ಸಾರಾಂಶ
ಕುಂದಗೋಳ: ತಾಲೂಕಿನಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಯಿಂದಾಗಿ ಕಟಾವಿಗೆ ಬಂದಿದ್ದ ಹೆಸರು, ಉದ್ದು ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ. ಇದರಿಂದ ರೈತರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಬಾರದು. ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕ ಎಂ.ಆರ್. ಪಾಟೀಲ್ ಭರವಸೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತಿವೃಷ್ಟಿಯಿಂದಾದ ಬೆಳೆಹಾನಿ ಕುರಿತು ಮಾಹಿತಿ ನೀಡಿದರು.ಈ ಬಾರಿ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಸಕಾಲದಲ್ಲಿ ಬಿತ್ತನೆ ಮಾಡಿದ್ದರು. ಬೆಳೆಯೂ ಉತ್ತಮವಾಗಿ ಬಂದಿತ್ತು. ಆದರೆ, ನಿರಂತರವಾಗಿ ಸುರಿದ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ತ್ವರಿತ ಸಮೀಕ್ಷೆ, ವರದಿ ಸಲ್ಲಿಕೆ: ತಾಲೂಕಿನಲ್ಲಿ 13 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಹೆಸರು ಬೆಳೆಯ ಪೈಕಿ 11,785 ಹೆಕ್ಟೇರ್, 2,700 ಹೆಕ್ಟೇರ್ ಉದ್ದು ಬೆಳೆಯ ಪೈಕಿ 1,634 ಹೆಕ್ಟೇರ್ ಹಾಗೂ 282 ಹೆಕ್ಟೇರ್ ಬೆಳ್ಳುಳ್ಳಿ ಬೆಳೆಯ ಪೈಕಿ 244 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾದ ಬಗ್ಗೆ ವರದಿ ಬಂದಿದೆ. ಈ ವರದಿಯನ್ನು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಅಲ್ಲದೆ, ರಾಜ್ಯಮಟ್ಟದ ಅಧಿಕಾರಿಗಳ ತಂಡವೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಎನ್‌ಡಿಆರ್‌ಎಫ್ ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರದ ವಿಶೇಷ ಅನುದಾನದಡಿ ರೈತರಿಗೆ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.ಇತರೆ ಬೆಳೆಗಳಾದ ಗೋವಿನಜೋಳ, ಹತ್ತಿ ಮತ್ತು ಸೋಯಾಬಿನ್ ಹಾನಿಯ ಸಮೀಕ್ಷೆಯನ್ನು ಬೆಳೆ ಕಟಾವಿನ ಸಮಯದಲ್ಲಿ (ಇಳುವರಿ ಆಧಾರದ ಮೇಲೆ) ನಡೆಸಿ ವರದಿ ಸಲ್ಲಿಸಲಾಗುವುದು ಎಂದು ಶಾಸಕರು ಹೇಳಿದರು.
ಆಕ್ಷೇಪಣೆಗೆ ಸೆ. 7 ಕೊನೆಯ ದಿನ: ಈಗಾಗಲೇ ಹಾನಿಗೊಳಗಾದ ರೈತರ ಪಟ್ಟಿಯನ್ನು ಸಿದ್ಧಪಡಿಸಿ ಗ್ರಾಪಂ, ಗ್ರಾಮ ಚಾವಡಿ ಹಾಗೂ ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗಿದೆ. ರೈತರು ಈ ಪಟ್ಟಿಯನ್ನು ಪರಿಶೀಲಿಸಿ, ಒಂದು ವೇಳೆ ತಮ್ಮ ಹೆಸರು ಅಥವಾ ಸರ್ವೇ ನಂಬರ್ ಬಿಟ್ಟು ಹೋಗಿದ್ದರೆ, ಸೆ. 7ರ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಸಮಯಾವಕಾಶ ವಿಸ್ತರಿಸಲಾಗುವುದಿಲ್ಲ ಎಂದರು.ಈ ವೇಳೆ ಮಾತನಾಡಿದ ತಹಶೀಲ್ದಾರ್ ರಾಜು ಮಾವರಕರ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳ ವರದಿ ಸಿದ್ಧಪಡಿಸಲಾಗಿದೆ. ಇದರಲ್ಲಿ ರೈತರ ಹೆಸರುಗಳು ಬಿಟ್ಟು ಹೋಗಿದ್ದರೆ ಅಥವಾ ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದರೆ, ಸೆ. 7ರ ಒಳಗಾಗಿ ತಮ್ಮ ಆಕ್ಷೇಪಣೆ ಸಲ್ಲಿಸಬಹುದು ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ, ತೋಟಗಾರಿಕೆ ಇಲಾಖೆ ಅಧಿಕಾರಿ ಉಮೇಶ ಉಳ್ಳಾಗಡ್ಡಿ, ಮುಖಂಡರಾದ ಮಾಲತೇಶ ಶ್ಯಾಗೋಟಿ, ದಾನಪ್ಪ ಗಂಗಾಯಿ, ವಾಗೀಶ ಮಣಕಟ್ಟಿಮಠ, ಕಲ್ಲಪ್ಪ ಹರಕುಣಿ, ಹೇಮನಗೌಡ ಬಸನಗೌಡ್ರ, ಬಸವರಾಜ ಹರವಿ, ವೆಂಕನಗೌಡ ಕಂಠೇಪ್ಪಗೌಡ್ರ, ಫಕ್ಕೀರಪ್ಪ ಪೂಜಾರ, ದೇವೇಂದ್ರ ಇಚ್ಚಗಿ, ಯಲ್ಲಪ್ಪ ಶಿಗ್ಗಾಂವ, ಟಾಕಪ್ಪ ಬಂಡಿವಾಡ, ಬಸವರಾಜ ಯೋಗಪ್ಪನವರ, ಸತೀಶ ಪಾಟೀಲ, ಹರೀಶ ಕೋನೇರಿ ಸೇರಿದಂತೆ ಅನೇಕರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))