2047ಕ್ಕೂ ಮುನ್ನ ಅನಿಮೀಯಾ ನಿರ್ಮೂಲನೆಗೆ ಕ್ರಮ: ದಿನೇಶ್ ಗುಂಡೂರಾವ್

| Published : Jun 20 2024, 01:05 AM IST

2047ಕ್ಕೂ ಮುನ್ನ ಅನಿಮೀಯಾ ನಿರ್ಮೂಲನೆಗೆ ಕ್ರಮ: ದಿನೇಶ್ ಗುಂಡೂರಾವ್
Share this Article
  • FB
  • TW
  • Linkdin
  • Email

ಸಾರಾಂಶ

ಸಿಕಲ್ ಸೆಲ್‌ ಅನಿಮೀಯಾವು ಅನುವಂಶೀಯವಾಗಿ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿವಾರಿಸಲು ಮುಂಜಾಗ್ರತಾ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಯಾರಲ್ಲಿ ಈ ರೋಗ ಲಕ್ಷಣ ಪತ್ತೆಯಾಗಿದೆಯೋ ಆಯಾ ಸಂಬಂಧಗಳಲ್ಲೇ ಮದುವೆ ಆಗುವುದನ್ನು ತಪ್ಪಿಸುವ ಮೂಲಕ ನಿರ್ಮೂಲನೆ ಮಾಡಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ಸಿಕಲ್ ಸೆಲ್ ಅನಿಮೀಯಾ ಕಾಯಿಲೆ ಕಾಡು ಮತ್ತು ಕಾಡಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದನ್ನು ಕರ್ನಾಟಕದಲ್ಲಿ 2047ಕ್ಕೂ ಮುನ್ನ ನಿರ್ಮೂಲನೆ ಮಾಡಲು ಉದ್ದೇಶಿಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್ ಹೇಳಿದರು.

ಜಿಪಂ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವಿಶ್ವ ಸಿಕಲ್ಸೆಲ್‌ ಅನಿಮೀಯಾ ದಿನದ ಅಂಗವಾಗಿ ಆಯೋಜಿಸಿದ್ದ ರಾಷ್ಟ್ರೀಯ ಸಿಕಲ್ಸೆಲ್ ಅನಿಮೀಯಾ ನಿರ್ಮೂಲನಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಸಿಕಲ್ ಸೆಲ್‌ ಅನಿಮೀಯಾವು ಅನುವಂಶೀಯವಾಗಿ ಕಾಣಿಸಿಕೊಳ್ಳುತ್ತಿದೆ. ಇದನ್ನು ನಿವಾರಿಸಲು ಮುಂಜಾಗ್ರತಾ ಪರೀಕ್ಷೆಗಳನ್ನು ನಡೆಸಬೇಕು ಮತ್ತು ಯಾರಲ್ಲಿ ಈ ರೋಗ ಲಕ್ಷಣ ಪತ್ತೆಯಾಗಿದೆಯೋ ಆಯಾ ಸಂಬಂಧಗಳಲ್ಲೇ ಮದುವೆ ಆಗುವುದನ್ನು ತಪ್ಪಿಸುವ ಮೂಲಕ ನಿರ್ಮೂಲನೆ ಮಾಡಬಹುದಾಗಿದೆ ಎಂದರು.

ಸೂಕ್ತ ಚಿಕಿತ್ಸೆ ಮತ್ತು ಔಷಧೋಪಚಾರವನ್ನು ಸರಿಯಾಗಿ ಪಡೆದರೆ ಆಯಸ್ಸಿನ ಪ್ರಮಾಣವನ್ನು ಹೆಚ್ಚಿಸಬಹುದು. ಸಿಕಲ್ ಸೆಲ್ ಅನಿಮೀಯಾ ಕಾಯಿಲೆ ಕಾಡು ಮತ್ತು ಕಾಡಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ. ದಕ್ಷಿಣ ಕರ್ನಾಟಕದ ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚು ಬುಡಕಟ್ಟು ಸಮುದಾಯದವರು ವಾಸಿಸುತ್ತಿದ್ದಾರೆ. ಆದರೆ, ಸಿಕಲ್ ಸೆಲ್ ಅನಿಮೀಯಾದ ಎಲ್ಲಾ ಪ್ರಕರಣ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಯಲ್ಲಿ ಹೆಚ್ಚು ಕಂಡು ಬರುತ್ತಿದೆ. ಬೇರೆ ನಾಲ್ಕು ಜಿಲ್ಲೆಗಳಲ್ಲಿ ಸೋಂಕು ಕಂಡು ಬಂದರೂ ಕಾಯಿಲೆ ಪತ್ತೆಯಾಗಿಲ್ಲ ಎಂದರು.

