ಸಾರಾಂಶ
ಶಿರಸಿ: ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅವ್ಯವಹಾರ ನಡೆದಿರುವುದು ಪತ್ರಿಕೆಗಳಲ್ಲಿ ಪ್ರಕಟವಾದ ಬಳಿಕ ನನ್ನ ಗಮನಕ್ಕೆ ಬಂದಿದ್ದು, ಆ ಬಳಿಕ ಕಾಲೇಜು ಅಭಿವೃದ್ಧಿ ಸಮಿತಿಗೆ ಸೂಚನೆ ನೀಡಿ, ನಿವೃತ್ತ ಪ್ರಾಂಶುಪಾಲರ ಬಳಿ ಪ್ರತಿಯೊಂದು ಲೆಕ್ಕ ಮತ್ತು ದಾಖಲೆಪತ್ರಗಳನ್ನು ಪಡೆದು ಜವಾಬ್ದಾರಿ ವಹಿಸಕೊಳ್ಳಲು ಇಂದಿನ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದೇನೆ. ತನಿಖೆ ನಡೆಸಲು ಕಾಲೇಜು ಶಿಕ್ಷಣ ಇಲಾಖೆಯ ಸಂಯುಕ್ತ ನಿಬಂಧಕರ ಜತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಭೀಮಣ್ಣ ನಾಯ್ಕ ತಿಳಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ಹೊಸ ಅಭಿವೃದ್ಧಿ ಸಮಿತಿ ರಚನೆ ಮಾಡಿ, ಆಡಳಿತ ವ್ಯವಸ್ಥಿತ ರೀತಿಯಲ್ಲಿ ಅಚ್ಚುಕಟ್ಟಾಗಿ ನಡೆಸಬೇಕು. ಪ್ರತಿ ತಿಂಗಳಿಗೊಮ್ಮೆ ಮಾತ್ರವಲ್ಲದೇ, ವಾರಕ್ಕೊಮ್ಮೆ ಸಭೆ ನಡೆಸುವಂತೆ ಸಭೆ ನಡೆಸಿ, ಕಾಲೇಜಿನ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು ಎಂದು ಸೂಚನೆ ನೀಡಿದ್ದೇನೆ ಎಂದರು.ಹಿಂದಿನ ಶಾಸಕರು, ಹಿಂದಿನ ಅಭಿವೃದ್ಧಿ ಸಮಿತಿ ಏನು ಮಾಡಿದೆ ಎಂಬುದು ನನ್ನ ಗಮನಕ್ಕಿಲ್ಲ. ಆ ಸಮಿತಿಯನ್ನು ದೂರಲು ಇಷ್ಟಪಡುವುದಿಲ್ಲ. ಪ್ರಾಂಶುಪಾಲರು ನಿವೃತ್ತಿಯಾದ ಬಳಿಕ ಅಧಿಕಾರ ವಹಿಸಿಕೊಳ್ಳುವ ಪ್ರಾಂಶುಪಾಲರು ಲೆಕ್ಕಪತ್ರ, ಖರ್ಚುವೆಚ್ಚ, ಸರ್ಕಾರದಿಂದ ಮಂಜೂರಾಗಿರುವ ಅನುದಾನ, ಮಕ್ಕಳಿಂದ ಪಡೆದ ಫೀ ಎಲ್ಲ ಸಂಪೂರ್ಣ ಮಾಹಿತಿಯನ್ನು ಹಿಂದಿನ ಪ್ರಾಂಶುಪಾಲರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದೆ. ಆ ಪ್ರಕಾರವಾಗಿ ಕಾಲಾವಕಾಶ ಬೇಕು ಎಂದು ತಿಳಿಸಿದ್ದರು. ಆದರೆ ಹಿಂದಿನ ಪ್ರಾಂಶುಪಾಲರು ಚಾರ್ಜ್ ವಹಿಸಿಕೊಳ್ಳುತ್ತಿಲ್ಲ ಎಂದು ತಿಳಿಸಿದಾಗ ಸಂಪೂರ್ಣ ಮಾಹಿತಿಯನ್ನು ಪಡೆದು ಜಾರ್ಚ್ ವಹಿಸಿಕೊಳ್ಳಲು ನಾನೇ ಸೂಚನೆ ನೀಡಿದ್ದೇನೆ ಎಂದು ಹೇಳಿದಾಗ ವಾಪಸ್ಸು ತೆರಳಿದ್ದಾರೆ. ಅವ್ಯವಹಾರದ ಕುರಿತು ತನಿಖೆ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಕಾಲೇಜಿನ ೧೬ ಬ್ಯಾಂಕ್ ಖಾತೆಗಳಿದ್ದು, ಖರ್ಚು- ವೆಚ್ಚದ ಪೂರ್ಣ ಮಾಹಿತಿ ಇನ್ನೂ ಕೊಟ್ಟಿಲ್ಲ. ಇದರಿಂದ ಅನಾನೂಕೂಲ ಉಂಟಾಗುತ್ತಿದೆ. ದಾಖಲೆಪತ್ರಗಳನ್ನು ಇಟ್ಟಿರುವ ಕಪಾಟ್‌ನ್ನು ಸೀಲ್ ಮಾಡಿ ಹೋಗಿದ್ದಾರೆ. ಇದರ ಕುರಿತು ಸಂಯುಕ್ತ ನಿಬಂಧಕರ ಬಳಿ ಚರ್ಚಿಸಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಎಂ.ಎಂ. ಕಮನಳ್ಳಿ, ಪ್ರಾಂಶುಪಾಲೆ ಮಂಜುಳಾ ಪೂಜಾರ ಹಾಗೂ ಸಮಿತಿಯ ಸದಸ್ಯರು ಇದ್ದರು.ಉಪನ್ಯಾಸಕರಲ್ಲಿ ಗುಂಪುಗಾರಿಕೆ
ಉಪನ್ಯಾಸಕರ ಮಧ್ಯೆ ಗುಂಪುಗಾರಿಕೆ ಇದೆ ಎಂದು ತಿಳಿದು ಬಂದಿದೆ. ಉಪನ್ಯಾಸಕರ ಜತೆ ಸಭೆ ನಡೆಸಿ ಚರ್ಚಿಸುತ್ತೇನೆ. ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಣ ಸಂಸ್ಥೆಯಲ್ಲಿ ಇಂತಹ ವ್ಯವಸ್ಥೆಯನ್ನು ಖಂಡಿತ ಸಹಿಸಲು ಸಾಧ್ಯವಿಲ್ಲ. ಹಂತ- ಹಂತವಾಗಿ ವ್ಯವಸ್ಥೆಯನ್ನು ಸರಿದಾರಿಗೆ ತರಲಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.