ಸಾರಾಂಶ
ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಭೇಟಿ ನೀಡಿ, ಪರಿಶೀಲಿಸಿ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸದ ಕಾರಣಕ್ಕೆ ಪಿಡಿಓಗೆ ತರಾಟೆಗೆ ತಗೆದುಕೊಂಡರು.
ಕನ್ನಡಪ್ರಭ ವಾರ್ತೆ ಯಾದಗಿರಿ
ಮತಕ್ಷೇತ್ರದ ವಡಗೇರಾ ತಾಲೂಕಿನ ನಾಯ್ಕಲ್ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಗೆ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಭೇಟಿ ನೀಡಿ, ಪರಿಶೀಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಾಲೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅಗತ್ಯ ಮೂಲಭೂತ ಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಈಗಾಗಲೇ ಶಾಲಾ ಕಟ್ಟಡ ಬಹಳ ವರ್ಷದ ಕಟ್ಟಡವಾಗಿದೆ. ಮಳೆಗಾಲದಲ್ಲಿ ಸೋರುತ್ತದೆ. ವಿದ್ಯಾರ್ಥಿಗಳಿಗೆ ಪಾಠ ಮಾಡಲು ತೊಂದರೆಯಾಗುತ್ತಿದೆ. ಮೊದಲು ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ಎಂದು ಗ್ರಾಮಸ್ಥರು ಹಾಗೂ ಶಿಕ್ಷಕರು ಶಾಸಕರಿಗೆ ಮನವಿ ಮಾಡಿದರು.ಶಾಲೆಯಲ್ಲಿ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶೌಚಾಲಯ ಹಾಗೂ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇದ್ದು, ಇದೇ ವೇಳೆ ಹಾಜರಿದ್ದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಾಜಿ ಅವರನ್ನು ತರಾಟೆಗೆ ತೆಗೆದುಕೊಂಡು, ಪಂಚಾಯಿತಿ ವತಿಯಿಂದ ಕಾಮಗಾರಿ ಕೈಗೊಳ್ಳಲು ಸೂಚಿಸಿದರು. ಗ್ರಾಮದ ಒಳಗಡೆಯಿಂದ ಶಾಲೆಗೆ ಆಗಮಿಸಲು ವಿದ್ಯಾರ್ಥಿಗಳಿಗೆ ಈಗಿರುವ ತಾತ್ಕಾಲಿಕ ರಸ್ತೆ ಸಿಮೆಂಟ್ ರಸ್ತೆಯನ್ನಾಗಿ ಪರಿವರ್ತನೆ ಮಾಡಿ, ನಿರ್ಮಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೀಬಾ ಜಲಿಯನ್, ತಾಪಂ ಕಾರ್ಯನಿರ್ವಾಹಕಾಧಿಕಾರಿ ಮಲ್ಲಿಕಾರ್ಜುನ ಸಂಗವಾರ, ಗ್ರಾಮದ ಹಿರಿಯರಾದ ಬಾಷುಮೀಯಾ ಹೊಸಳ್ಳಿ, ಗ್ರಾಪಂ ಅಧ್ಯಕ್ಷೆ ಮೈರೊನ್ನಿಸ್ ಶೇಕ್ ಅಬ್ದುಲ್, ಉಪಾಧ್ಯಕ್ಷೆ ಯಲ್ಲಮ್ಮ, ಮಲ್ಲಿಕಾರ್ಜುನ ಅನಕಸೂಗೂರ, ಶೇಕರಡ್ಡಿ ಮಾಯಿ, ಶಾಲಾ ಮುಖ್ಯಶಿಕ್ಷಕಿ ಮಂಜುಳಾ, ನರಸಮ್ಮ ಮಹಾಂತೇಶ, ಮನೋಹರ ಸೇರಿದಂತೆ ಇತರರಿದ್ದರು.