ಕಾಡಂಚಿನಲ್ಲಿ ವಾಸ ಮಾಡುವವರಿಗೆ ಅನುವಂಶೀಯವಾಗಿ ಬರುತ್ತಿರುವುದರಿಂದ ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಕಾಯಿಲೆ ನಿಯಂತ್ರಿಸಲಾಗುವುದು. ಪ್ರತಿಯೊಬ್ಬರನ್ನು ತಪ್ಪದೆ ತಪಾಸಣೆ ಮೂಲಕ ಪತ್ತೆ ಹಚ್ಚಿ ಅಂತಹವರಿಗೆ ಚಿಕಿತ್ಸೆ ನೀಡಿದರೆ ಗುಣಪಡಿಸುವ ಅವಕಾಶ ಇದೆ. ಮದುವೆ ವೇಳೆ ಸಂಬಂಧಿಕರಿಗೆ ಕೊಡದೆ ಬೇರೆಯವರ ಜತೆಗೆ ಮದುವೆ ಮಾಡಿದರೆ ತಡೆಯಬಹುದು ಎಂದರು.

ಕರ್ನಾಟಕದಲ್ಲಿ 2047ಕ್ಕೆ ನಿರ್ಮೂಲನೆ ಮಾಡುವ ಗುರಿ ಇದೆ. ಅದಕ್ಕೆ ಮುಂಚಿತವಾಗಿ ನಿರ್ಮೂಲನೆ ಮಾಡುವ ಕೆಲಸ ಮಾಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಈ ಯೋಜನೆಯಡಿ 2.56 ಲಕ್ಷ ಜನರಿಗೆ ತಪಾಸಣೆ ಮಾಡಿ ಚಿಕಿತ್ಸೆ ನೀಡುವುದು, ಆರೋಗ್ಯದ ಗುಣಮಟ್ಟ ಸುಧಾರಿಸುವ ಕೆಲಸ. ಆರೋಗ್ಯ ಇಲಾಖೆ ಸೇವೆ ಸುಧಾರಿಸುವಂತೆ ಕ್ರಮ ಜರುಗಿಸುವ ಜತೆಗೆ ಅರೋಗ್ಯ ಸೂಚ್ಯಂಕ ಏರಿಕೆಯಾಗಿ ಮಹಿಳೆಯರ, ಮಕ್ಕಳ ಸಾವಿನ ಪ್ರಮಾಣ ಕಡಿಮೆ ಮಾಡಬಹುದು ಎಂದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿರುವ ಸೌಲಭ್ಯ ದೊರೆಯಬೇಕು. ಸರ್ಕಾರಿ ಆಸ್ಪತ್ರೆಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು. ಆರೋಗ್ಯ ಕ್ಷೇತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೆಚ್ಚಿನ ಆದತ್ಯೆ ನೀಡಿದ್ದಾರೆ. ವೈದ್ಯರು, ವಿಶೇಷ ತಜ್ಞರು, ಸಿಬ್ಬಂದಿ ಮತ್ತು ಪ್ರಯೋಗಾಲಯದ ಪರೀಕ್ಷೆಗಳನ್ನು ಹೆಚ್ಚು ಮಾಡಲು ಸೌಲಭ್ಯ ಕೊಡಲಾಗಿದೆ ಎಂದರು.

ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊಟ್ಟ ಮೇಲೆ ಈಗ ತಿಂಗಳಿಗೆ 350 ರಿಂದ 400 ಹೆರಿಗೆ ಆಗುತ್ತಿದೆ. ಎಸ್ಎಂಟಿ ಆಸ್ಪತ್ರೆಯಲ್ಲಿ ತಿಂಗಳಿಗೆ ನೂರು ಹೆರಿಗೆಗಳಾಗುತ್ತಿವೆ. ಉತ್ತಮ ದರ್ಜೆಯ ಚಿಕಿತ್ಸೆ ಕೊಡಬೇಕಾದರೆ ಮೂಲ ಸೌಕರ್ಯವನ್ನು ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದರು.

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣವಾಗಲು ಆರೋಗ್ಯಕರ ಜೀವನ ಮುಖ್ಯ. ಸಿಕಲ್ ಸೆಲ್ ಅನಿಮೀಯಾ ಕಾಯಿಲೆ ಅನುವಂಶೀಯವಾಗಿ ಕಂಡು ಬರುವ ಕಾರಣ ಪತ್ತೆಯಾದ ಕೂಡಲೇ ಗುಣಪಡಿಸಲು ಜಾಗೃತಿ ಮೂಡಿಸಬೇಕು ಎಂದರು.

ತಪಾಸಣೆ ಕಾರ್ಯ ಮುಖ್ಯವಾಗಿದೆ. ಕಾಡಿನ ಅವಲಂಬಿತರಾಗಿರುವ ಬುಡಕಟ್ಟು ಜನರಿಗೆ ನಗರ ಪ್ರದೇಶದ ಸೌಕರ್ಯ ದೊರೆಯಬೇಕಿದೆ. ನಾವು ಅವರ ಆರೋಗ್ಯದ ಸುಧಾರಣೆಗೆ ಒತ್ತು ನೀಡಬೇಕಿದೆ. ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಸೌಲಭ್ಯವನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.

ಯೋಜನೆ ಕುರಿತು ಮಾತನಾಡಿದ ನಿರ್ದೇಶಕ ಡಾ.ವೈ. ನವೀನ್ ಭಟ್, ಮುಂದಿನ ಎರಡು ವರ್ಷದಲ್ಲಿ 3,52,187 ಮಂದಿಯ ಆರೋಗ್ಯ ತಪಾಸಣೆ ನಡೆಸಲಾಗುವುದು. ಕರ್ನಾಟಕದ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ 3.52.1187 ಮಂದಿಯನ್ನು ಸಿಕಲ್ ಸೆಲ್ ಅನಿಮೀಯಾ ಪರೀಕೆಗೆ ಒಳಪಡಿಸಬೇಕಿದೆ ಎಂದರು.

ಕಾರ್ಯಕ್ರಮದ ಪ್ರಾರಂಭದ ನಂತರ ಈವರೆಗೆ 55,503 ಮಂದಿಗೆ ತಪಾಸಣೆ ಮಾಡಿದ್ದು, 2018 ಮಂದಿಗೆ ಸೋಂಕು ಇದ್ದರೆ, 192 ಮಂದಿಗೆ ದೃಢವಾಗಿದೆ ಎಂದರು. ಮುಂದಿನ ಎರಡು ವರ್ಷಗಳಲ್ಲಿ 3,52,187 ಮಂದಿಯನ್ನು ಪರೀಕ್ಷೆ ಮಾಡಿ ಜೆನೆಟಿಕ್ ಕೌನ್ಸಿಲಿಂಗ್ ಮಾಡಲಾಗುವುದು. ಅನಿಮೀಯಾ ಕಾಯಿಲೆ ಪತ್ತೆಯಾದವರಿಗೆ ಉಚಿತ ಚಿಕಿತ್ಸೆ ಮತ್ತು ಉಚಿತ ರಕ್ತ ಸೌಲಭ್ಯ ನೀಡಲಾಗುತ್ತದೆ ಎಂದರು.

