ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಕನ್ನಂಬಾಡಿ ಅಣೆಕಟ್ಟೆ ಬಳಿ ಟ್ರಯಲ್ ಬ್ಲಾಸ್ಟ್ ನಡೆಸಲು ಅವಕಾಶ ನೀಡದಂತೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.ಕೆಆರ್‌ಎಸ್ ಪ್ರವೇಶ ದ್ವಾರದ ಬಳಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಕೆಂಪೂಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ರೈತರು ಯಾವುದೇ ಕಾರಣಕ್ಕೂ ಟ್ರಯಲ್ ಬ್ಲಾಸ್ಟ್ ನಡೆಸದಂತೆ ಘೋಷಣೆ ಕೂಗಿ ಜಿಲ್ಲಾಡಳಿತವನ್ನು ಆಗ್ರಹಿಸಿದರು.
ಬಡಗಲಪುರ ನಾಗೇಂದ್ರ ಮಾತನಾಡಿ, ಟ್ರಯಲ್ ಬ್ಲಾಸ್ಟ್‌ನಿಂದ ಕನ್ನಂಬಾಡಿ ಅಣೆಕಟ್ಟೆಗೆ ಧಕ್ಕೆಯಾಗಲಿದೆ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಅಣೆಕಟ್ಟೆಗೆ ಅಪಾಯ ಬಂದೊದಗಲಿದೆ. ಟ್ರಯಲ್ ಬ್ಲಾಸ್ಟ್‌ಗೆ ರೈತರ ತೀವ್ರ ವಿರೋಧದ ನಡುವೆಯೂ ಗಣಿ ಮಾಲೀಕರ ಕುಮ್ಮಕ್ಕಿಗೆ ಮಣಿದು ಸರ್ಕಾರ ಹಾಗೂ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿದೆ. ಕೂಡಲೇ ಟ್ರಯಲ್ ಬ್ಲಾಸ್ಟ್‌ನ ಸಿದ್ಧತೆ ನಿಲ್ಲಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಈ ವಿಚಾರವಾಗಿ ಜಿಲ್ಲೆಯ ಶಾಸಕರು, ಸಂಸದರು, ಮಂತ್ರಿಗಳು ಚಕಾರ ಎತ್ತದೆ ಇರುವುದು ಶೋಚನೀಯ. ಗಣಿಗಾರಿಕೆ ವಿಚಾರವಾಗಿ ಮಠಾಧೀಶರು ಮಾತನಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿದರು.
ಕೆಆರ್‌ಎಸ್ ಉಳಿಸಿ ಘೋಷಣೆ ಕೂಗಿದ ರೈತರು, ಒಂದು ವೇಳೆ ಜಿಲ್ಲಾಡಳಿತ ಟ್ರಯಲ್ ಬ್ಲಾಸ್ಟ್‌ಗೆ ಮುಂದಾಗಿದ್ದೇ ಆದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಎಚ್.ಎಲ್.ಪ್ರಕಾಶ್, ಪ್ರಿಯಾರಮೇಶ್, ಶಂಭೂಗೌಡ, ಪ್ರಸನ್ನ, ಪಾಂಡು, ಜಯರಾಮು, ಪಿ.ಆರ್.ರಮೇಶ್, ಪ್ರಭು, ವಿಜಿಕುಮಾರ್, ಮಹದೇವು, ಮಂಜು, ಕೃಷ್ಣ, ಲಿಂಗಪ್ಪಾಜಿ, ರವೀಂದ್ರ ಸೇರಿದಂತೆ ಹಲವರು ಇದ್ದರು.ರೈತ ಸಂಘದಿಂದ ಗೋ-ಬ್ಯಾಕ್ ಚಳವಳಿರೈತರ ಕಣ್ಣಿಗೆ ಮಂಕುಬೂದಿ ಎರಚಿ ಒಳಗೊಳಗೆ ಟ್ರಯಲ್ ಬ್ಲಾಸ್ಟ್‌ಗೆ ಸಿದ್ಧತೆ ನಡೆಸುತ್ತಿರುವ ವಿಷಯ ತಿಳಿದ ಹೋರಾಟಗಾರರು ಬುಧವಾರ ಬೆಳಗ್ಗೆ ಕೆಆರ್‌ಎಸ್ ಬಳಿ ಸೇರಿ ಗೋ-ಬ್ಯಾಕ್ ಚಳವಳಿ ನಡೆಸಿದರು. ಈ ಸಮಯದಲ್ಲಿ ಸ್ಥಳಕ್ಕೆ ಆಗಮಿಸಿದ ನೀರಾವರಿ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಟ್ರಯಲ್ ಬ್ಲಾಸ್ಟ್ ಸಂಬಂಧ ನಾವು ಹೈಕೋರ್ಟ್ ನೀಡುವ ನಿರ್ದೇಶನವನ್ನು ಎದುರುನೋಡುತ್ತಿದ್ದೇವೆ. ಗಣಿ ಇಲಾಖೆಯವರು ಕುಳಿಗಳನ್ನು ನಿರ್ಮಿಸುತ್ತಿರುವ ವಿಚಾರ ನಮಗೆ ಗೊತ್ತಿಲ್ಲ. ಈ ವಿಚಾರವಾಗಿ ನೀವು ಅವರನ್ನೇ ಕೇಳಬೇಕು ಎಂಬ ಉತ್ತರ ಬಂದಿತು.ಅಣೆಕಟ್ಟು ಸುರಕ್ಷತಾ ಸಮಿತಿ ರಚನೆಯಾಗದೆ ಹಾಗೂ ಹೈಕೋರ್ಟ್ ಆದೇಶವಿಲ್ಲದಿದ್ದರೂ ಪರೀಕ್ಷಾರ್ಥ ಸ್ಫೋಟವನ್ನು ಏಕಮುಖವಾಗಿ ನಡೆಸುತ್ತಿರುವುದಕ್ಕೆ ಮುಂದಾಗಿರುವ ನೀರಾವರಿ ಮತ್ತು ಗಣಿ ಇಲಾಖೆ ಅಧಿಕಾರಿಗಳ ನಿಲುವನ್ನು ತೀವ್ರವಾಗಿ ಖಂಡಿಸಿದರಲ್ಲದೇ, ಗಣಿಗಾರಿಕೆಗಾಗಿ ಅಣೆಕಟ್ಟೆಯನ್ನು ಬಲಿಕೊಡುವುದಕ್ಕೆ ಮುಂದಾಗಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಕೆಆರ್‌ಎಸ್ ಬೃಂದಾವನ ಗೇಟ್ ಮುಂದೆ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಟ್ರಯಲ್ ಬ್ಲಾಸ್ಟ್‌ಗೆ ಬೆಂಬಲವಾಗಿ ನಿಂತಿದ್ದಾರೆಂದು ಆರೋಪಿಸಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು, ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಟ್ರಯಲ್ ಬ್ಲಾಸ್ಟ್ ನಿಲ್ಲಿಸಿ, ಅಣೆಕಟ್ಟೆ ಉಳಿಸಿ, ಟ್ರಯಲ್ ಬ್ಲಾಸ್ಟ್ ಬೇಡವೇ ಬೇಡ. ಗೋ ಬ್ಯಾಕ್.. ಗೋ ಬ್ಯಾಕ್ ತಜ್ಞರ ತಂಡ ಗೋ ಬ್ಯಾಕ್ ಎಂದು ಘೋಷಣೆ ಕೂಗಿದರು.