ಯುವಜನಾಂಗ ದೇಸಿ ಸಂಸ್ಕೃತಿ ಮುನ್ನಡೆಸಲಿ: ಪ್ರೊ.ಕಮಲಾ ಸೊಪ್ಪಿನ

| Published : Jul 04 2024, 01:05 AM IST

ಸಾರಾಂಶ

ಬೇರೆ ಬೇರೆ ದೇಶಗಳ ಪ್ರಭಾವ ಭಾರತೀಯರ ಮೇಲೆ ಇದ್ದರೂ ನಮ್ಮ ಯುವಜನಾಂಗ ಮದುವೆ, ಹಬ್ಬದ ಸಂಭ್ರಮದಲ್ಲಿ ದೇಸಿ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತೋಷ ವಿಷಯ ಎಂದು ಪ್ರಾಚಾರ್ಯೆ ಪ್ರೊ.ಕಮಲಾ ಸೊಪ್ಪಿನ ಹೇಳಿದರು.

- ಎ.ವಿ.ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ದೇಸಿ ಕಲರವ-2024 ಉದ್ಘಾಟನೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ ಬೇರೆ ಬೇರೆ ದೇಶಗಳ ಪ್ರಭಾವ ಭಾರತೀಯರ ಮೇಲೆ ಇದ್ದರೂ ನಮ್ಮ ಯುವಜನಾಂಗ ಮದುವೆ, ಹಬ್ಬದ ಸಂಭ್ರಮದಲ್ಲಿ ದೇಸಿ ಸಂಸ್ಕೃತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತೋಷ ವಿಷಯ ಎಂದು ಪ್ರಾಚಾರ್ಯೆ ಪ್ರೊ.ಕಮಲಾ ಸೊಪ್ಪಿನ ಹೇಳಿದರು.

ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಎತ್ನಿಕ್‌ ಡೇ ಅಂಗವಾಗಿ ಬುಧವಾರ ನಡೆದ ದೇಸಿ ಕಲರವ-2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದ ಸಂಸ್ಕೃತಿ ತುಂಬಾ ಸಮೃದ್ಧವಾಗಿದ್ದು, ವಿದ್ಯಾರ್ಥಿಗಳು ಸಂಸ್ಕೃತಿಯನ್ನು ಮರೆಯದೇ ಜೀವನದಲ್ಲಿ ಪಾಲಿಸಿಕೊಂಡು ಹೋಗಬೇಕು ಎಂದರು.

ಎವಿಕೆ ಪ.ಪೂ. ಕಾಲೇಜಿನ ಪ್ರಾಚಾರ್ಯ ರವಿ ಬಣಕರಾರ್ ಮಾತನಾಡಿ, ದವಸ ಧಾನ್ಯಗಳನ್ನು ಕುಟ್ಟುವುದು, ಬೀಸುವುದು ನಮ್ಮ ಹಿರಿಯರ ಜೀವನ ಕ್ರಮ ಆಗಿತ್ತು. ಅದು ಕೇವಲ ಈಗ ಪ್ರದರ್ಶನವಾಗಿದೆ. ಅಂತಹ ಕ್ರಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಕಾರ್ಯಕ್ರಮ ಹಮ್ಮಿಕೊಂಡರೆ ಅರ್ಥಪೂರ್ಣವಾಗಿರಲಿದೆ ಎಂದು ತಿಳಿಸಿದರು.

ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಆರ್.ಆರ್. ಶಿವಕುಮಾರ, ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ. ಆರ್. ಚನ್ನಬಸವನ ಗೌಡ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ಪ್ರಭಾವತಿ ಎಸ್. ಹೊರಡಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಣಧೀರ. ಸಾಂಸ್ಕ್ರತಿಕ ಸಮಿತಿ ಸಂಯೋಜಕ ಡಾ.ಆರ್.ಜಿ.ಕವಿತ, ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಡಾ.ಗೀತಾ ಬಸವರಾಜ್, ಮಂಜುಳಾ ಉಪಸ್ಥಿತರಿದ್ದರು.

ಈ ದೇಸಿ ಕಲರವದಲ್ಲಿ ಕೊಡಗು, ಬಂಜಾರ, ಕೇರಳ, ಯಕ್ಷಗಾನ, ಮಹಾರಾಷ್ಟ್ರದ ಮರಾಠಿ ಶೈಲಿಯ ಉಡುಗೆ ಸೇರಿದಂತೆ ರಂಗುರಂಗಿನ ಧಿರಿಸು ತೊಟ್ಟ ವಿದ್ಯಾರ್ಥಿನಿಯರ ಕಲರವ ಕಾಲೇಜಿನ ಆವರಣದಲ್ಲಿ ಮನೆ ಮಾಡಿತ್ತು.

ಕಾಲೇಜಿನ ಪ್ರಾಧ್ಯಾಪಕರು ಸಹ ಹಳ್ಳಿ ಸೊಗಡಿನ ಉಡುಗೆ ತೊಟ್ಟು, ರಾಗಿ ಕುಟ್ಟಿ, ಅಕ್ಕಿ ಬೀಸಿ, ಶ್ಯಾವಿಗೆ ಮಾಡಿ, ಫ್ಯಾಷನ್ ಶೋನಲ್ಲಿ ಭಾಗವಹಿಸಿ, ಸಂಸ್ಕೃತಿ ಕಾಳಜಿ ಮೆರೆದರು. ವಿದ್ಯಾರ್ಥಿನಿಯರು ಯಕ್ಷಗಾನ ಪ್ರದರ್ಶನ ಪ್ರಸ್ತುತಪಡಿಸಿದರು.

- - - -3ಕೆಡಿವಿಜಿ37, 38ಃ:

ದಾವಣಗೆರೆಯ ಎವಿಕೆ ಮಹಿಳಾ ಕಾಲೇಜಿನಲ್ಲಿ ಎತ್ನಿಕ್‌ ಡೇ ಅಂಗವಾಗಿ ದೇಸಿ ಕಲರವ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿ ದೇಶದ ಸಂಸ್ಕೃತಿ ಬಿಂಬಿಸುವ ಉಡುಗೆ ತೊಟ್ಟು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.