಣ ಪ್ರಧಾನ ಮಂತ್ರಿ ನೀಡುವ ₹ 6000, ಬೆಳೆ ವಿಮೆ ಹಣ ಪಡೆಯಲು ಆಗುತ್ತಿಲ್ಲ. ಆದ ಕಾರಣ ಎಲ್ಲ ದಾಖಲಾತಿ ಪತ್ರ ಸರಿಪಡಿಸಿಕೊಳ್ಳಿ, ಅಧಿಕಾರಿಗಳು ವಿನಾ ಕಾರಣ ಜನರನ್ನು ಅಲೆಸದೆ ಅವರ ಮನೆ ಬಾಗಿಲಿಗೆ ತೆರಳಿ ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಎಂದು ಸೂಚಿಸಿದರು.

ಡೆಂಘೀ ಪ್ರಕರಣಗಳು ಕಂಡು ಬಂದಿದ್ದು, ಪಿಡಿಒಗಳು ಗ್ರಾಮಗಳಲ್ಲಿರುವ ಗುಂಡಿಗಳನ್ನು ಮುಚ್ಚಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.

ಅಪರ ಜಿಲ್ಲಾಧಿಕಾರಿ ಶಿವಾನಂದ, ಎಸಿ ಗೂಟೋರು ಶಿವಪ್ಪ, ತಹಸೀಲ್ದಾರ್ ಸಿಬ್ಗತ್ವುಲ್ಲಾ, ಇಒ ಲಕ್ಷ್ಮಣ್‌, ಗ್ರಾಪಂ ಅಧ್ಯಕ್ಷೆ ರಂಜಿತಾ, ಲೋಕೋಪಯೋಗಿ ಇಲಾಖೆ ಇಇ ಸುರೇಶ್‌ರೆಡ್ಡಿ, ಎಇಇ ರಾಜ್‌ಗೋಪಾಲ್‌, ಡಿಡಿಪಿಐ ಮಂಜುನಾಥ್‌, ಬಿಇಒ ಕೆ.ಎನ್‌.ಹನುಮಂತರಾಯಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶಿವಣ್ಣ, ಜಿಪಂ ಮಾಜಿ ಸದಸ್ಯ ಚೌಡಪ್ಪ, ಡಿಸಿಸಿ ಬ್ಯಾಂಕ್‌ ನಿರ್ದೇಶಕ ಬಿ.ನಾಗೇಶ್‌ಬಾಬು, ಕೆಎಂಎಫ್‌ ನಿರ್ದೇಶಕ ಮೈದನಹಳ್ಳಿ ಕಾಂತರಾಜು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಗೋಪಾಲಯ್ಯ, ಸಿಡಿಪಿಒ ಕಮಲ, ಎತ್ತಿನ ಹೊಳೆ ಅಧಿಕಾರಿ ಮುರುಳಿ, ಅಬಕಾರಿ ಚಂದ್ರಪ್ಪ, ರಾಮಮೂರ್ತಿ, ಅರಣ್ಯ ಇಲಾಖೆ ಸುರೇಶ್‌, ಮುತ್ತುರಾಜ್‌, ಶೈಲಾಜ,ಕೃಷಿ ಅಧಿಕಾರಿ ಹನುಮಂತರಾಯ, ಕೆಆರ್‌ಐಡಿಎಲ್‌ ಸಿಂಧು, ತೋಟಗಾರಿ ಅಧಿಕಾರಿ ಸ್ವಾಮಿ, ಜಿಪಂ ದಯಾನಂದ್‌ ಮಂಜು, ಪಿಡಿಒ ಧನಂಜಯ ಇದ್ದರು.