ಸಾರಾಂಶ
ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅವರು ಶನಿವಾರ ಬೆಳಗ್ಗೆ ಭಟ್ಕಳ ತಾಲೂಕಿನ ಕಡವಿನಕಟ್ಟೆ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದರು. ಸಚಿವ ಮಂಕಾಳು ವೈದ್ಯ ಇದ್ದರು.
ಭಟ್ಕಳ: ರಾಜ್ಯದ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಅವರು ಶನಿವಾರ ಬೆಳಗ್ಗೆ ಕಡವಿನಕಟ್ಟೆ ಡ್ಯಾಂಗೆ ಭೇಟಿ ನೀಡಿ ಪರಿಶೀಲಿಸಿದರು.
ಆನಂತರ ಮಾತನಾಡಿದ ಅವರು, ಶಿರಾಲಿ ಮಾವಿನಕಟ್ಟೆಯ ತನಕದ ರೈತರ ಹಿತ ಕಾಪಾಡಲು ಸಣ್ಣ ನೀರಾವರಿ ಇಲಾಖೆ ಬದ್ಧವಾಗಿದೆ. ಹಾಳಾಗಿರುವ ನಾಲೆಯನ್ನು ದುರಸ್ತಿಗೊಳಿಸಿ ರೈತರ ಗದ್ದೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸಣ್ಣ ನೀರಾವರಿ ಇಲಾಖೆ ಸಚಿವರೊಂದಿಗೆ ರೈತರು ತಮ್ಮ ಸಮಸ್ಯೆ ಹೇಳಿಕೊಂಡಿದ್ದು, ಸುಮಾರು ೩೫-೪೦ ವರ್ಷಗಳ ಹಿಂದೆ ಮಾಡಿದ ನೀರಿನ ನಾಲಾದಲ್ಲಿ ಹೂಳು ತುಂಬಿ ರೈತರ ಜಮೀನಿಗೆ ನೀರು ಹರಿಯದೇ ಸರಿಯಾದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ನಾಲೆಯಲ್ಲಿ ನೀರು ಬಿಟ್ಟರೂ ಮಧ್ಯದಲ್ಲಿಯೇ ನೀರು ಪೋಲಾಗಿ ಹೋಗುವುದರಿಂದ ನೀರಿನ ನಾಲಾ ದುರಸ್ತಿ ಶೀಘ್ರ ಆಗಬೇಕಿದೆ. ಕಡವಿನಕಟ್ಟೆಯಿಂದ ಶಿರಾಲಿ, ಮಾವಿನಕಟ್ಟೆಯ ತನಕ ರೈತರ ಸುಮಾರು ೬೦೦ರಿಂದ ೭೦೦ ಎಕರೆ ಜಮೀನಿನಲ್ಲಿ ಎರಡನೇ ಬೆಳೆಯಾಗಿ ಶೇಂಗಾ ಬೆಳೆಯಾಗುತ್ತಿದೆ. ಸಮರ್ಪಕ ನೀರಿಲ್ಲದೇ ಕಳೆದ ೨-೩ ವರ್ಷಗಳಿಂದ ಬೆಳೆ ಬೆಳೆಯಲು ಆಗುತ್ತಿಲ್ಲ. ಕಡವಿನಕಟ್ಟೆ ಡ್ಯಾಂಗೆ ಅಳವಡಿಸಿದ್ದ ಗೇಟ್ ಕಳೆದ ಹಲವಾರು ವರ್ಷಗಳಿಂದ ತೆರೆಯಲು ಸಾಧ್ಯವಾಗದೇ ಇರುವುದರಿಂದ ಹೂಳು ತುಂಬುತ್ತಿದೆ. ಗೇಟ ರಿಪೇರಿ ಮಾಡುವ ಅವಶ್ಯಕತೆಯ ಬಗ್ಗೆಯೂ ಸಚಿವರ ಗಮನಕ್ಕೆ ತರಲಾಯಿತು.ರೈತರ ಸಮಸ್ಯೆ ಆಲಿಸಿದ ಸಚಿವರು, ತಕ್ಷಣ ಸ್ಥಳದಲ್ಲಿದ್ದ ಚಿಕ್ಕ ನೀರಾವರಿ ಇಲಾಖೆಯ ಸಹಾಯಕ ಅಭಿಯಂತರರು ಹಾಗೂ ಇಲಾಖೆಯ ಜಿಲ್ಲಾ ಪ್ರಭಾರಿ ಆಗಿರುವ ರಜನಿ ತಳೇಕರ್ ಅವರಿಗೆ ಕಡವಿನಕಟ್ಟೆ ಡ್ಯಾಂನಿಂದ ನೀರು ಹರಿದು ಹೋಗುವ ೧೧ ಕಿಮೀ ನೀರಿನ ನಾಲಾ ಇದ್ದು, ಅವುಗಳು ಸಂಪೂರ್ಣ ಹೂಳು ತುಂಬಿದ್ದರಿಂದ ತಕ್ಷಣ ಅವುಗಳನ್ನು ಸರ್ವ ಮಾಡಿ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳೆತ್ತಲು ಬೇಕಾದ ಹಣದ ಅವಶ್ಯಕತೆಯ ಕುರಿತು ನೀಲನಕ್ಷೆ ತಯಾರಿಸಿ ಕಳುಹಿಸುವಂತೆ ಅವರಿಗೆ ಸಚಿವ ಎನ್.ಎಸ್. ಬೋಸರಾಜು ಸೂಚಿಸಿದರು.
ಈ ಹಿಂದೆ ನೀರಿನ ಕಾಲುವೆ ನಿರ್ವಹಣೆಗೆ ಇದ್ದ ಗಣಪತಿ ಭಟ್ಟ ಅವರ ನಿವೃತ್ತಿಯ ನಂತರ ಯಾರನ್ನು ಕೂಡಾ ನೇಮಕ ಮಾಡಿಲ್ಲ. ಈ ಹಿಂದೆ ಭಟ್ಟ ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ್ದರು ಎಂದು ರೈತರು ಹೇಳಿದಾಗ ತಕ್ಷಣ ಉತ್ತಮ ಕೆಲಸಗಾರರೋರ್ವರನ್ನು ನಿರ್ವಹಣೆಗೆ ನೇಮಿಸಿಕೊಳ್ಳುವಂತೆಯೂ ಅಭಿಯಂತರರಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಹಾಜರಿದ್ದ ಸಚಿವ ಮಂಕಾಳ ವೈದ್ಯ ಅವರು ರೈತರು ಪಡುತ್ತಿರುವ ಸಂಕಷ್ಟವನ್ನು ಸಣ್ಣ ನೀರಾವರಿ ಇಲಾಖೆಯ ಸಚಿವರಿಗೆ ವಿವರಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಹೇಳಿದರು.