ರಾಜ್ಯದಲ್ಲಿ ಕಲಾಕೇಂದ್ರ ಸ್ಥಾಪನೆಗೆ ಕ್ರಮ

| Published : Jul 04 2024, 01:05 AM IST

ಸಾರಾಂಶ

ಮೈಸೂರು, ಮಂಗಳೂರು, ಬೆಂಗಳೂರು, ಹಾಸನ ಹಾಗೂ ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಚಿತ್ರಕಲಾ ಕೇಂದ್ರಗಳನ್ನು ತೆರೆಯಲಾಗುವುದು

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕಲಾಸಕ್ತಿ ಬೆಳೆಸಲು ಕಲಾಕೇಂದ್ರ ಸ್ಥಾಪನೆ ಮತ್ತು ಕಾರ್ಯಾಗಾರದಂತ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಲಲಿತಾ ಕಲಾ ಅಕಾಡೆಮಿ ಅಧ್ಯಕ್ಷ ಪಿ. ಸಂಪತ್‌ ಕುಮಾರ್‌ ತಿಳಿಸಿದರು.

ಚಾಮರಾಜಪುರಂನ ರವಿವರ್ಮ ಕಲಾ ಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ಡಿಸೊನೆನ್ಸ್ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು, ಮಂಗಳೂರು, ಬೆಂಗಳೂರು, ಹಾಸನ ಹಾಗೂ ತುಮಕೂರಿನಲ್ಲಿ ಪ್ರಾಯೋಗಿಕವಾಗಿ ಚಿತ್ರಕಲಾ ಕೇಂದ್ರಗಳನ್ನು ತೆರೆಯಲಾಗುವುದು ಎಂದರು.

ಸಾರ್ವಜನಿಕರಲ್ಲಿ ಕಲಾಭಿರುಚಿ, ಕಲಾಭಿಮಾನ ಬೆಳೆಸುವುದು ಅಕಾಡೆಮಿ ಉದ್ದೇಶವಾಗಿದ್ದು, ರಾಜ್ಯದಲ್ಲಿ ಸುಮಾರು 600 ಕಲಾ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದ್ದೇವೆ. ಕಾಲೇಜು ವಿದ್ಯಾರ್ಥಿಗಳ್ಲಿ ಚಿತ್ರಕಲೆ ಕುರಿತು ಆಸಕ್ತಿ ಇರುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಕಾರ್ಯಾಗಾರಗಳನ್ನು ಆಯೋಜಿಸಿ ಪ್ರೋತ್ಸಾಹಿಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಪ್ರತಿ ಕಲಾವೃತ್ತದಲ್ಲಿ ಇಬ್ಬರು ತರಬೇತಿ ನೀಡುವ ಕಲಾವಿದರನ್ನು ನಿಯೋಜಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ವಿದ್ಯಾರ್ಥಿಗಳಿಗೆ ತರಬೇತಿ ನೀಡುವುದರಿಂದ ಕಲಾಭಿರುಚಿ ಬೆಳೆಯಲಿದೆ. ಸೃಜನಶೀಲ ಮನಸ್ಸುಗಳನ್ನು ಬೆಸೆಯಲಿದೆ. ಅದಲ್ಲದೇ ಎಲ್ಲ ಶಾಲಾ ಕಾಲೇಜುಗಳಲ್ಲಿ ಚಿತ್ರಕಲಾ ತರಬೇತಿಯನ್ನು ಕಲಾಶಾಲೆಗಳ ಅಂತಿಮ ವರ್ಷದ ವಿದ್ಯಾರ್ಥಿಗಳು ನೀಡಲಿದ್ದು, ಅವರಿಗೆ ಭತ್ಯೆಯನ್ನು ಅಕಾಡೆಮಿಯಿಂದ ನೀಡಲಾಗುವುದು ಎಂದು ಅವರು ತಿಳಿಸಿದರು.

ಸಿನಿಮಾ, ಸಂಗೀತ ಹಾಗೂ ಪ್ರದರ್ಶಕ ಕಲೆಗಳನ್ನು ನೋಡಲು ಪ್ರೇಕ್ಷಕರು ಬರುತ್ತಾರೆ. ಚಿತ್ರಕಲಾ ಪ್ರದರ್ಶನಗಳಿಗೆ ಭೇಟಿ ನೀಡುವ ಅಭಿರುಚಿಯುಳ್ಳವರು ಕಡಿಮೆ ಎಂಬ ಆರೋಪವಿದೆ. ಚಿತ್ರ ಕಲಾವಿದರು ಹಾಗೂ ಸಮಾಜದ ನಡುವೆ ಅಂತರ ಸೃಷ್ಟಿಯಾಗಿರುವುದೇ ಅದಕ್ಕೆ ಕಾರಣ. ಜನರ ಜೊತೆ ಕಲಾವಿದರನ್ನು ಬೆಸೆಯಲು ಅಕಾಡೆಮಿ ಕಾರ್ಯೋನ್ಮುಖವಾಗಿದೆ ಎಂದು ಅವರು ಹೇಳಿದರು.

35 ವರ್ಷದೊಳಗಿನ 10 ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಜೊತೆಗೆ ರಾಷ್ಟ್ರೀಯ ಮಟ್ಟದಲ್ಲಿ ಪರಿಪೂರ್ಣ ಕಲಾವಿದರಾಗಿಸಲಾಗುವುದು. ಪರಿಶಿಷ್ಟರಿಗೆ ವಿದ್ಯಾರ್ಥಿ ವೇತನ, ಮಹಿಳಾ ಕಲಾವಿದರಿಗೆ ಪ್ರೋತ್ಸಾಹಿಸಲು ಕಾರ್ಯಾಗಾರ ಹಾಗೂ ಪ್ರದರ್ಶನ ಮೇಳ ಆಯೋಜಿಸುವುದಾಗಿ ಅವರು ತಿಳಿಸಿದರು.

ಕಲಾಕೃತಿಗಳನ್ನು ಯಾರಾದರೂ ಬರೆಯಬಹುದು. ಆದರೆ, ಕೃತಿ ಭಾವನೆ ಹೊಮ್ಮಿಸಲು ಅನುಭವ ಶಕ್ತಿಯು ಕಲಾವಿದನಿಗೆ ಬೇಕಾಗುತ್ತದೆ. ಕಲಾ ಪರಂಪರೆಯನ್ನು ಬೆಳೆಸಲು ಕಲಾವಿದರು ಒಗ್ಗಟ್ಟಾಗಬೇಕು ಎಂದು ಅವರು ತಿಳಿಸಿದರು.

ಸಂಸ್ಥೆಯ ಪ್ರಾಂಶುಪಾಲ ಶಿವಕುಮಾರ್ ಕೆಸರಮಡು, ಕಲಾವಿದ ಪ್ರಭು ಹರಸೂರ್, ಶ್ರೀನಿವಾಸ, ಪರಮೇಶ್, ಅಭಿ ಇದ್ದರು.