ಸಾರಾಂಶ
ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಅರಸೀಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ನಡೆದ ಹೊಸ ಕಾನೂನು ಕಾರ್ಯಾಗಾರದಲ್ಲಿ ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾಂತರಾಜ್ ಹೊಸ ಕ್ರಿಮಿನಲ್ ಕಾನೂನುಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಜುಲೈ 1ರಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೆ ಬಂದಿದ್ದು ಅವುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಪ್ರಯತ್ನವನ್ನು ರೈಲ್ವೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕಾಂತರಾಜ್ ಮಾಡಿದರು.ನಗರದ ಬಿ.ಎಚ್ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ರಾಮಣ್ಣ ಶಾಲೆಯಲ್ಲಿ ಹೊಸ ಕಾನೂನು ಕಾರ್ಯಾಗಾರವನ್ನು ನಡೆಸಿಕೊಟ್ಟ ಅವರು, ಕೆಲವೊಂದು ಕಾನೂನುಗಳ ಬದಲಾವಣೆ ಮಾಡಿ ಹೊಸ ಕಾನೂನುಗಳು ಸೇರ್ಪಡೆಯಾಗಿದ್ದು ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷತಾ ಸಂಹಿತೆ ಹಾಗೂ ಭಾರತೀಯ ಸಾಕ್ಷ ಅಧಿನಿಯಮವನ್ನು ಜಾರಿಗೆ ತರಲಾಗಿದೆ ಅಲ್ಲದೇ ಹಳೆಯ ಬ್ರಿಟಿಷರ ಪದ್ಧತಿಯ ಕಾನೂನನ್ನ ರದ್ದುಪಡಿಸಿ ಹೊಸ ಕಾಯ್ದೆ 2023 ಸಂವಿಧಾನ ತಿದ್ದುಪಡಿ ಮಾಡಿ ಜಾರಿಗೆ ಬಂದಿದೆ ಎಂದರು.
ಈ ಹೊಸ ಕಾಯ್ದೆಗಳಲ್ಲಿ ಮಕ್ಕಳ ಅಪಹರಣ ಗುಲಾಮಗಿರಿ ದುಡಿಮೆ ಮತ್ತು ಲೈಂಗಿಕ ಅಪರಾಧಗಳಿಗೆ ಕಠಿಣ ಕಾನೂನುಗಳನ್ನ ಜಾರಿಗೆ ತರಲಾಗಿದೆ. ಈ ಸಂಬಂಧ ಈ ಕಾನೂನು ಕಾಯ್ದೆಗಳ ಬಗ್ಗೆ ಶಾಲಾ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಈ ಹೊಸ ಕಾನೂನು ಕಾಯ್ದೆಗಳ ಬಗ್ಗೆ ಅರಿವನ್ನ ಮೂಡಿಸುವ ಉದ್ದೇಶ ಈ ಕಾರ್ಯಗಳು ಆಗಿದೆ. ಹೊಸ ಕಾನೂನು ಕಾಯ್ದೆಗಳು ಹೆಣ್ಣು ಮಕ್ಕಳಿಗೆ ಸುರಕ್ಷತೆ ನೀಡುತ್ತದೆ ಎಂದು ತಿಳಿಸಿದ ಅವರು, ಯಾವುದೇ ಘಟನೆಗಳು ಸಂಭವಿಸಿದರೂ ಸಹ ನಿರ್ಭಯವಾಗಿ ನೀವು ಹತ್ತಿರದ ಪೊಲೀಸ್ ಠಾಣೆಗೆ ದೂರನ್ನು ನೀಡಬಹುದು ಇಲ್ಲವೇ ಮಾಹಿತಿಯನ್ನು ಕೊಡಬಹುದು ಎಂದು ತಿಳಿಸಿದರುಶಾಲಾ ಮುಖ್ಯ ಶಿಕ್ಷಕರಿಗೆ ಕರಿಯಮ್ಮ ಮಾತನಾಡಿ ಹೊಸ ಕಾನೂನು ಜಾರಿಗೆ ಬರುತ್ತಿದ್ದಂತೆ ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಮತ್ತು ಜಾಗೃತಿ ಮೂಡಿಸುವ ಕೆಲಸವನ್ನು ನಮ್ಮ ಶಾಲೆಯಲ್ಲಿ ನಡೆಸಿ ಕೊಟ್ಟಿರುವುದು ನಿಜಕ್ಕೂ ಸಂತೋಷ ತಂದಿದೆ ಕಾನೂನು ಅರಿವು ಎಲ್ಲರಿಗೂ ಇರಬೇಕಾಗುತ್ತದೆ. ಅದನ್ನು ತಿಳಿಸಿಕೊಡುವ ಪ್ರಯತ್ನವನ್ನು ಇಂದು ಎಸ್ ಐ ಕಾಂತರಾಜ್ ಮಾಡಿದ್ದಾರೆ ಎಂದು ಶಾಲೆಯ ಪರವಾಗಿ ಇಲಾಖೆಗೆ ಅಭಿನಂದನೆ ಹೇಳಿದರು.
ಕಾರ್ಯಕ್ರಮದಲ್ಲಿ ಕಾನಸ್ಟೇಬಲ್ ವಿನಯ್ ಮತ್ತು ಪ್ರೇಮ ಹಾಗೂ ಶಾಲಾ ಶಿಕ್ಷಕರು ಪಾಲ್ಗೊಂಡಿದ್ದರು.