ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಎಪಿಎಂಸಿ ಮಾರುಕಟ್ಟೆಗಳಲ್ಲಿ ಮದ್ಯವರ್ತಿಗಳು, ದಲ್ಲಾಳಿಗಳ ಹಾವಳಿ ತಡೆಗಟ್ಟಿ ರೈತರು ಮತ್ತು ವರ್ತಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ನಗರದ ಅಂತರಸನಹಳ್ಳಿಯಲ್ಲಿರುವ ಎಪಿಎಂಪಿ ಪ್ರಾಂಗಣದಲ್ಲಿ ತರಕಾರಿ, ಹೂವು, ಹಣ್ಣು, ವಿಳ್ಯದೆಲೆ ಮಾರಾಟಗಾರರ ಸಂಘ ದಿಂದ ಆಯೋಜಿಸಿದ್ದ ಅಭಿನಂಧನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ನಮ್ಮದು ಕೃಷಿ ಪ್ರಧಾನ ಸಮಾಜ. ಇದುವರೆಗು ಆಡಳಿತ ನಡೆಸಿರುವ ಯಾವ ಸರಕಾರದಲ್ಲಿಯೂ ರೈತರ ಬೆಳೆಗಳಿಗೆ ಸೂಕ್ತ ಬೆಲೆ ಸಿಕ್ಕಿಲ್ಲ. ಎಂ.ಎಸ್.ಪಿ ಯಲ್ಲಿ ಖರೀದಿಸುವ ಪ್ರಮಾಣಕ್ಕೆ ಮಿತಿ ಇದೆ. ಇದರಿಂದ ದೊಡ್ಡ ರೈತರಿಗೆ ಹೊಡೆತ ಬೀಳಲಿದೆ. ಅಲ್ಲದೆ ಎಂ.ಎಸ್.ಪಿಯಲ್ಲಿ ಖರೀದಿಸುವ ಬೆಳೆಗಳಿಗೆ ಒಂದು ವರ್ಷವಾದರೂ ಹಣ ಬರುವುದಿಲ್ಲ. ಇದರ ಅನುಭವ ನನಗೂ ಆಗಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಹಲವಾರು ಬದಲಾವಣೆಗಳನ್ನು ತಂದು ರೈತರು ಮತ್ತು ವರ್ತಕರನ್ನು ಶಕ್ತಿ ಶಾಲಿಗೊಳಿಸಲಾಗಿದೆ ಎಂದರು.ಪ್ರಸ್ತುತ ತರಕಾರಿ, ಹೂವು, ಹಣ್ಣು,ವಿಳ್ಯದೆಲೆ ಮಾರಾಟಗಾರರ ಸಂಘ ನೀಡಿರುವ ಸಂಘದ ಕಚೇರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದರೆ ತಕ್ಷಣವೇ ಕ್ರಮ ಕೈಗೊಳ್ಳಲು ಸಿದ್ದ. ಹಾಗೆಯೇ ಪಾರ್ಕಿಂಗ್ ವ್ಯವಸ್ಥೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಪಾಲಿಕೆಯ ಆಯುಕ್ತರು ಮತ್ತು ಜಿಲ್ಲಾ ಎಸ್ಪಿ ವರಿಗೆ ಸೂಚನೆ ನೀಡಿದರು.ಎಪಿಎಂಸಿ ಮಾರುಕಟ್ಟೆಯಲ್ಲಿರುವ ಬಹುತೇಕ ಜನ ಅಗ್ನಿವಂಶ ಕ್ಷತ್ರಿಯ ಸಮುದಾಯಕ್ಕೆ ಸೇರಿದವರು. ಶ್ರಮಜೀವಿಗಳು ೫೦/೫೦ ಜಾಗ ಸಿಕ್ಕರೂ ಅದರಲ್ಲಿಯೇ ಸೊಪ್ಪು, ತರಕಾರಿ ಬೆಳೆದು ಜೀವನ ನಡೆಸುತ್ತಾರೆ. ಇಂತಹ ಕಷ್ಟ ಜೀವಿಗಳಿಗೆ ಸಹಕಾರ ನೀಡುವುದು ನಮ್ಮ ಕೆಲಸ. ಹಾಗಾಗಿ ನಿಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದೇನೆ. ಇದಕ್ಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಅವರ ಒಪ್ಪಿಗೆ ಪಡೆದೆ ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದರು. ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶಗೌಡ ಮಾತನಾಡಿ, ಭೋಗ್ಯಕ್ಕಿದ್ದ ಅಂಗಡಿ ಮಳಿಗೆಗಳು ಈ ಸರಕಾರದ ದೃಢ ನಿರ್ಧಾರದಿಂದ ಸ್ವಂತ ಆಸ್ತಿಯಾಗಿ ಮಾರ್ಪಾಡಾಗಿವೆ. ಇದಕ್ಕಾಗಿ ಸರಕಾರಕ್ಕೆ ನಿಮ್ಮ ಪರವಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ರೈತ ಬೆಳೆದರೆ ಮಾತ್ರ ಅನ್ನ. ಹಾಗಾಗಿ ರೈತನಿಗೆ ಮೊದಲ ಅದ್ಯತೆ ನೀಡಬೇಕಾಗಿದೆ. ಇಲ್ಲಿನ ಕೃಷಿ ಉತ್ಪನ್ನಗಳು ವಿದೇಶಗಳಿಗೂ ಆಮದಾಗುವ ರೀತಿ ಜಿಲ್ಲಾ ಉಸ್ತುವಾರಿ ಸಚಿವರು ಕ್ರಮ ಕೈಗೊಳ್ಳಬೇಕು ಎಂದರು.ಪತ್ರಕರ್ತ ಡಾ.ಎಸ್.ನಾಗಣ್ಣ ಮಾತನಾಡಿದರು. ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಮಾರುತಿ ಶಂಕರ್ ನರಸಿಂಹಮೂರ್ತಿ, ಪಾಲಿಕೆ ಮಾಜಿ ಸದಸ್ಯರಾದ ಶ್ರೀನಿವಾಸ್, ಮಹೇಶ್, ರವೀಶ್ ಜಹಂಗೀರ್,ಡಿಸಿಸಿ ಅಧ್ಯಕ್ಷ ಜಿ.ಚಂದ್ರಶೇಖರಗೌಡ,ಮಾಜಿ ಅಧ್ಯಕ್ಷ ರಾಮಕೃಷ್ಣಪ್ಪ, ಟಿ.ಎನ್.ಮಧುಕರ್, ರಾಕ್ ಲೈನ್ ರವಿಕುಮಾರ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ., ಪಾಲಿಕೆ ಆಯುಕ್ತರಾದ ಅಶ್ವಿಜ. ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಪುಷ್ಪ, ಅಧಿಕಾರಿ ರಾಜಣ್ಣ,ತರಕಾರಿ, ಹೂವು, ಹಣ್ಣು,ವಿಳ್ಯದೆಲೆ ಮಾರಾಟಗಾರರ ಸಂಘದ ರಾಮಣ್ಣ, ಪಾಪಣ್ಣ, ಆನಂದ್, ಅನಿಲ್, ಟಿ.ಹೆಚ್.ವಾಸುದೇವ್, ಮರಿಗಂಗಯ್ಯ ಸೇರಿದಂತೆ ಹಲವರು ಉಸಪ್ಥಿತರಿದ್ದರು.