ಈ ಯೋಜನೆಯನ್ನು ಪ್ರಾಜೆಕ್ಟ್ ಚಂದನ ಹೆಸರಿನಲ್ಲಿ ಅರಂಭಿಸಲಾಗಿದ್ದು, ಈ ಯೋಜನೆಗೆ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹಣ ನೀಡಲು ಮುಂದೆ ಬಂದಿದೆ. ಭಾರತೀಯ ವಿಜ್ಞಾನ ಸಂಸ್ಥೆಯು 2 ವರ್ಷಗಳ ಅವಧಿಗೆ ಸಂಪೂರ್ಣ ತಪಾಸಣೆ, ತರಬೇತಿ, ಜಾಗೃತಿ, ಮಾದರಿ ಸಾರಿಗೆ ಮತ್ತು ಸಂಪರ್ಕ ಸೇವೆಗಾಗಿ ಮೈಸೂರು, ಚಾಮರಾಜನಗರ, ಕೊಡಗು ಜಿಲ್ಲೆಗಳನ್ನು ದತ್ತು ತಗೆದುಕೊಂಡು ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಉಳಿದ ಕಾರವಾರ, ಮಂಗಳೂರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮವನ್ನು ಎನ್ಎಚ್ಎಂ ಅಡಿ ಅನುಷ್ಠಾನಗೊಳಿಸಲಾಗುವುದು ಎಂದರು.

ಶಾಸಕ ಕೆ. ಹರೀಶ್‌ ಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಕೆ.ಎಂ. ಗಾಯತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಡಾ.ಎನ್. ಶಕೀಲಾ, ವಿಭಾಗೀಯ ಉಪ ನಿರ್ದೇಶಕ ಡಾ.ಕೆ.ಎಚ್. ಪ್ರಸಾದ್, ಡಾ. ಮಲ್ಲಿಕಾ, ಬಿಒಸಿಎಲ್ ಪ್ರಧಾನ ವ್ಯವಸ್ಥಾಪಕ ಆರ್.ಎನ್. ದುಬೆ, ಸಿಜಿಎಂ ಬಾಲಕೃಷ್ಣ ನಾಯಕ್, ಡಿಎಚ್ಒ ಡಾ.ಪಿ.ಸಿ. ಕುಮಾರಸ್ವಾಮಿ ಇದ್ದರು.

ಕಾರ್ಯಕ್ರಮದಲ್ಲಿ ಬಾವಲಿ ಹಾಡಿಯ ನಿರಂಜನ್, ಬಸವನಹಾಡಿಯ ಮಾದ, ಉದ್ಬೂರು ಹಾಡಿಯ ಭರತ್ ಅವರಿಗೆ ಚಿಕಿತ್ಸಾ ಕಾರ್ಡ್ ನೀಡಲಾಯಿತು.

ಬುಡಕಟ್ಟು ಜನರು ತಮ್ಮ ಮಕ್ಕಳಿಗೆ ಮದುವೆ ಮಾಡುವಾಗ ಜೆನೆಟಿಕ್ ಕೌನ್ಸಿಲಿಂಗ್ ಮಾಡಿಸಬೇಕು. ಒಂದು ವೇಳೆ ಅನಿಮೀಯಾ ಸಮಸ್ಯೆ ಇದ್ದರೆ ಮಕ್ಕಳಿಗೆ ಬರುವುದನ್ನು ತಡೆಗಟ್ಟಬಹುದು. ಚಿಕಿತ್ಸೆ ನೀಡಲು ಸಹಕಾರಿಯಾಗಲಿದೆ.

- ಡಾ.ಕೆ.ವಿ.ರಾಜೇಂದ್ರ, ಜಿಲ್ಲಾಧಿಕಾರಿಮೈಸೂರಿನ ಜಿಲ್ಲಾ ಆಸ್ಪತ್ರೆಗೆ ಮೂಲ ಸೌಕರ್ಯ ನೀಡಿದ್ದರಿಂದ ತುಂಬಾ ಅನುಕೂಲವಾಗಲಿದೆ. ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಸಚಿವರಲ್ಲಿ ಮನವಿ ಮಾಡುತ್ತೇನೆ.

- ಕೆ.ಹರೀಶ್ ಗೌಡ, ಶಾಸಕರು