ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ:ಶಾಸಕ ತಮ್ಮಯ್ಯ

| Published : Nov 24 2024, 01:46 AM IST

ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ಕ್ರಮ:ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕಾಡಾನೆಗಳು ಜನ ವಸತಿ ಪ್ರದೇಶಕ್ಕೆ ಬರದಂತೆ ಶಾಶ್ವತ ಪರಿಹಾರೋಪಾಯ ಕಂಡುಕೊಳ್ಳಬೇಕು. ಇದರ ಜತೆಗೆ ಬೆಳೆ ಹಾನಿಯಾಗಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದ್ದಾರೆ.

ಆನೆಗಳ ಓಡಾಟದಿಂದ ಹಾನಿ । ಹಲವು ಪ್ರದೇಶಕ್ಕೆ ಅಧಿಕಾರಿಗಳ ಸಹಿತ ಭೇಟಿ ನೀಡಿದ ಪರಿಶೀಲನೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕಾಡಾನೆಗಳು ಜನ ವಸತಿ ಪ್ರದೇಶಕ್ಕೆ ಬರದಂತೆ ಶಾಶ್ವತ ಪರಿಹಾರೋಪಾಯ ಕಂಡುಕೊಳ್ಳಬೇಕು. ಇದರ ಜತೆಗೆ ಬೆಳೆ ಹಾನಿಯಾಗಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ಶಾಸಕ ಎಚ್‌.ಡಿ. ತಮ್ಮಯ್ಯ ಹೇಳಿದ್ದಾರೆ.

ಕಾಡಾನೆಗಳ ಹಾವಳಿಯಿಂದ ಹಾನಿಯಾಗಿರುವ ತಾಲೂಕಿನ ಕೆಸವಿನ ಮನೆ, ಮೆಣಸಿನ ಮಲ್ಲೆದೇವರಹಳ್ಳಿ, ಕದ್ರಿಮಿದ್ರಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಶನಿವಾರ ಭೇಟಿ ಮಾಡಿ ಮಾತನಾಡಿದ ಶಾಸಕರು, ಆನೆಗಳನ್ನು ಕಾಡಿಗೆ ಓಡಿಸಬೇಕು ಹಾಗೂ ಬೆಳೆ ಹಾನಿಗಾಗಿ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದರು.

ಇಂದು ಡಿಎಫ್‌ಒ, ಆರ್.ಎಫ್.ಒ, ಎಸಿಎಫ್, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಹಿತ ಗ್ರಾಮ ಪಂಚಾಯಿತಿ ಅಧ್ಯಕ್ಷರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇವೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹಾಗೂ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಕಂದಾಯ ಸಚಿವರೊಂದಿಗೆ ಎಲ್ಲಾ ಶಾಸಕರು ಸಭೆ ನಡೆಸಿ ಚರ್ಚಿಸಿದ್ದೇವೆ ಎಂದರು.ರಾಜ್ಯದಲ್ಲಿ ಪ್ರಸ್ತುತ 6,650 ಕಾಡಾನೆಗಳಿವೆ ಎಂದು ಇಲಾಖೆ ಮಾಹಿತಿ ಇದೆ. ಈಗ ಆನೆಗಳ ಸಂತತಿ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಆನೆ ಕಾರಿಡಾರ್, ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕೆಂಬ ಬಗ್ಗೆ ಮುಂದಿನ ಚಳಿ ಗಾಲದ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿ ಭದ್ರಾ ಅಭಯಾರಣ್ಯಕ್ಕೆ ಕಾಡಾನೆಗಳನ್ನು ಸ್ಥಳಾಂತರಿಸಲು ಚರ್ಚಿಸಲಾಗಿದೆ ಎಂದು ಹೇಳಿದರು.ಕಾಡಾನೆಗಳು ರೈತರು ಬೆಳೆದ ಭತ್ತ, ಅಡಕೆ, ಕಾಫಿ, ಶುಂಠಿ ಮುಂತಾದ ಬೆಳೆಗಳನ್ನು ನಾಶ ಮಾಡಿದ್ದು, ರೈತರಿಗೆ ಪರಿಹಾರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವ ಜೊತೆಗೆ ಕಾಡಾನೆಗಳು ಅರಣ್ಯದಿಂದ ವಲಸೆ ಬರುವುದನ್ನು ತಡೆಯಲು ಚಳಿಗಾಲದ ಅಧಿವೇಶನದಲ್ಲಿ ಪ್ರತ್ಯೇಕ ಸಭೆ ನಡೆಸುವಂತೆ ಸರ್ಕಾರಕ್ಕೆ ಕೋರಿಕೊಳ್ಳಲಾಗುವುದು ಎಂದರು.

ಆಹಾರ, ಕುಡಿಯುವ ನೀರಿನ ಕೊರತೆಯಿಂದ ಆನೆಗಳು ಕಬ್ಬು, ಬಾಳೆ, ಭತ್ತ ಮುಂತಾದ ಬೆಳೆಗಳನ್ನು ತಿನ್ನಲು ನಾಡಿಗೆ ಬರುತ್ತಿವೆ. ಈ ಸಂಬಂಧ ಅರಣ್ಯದಲ್ಲಿಯೇ ವನ್ಯ ಜೀವಿಗಳಿಗೆ ಪೂರಕ ಆಹಾರ ಬೆಳೆ ಬೆಳೆಯಲು ಯೋಜನೆ ರೂಪಿಸು ವುದಾಗಿ ತಿಳಿಸಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಮಾತನಾಡಿ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಆನೆಗಳು ಬಂದಿದ್ದು, ಈಗಾಗಲೇ ಕಳೆದ ಬಾರಿ ಹಾನಿಯಾಗಿದ್ದ ಬೆಳೆ ಪರಿಹಾರವನ್ನು ಸಂಬಂಧಿಸಿದ ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದರು.

