ಡಿಮ್ಹಾನ್ಸ್‌ನ ಬೇಡಿಕೆ ಈಡೇರಿಸಲು ಕ್ರಮ

| Published : Apr 23 2025, 12:34 AM IST

ಸಾರಾಂಶ

ಸಂಸ್ಥೆಗೆ ಬೇಕಿರುವ ಬೇಡಿಕೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ ಬಳಿಯ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು. ಇದರ ಜತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು.

ಧಾರವಾಡ: ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್​)ನ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಯತ್ನಿಸಲಾಗುವುದು ಎಂದು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.

ನಗರದ ಡಿಮ್ಹಾನ್ಸ್​ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಸಂಸ್ಥೆಗೆ ಬೇಕಿರುವ ಬೇಡಿಕೆಗಳ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಶೀಲನೆ ನಡೆಸಿದ ಬಳಿಯ ಆದ್ಯತೆ ಮೇರೆಗೆ ಕ್ರಮಕೈಗೊಳ್ಳಲಾಗುವುದು. ಇದರ ಜತೆಗೆ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದರು.

ಇದಕ್ಕೂ ಪೂರ್ವದಲ್ಲಿ ಸಂಸ್ಥೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಸಂಸ್ಥೆಯಲ್ಲಿನ ಸೌಕರ್ಯ, ಕಾರ್ಯವೈಖರಿ, ಸಿಬ್ಬಂದಿ ಸಂಖ್ಯೆ, ಜಾರಿಗೊಳಿಸಿರುವ ಯೋಜನೆಗಳು ಸೇರಿ ಸಂರ್ಪೂಣ ಮಾಹಿತಿ ಪಡೆದರು. ಇದೇ ಸಂದರ್ಭದಲ್ಲಿ 30 ಹಾಸಿಗೆಯುಳ್ಳ ಡಿ-ಅಡಿಕ್ಷನ್​ ವಾರ್ಡ್​, 30 ಹಾಸಿಗೆಯ ಮಕ್ಕಳ ವಾರ್ಡ್​, 60 ವಿದ್ಯಾರ್ಥಿಗಳ ವೈದ್ಯಕೀಯ ಪಿಜಿ ವಸತಿ ನಿಲಯ ಸೇರಿ ಸುಮಾರು ₹40 ಕೋಟಿ ಮೊತ್ತ ವಿವಿಧ ಯೋಜನೆಗಳ ಪ್ರಸ್ತಾವನೆ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿವಿಧ ಕಂಪನಿಗಳ ಸಿಎಸ್​ಆರ್​ ಅಡಿ ಕೈಗೊಳ್ಳುವ ಕಾಮಗಾರಿಗೆ ಸ್ಥಳಿಯವಾಗಿಯೇ ಪ್ರಯತ್ನಿಸಿ. ಅದು ಸಾಧ್ಯವಾಗದೇ ಇದ್ದಲ್ಲಿ ಪ್ರಸ್ತಾವನೆ ಸಲ್ಲಿಸಿದರೆ ಆದ್ಯತೆಯ ಮೇರೆಗೆ ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸಂಸ್ಥೆಯ ಆಡಳಿತ ಅಧಿಕಾರಿ ಮೇಜರ್​ ಸಿದ್ದಲಿಂಗಯ್ಯ ಹಿರೇಮಠ, ನಿರ್ದೇಶಕ ಅರುಣಕುಮಾರ ಸಿ, ವೈದ್ಯಕಿಯ ಅಧೀಕ್ಷಕ ಡಾ. ರಾವೇಂದ್ರ ನಾಯಕ, ವಿವಿಧ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ಸೇರಿದಂತೆ ಹಲವರಿದ್ದರು.

ಜಾತಿಗಣತಿ ಬಗ್ಗೆ ಮುಂದಿನ ಸಭೆಯಲ್ಲಿ ಅಂತಿಮ ನಿರ್ಣಯ

ಹುಬ್ಬಳ್ಳಿ: ಜಾತಿಗಣತಿ ಕುರಿತು ಚರ್ಚೆಗಳು ನಡೆದಿವೆ. ಸಚಿವ ಸಂಪುಟದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆಯೇ ಹೊರತು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿಲ್ಲ. ಸಿಎಂ ಸಿದ್ದರಾಮಯ್ಯ ಎಲ್ಲ ಸಚಿವರಿಗೆ ಅಭಿಪ್ರಾಯ ಹಂಚಿಕೊಳ್ಳಲು ಮುಕ್ತ ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.ಸುದ್ದಿಗಾರರ ಜತೆ ಮಾತನಾಡಿ, ವಿದೇಶದಲ್ಲಿ ರಾಹುಲ್ ಗಾಂಧಿ ಭಾರತದ ಸಂವಿಧಾನ ಬಗ್ಗೆ ಹಗುರವಾಗಿ, ದೇಶದ ಕುರಿತು ಅವಹೇಳನಕಾರಿಯಾಗಿ ಏನೂ ಮಾತನಾಡಿಲ್ಲ. ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ ಅಷ್ಟೇ. ಪ್ರಧಾನಿ ಮೋದಿ ಸಹ ಈ ಹಿಂದೆ ಸಾಕಷ್ಟು ಬಾರಿ ವಿದೇಶದಲ್ಲಿ ಇಲ್ಲಿನ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ. ಈ ಕುರಿತು ಹೆಚ್ಚಿಗೆ ಪ್ರತಿಕ್ರಿಯಿಸಲಾರೆ ಎಂದರು.