ಮುಂದಿನ ವರ್ಷದ ಮಳೆಗಾಲದಲ್ಲಿ ಸಾರಗೋಡು ಅರಣ್ಯ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಬಿದುರು ಗಿಡಗಳನ್ನು ನೆಡಲು ಯೋಜನೆ ರೂಪಿಸಲಾಗುತ್ತಿದೆ. ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಪೂರಕ ಆಹಾರ ಗಿಡಗಳನ್ನು ಬೆಳೆಯಲು ಕ್ರಿಯಾ ಯೋಜನೆ ತಯಾರಿಸಲಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯ್ತಿಗಳ ಪ್ರತಿನಿಧಿಗಳು ಇದ್ದರು.--- ಬಾಕ್ಸ್‌ ----ವನ್ಯಜೀವಿ ಸಂಘರ್ಷ ತಡೆಯುವಲ್ಲಿ ಎಲ್ಲಾ ಸರ್ಕಾರಗಳು ವಿಫಲ: ಎಂ.ಎಲ್‌. ಮೂರ್ತಿಚಿಕ್ಕಮಗಳೂರು: ರೈತರು ಹಾಗೂ ಆನೆ ಸೇರಿದಂತೆ ಇತರೆ ವನ್ಯ ಜೀವಿಗಳಿಗೆ ತೊಂದರೆಯಾಗದ ರೀತಿಯಲ್ಲಿ ನೈಸರ್ಗಿಕ ಕಾಡು ಬೆಳೆಸುವಲ್ಲಿ ಪಕ್ಷಾತೀತವಾಗಿ ಎಲ್ಲಾ ಸರ್ಕಾರಗಳು ವಿಫಲವಾಗಿವೆ. ಸರಿಯಾದ ಪರಿಕಲ್ಪನೆ ಇಲ್ಲದ ಅಧಿಕಾರಿಗಳು ಅರಣ್ಯ ಇಲಾಖೆಯಲ್ಲಿರುವುದರಿಂದ ಆಗಬೇಕಿರುವ ಕೆಲಸಗಳು ಅರ್ಥಪೂರ್ಣವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆನೆಗಳಿಗೆ ಸೂಕ್ತ ಆಹಾರವನ್ನು ಅರಣ್ಯಗಳಲ್ಲಿ ಕಲ್ಪಿಸುವ ಮುಖಾಂತರ ಆನೆ ಹಾವಳಿ ತಡೆಯಬಹುದಾಗಿದ್ದರೂ ಉದ್ದೇಶ ಪೂರ್ವಕವಾಗಿ ಆನೆಗಳಿಗೆ ಅಗತ್ಯವಿರುವ ಆಹಾರ ಕಾಡಿನಲ್ಲಿ ಬೆಳೆಯದೆ ಆನೆಗಳು ನಾಡಿಗೆ ಬರುವಲ್ಲಿ ಅರಣ್ಯ ಇಲಾಖೆ ತನ್ನ ಪಾತ್ರ ನಿರ್ವಹಿಸುತ್ತಿದೆ ಎಂದು ಆರೋಪಿಸಿದರು.

ಆನೆ ಸೇರಿದಂತೆ ವನ್ಯ ಪ್ರಾಣಿಗಳಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಕಾಡಿನಲ್ಲಿ ನೈಸರ್ಗಿಕವಾಗಿ ಲಭ್ಯವಾಗುವಂತೆ ಕ್ರಮ ಕೈಗೊಂಡರೆ ವನ್ಯಜೀವಿಗಳು ಹಾಗೂ ಮಾನವರ ಸಂಘರ್ಷ ಗಣನೀಯವಾಗಿ ಕಡಿಮೆಯಾಗುತ್ತದೆ. ಇನ್ನಾದರೂ ಸರ್ಕಾರ ಎಚ್ಚೆತ್ತು ಪರಿಣಿತರ ಹಾಗೂ ರೈತರ ಸಭೆ ನಡೆಸಿ ಸಲಹೆ ಪಡೆದು ವನ್ಯಜೀವಿ ಹಾಗೂ ಮಾನವ ಸಂಘರ್ಷ ತಡೆಯಲು ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಡಿನಲ್ಲಿ ಮಾವು, ಬಿದಿರು, ಬೈನೆ, ಬಾಳೆ, ಹೊಂಗೆ, ತಡಚಲು, ಹಲಸು ಮರಗಳನ್ನು ಬೆಳೆಸಿದರೆ ವನ್ಯಜೀವಿಗಳು ಆಹಾರ ಅರಸಿ ನಾಡಿನತ್ತ ಬರುವುದು ತಪ್ಪುತ್ತದೆ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಕಾಡಿನಲ್ಲಿ ವಿದೇಶಿ ಮರವಾಗಿರುವ ತೇಗ ವನ್ನು ಬೆಳೆಸಲು ಆಸಕ್ತಿ ತೋರುತ್ತಿದ್ದಾರೆ. ಇದೆ ವನ್ಯಜೀವಿಗಳು ನಾಡಿನತ್ತ ಬರಲು ಪ್ರಮುಖ ಕಾರಣ ಎಂದು ದೂರಿದರು. 23 ಕೆಸಿಕೆಎಂ 4ಎಂ.ಎಲ್‌. ಮೂರ್ತಿ

-- 23 ಕೆಸಿಕೆಎಂ 3ಕಾಡಾನೆ ಹಾವಳಿಯಿಂದ ಬೆಳೆ ಹಾಳಾಗಿರುವ ಪ್ರದೇಶಕ್ಕೆ ಶಾಸಕ ಎಚ್‌.ಡಿ. ತಮ್ಮಯ್ಯ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.