ಲಕ್ಷ್ಮೇಶ್ವರದಲ್ಲಿ ಮಳೆಯಿಂದ ಕಿತ್ತು ಹೋದ ರಸ್ತೆ ದುರಸ್ತಿಗೆ ಕ್ರಮ: ಡಾ. ಲಮಾಣಿ

| Published : Jun 14 2024, 01:03 AM IST

ಲಕ್ಷ್ಮೇಶ್ವರದಲ್ಲಿ ಮಳೆಯಿಂದ ಕಿತ್ತು ಹೋದ ರಸ್ತೆ ದುರಸ್ತಿಗೆ ಕ್ರಮ: ಡಾ. ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚೆಗೆ ಸುರಿದ ಮಳೆಯಿಂದ ಕಿತ್ತುಹೋದ ಲಕ್ಷ್ಮೇಶ್ವರ ಸಮೀಪದ ಗೊಜನೂರು ಗ್ರಾಮದ ರಸ್ತೆಯನ್ನು ಶಾಸಕ ಡಾ. ಚಂದ್ರು ಲಮಾಣಿ ಪರಿಶೀಲಿಸಿ, ಶೀಘ್ರ ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಲಕ್ಷ್ಮೇಶ್ವರ: ಯಳವತ್ತಿ ಗ್ರಾಮದಿಂದ ಲಕ್ಷ್ಮೇಶ್ವರ ಪಟ್ಟಣಕ್ಕೆ ಹೋಗುವ ರಸ್ತೆ ಗೊಜನೂರ ಗ್ರಾಮ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ಕಿತ್ತು ಹೋಗಿದ್ದರಿಂದ ರೈತರ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಶೀಘ್ರದಲ್ಲಿ ಈ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಬುಧವಾರ ಸಮೀಪದ ಗೊಜನೂರ ಗ್ರಾಮದ ಹತ್ತಿರ ರಸ್ತೆ ಕಿತ್ತು ಹೋದ ಸ್ಥಳಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಭೇಟಿ ನೀಡಿ, ಮಳೆಯಿಂದ ಹಾನಿಗೊಳಗಾದ ರಸ್ತೆ ವೀಕ್ಷಣೆ ಮಾಡಿ ಅವರು ಮಾತನಾಡಿದರು.

ಮಳೆಯಿಂದ ಯಳವತ್ತಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಗೊಜನೂರ ಗ್ರಾಮದ ವ್ಯಾಪ್ತಿಯಲ್ಲಿ ಕಿತ್ತು ಹೋಗಿ ರೈತರಿಗೆ ಸಂಚರಿಸಲು ಕಷ್ಟವಾಗಿದೆ. ಕಳೆದ ವರ್ಷ ರಸ್ತೆ ನಿರ್ಮಿಸುವ ವೇಳೆಯಲ್ಲಿ ಕೆಲವು ರೈತರು ತಕರಾರು ತೆಗೆದಿದ್ದರಿಂದ ರಸ್ತೆ ನಿರ್ಮಿಸುವ ಕಾರ್ಯ ನನೆಗುದಿಗೆ ಬಿದ್ದಿತ್ತು. ಈಗ ಮೊನ್ನೆ ಸುರಿದ ಮಳೆಗೆ ಈ ರಸ್ತೆಯ ಕೆಲವು ಭಾಗಗಳಲ್ಲಿ ಕಂದಕ ಉಂಟಾಗಿದೆ. ಈಗ ಬಿತ್ತನೆ ವೇಳೆಯಾಗಿದ್ದರಿಂದ ರೈತರು ಹೊಲಕ್ಕೆ ಹೋಗುವುದು ಕಷ್ಟವಾಗಿದೆ. ಆದ್ದರಿಂದ ಭೂಮಾಪನ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರಸ್ತ ನಿರ್ಮಾಣಕ್ಕೆ ಬೇಕಾದ ಜಮೀನು ವಶಕ್ಕೆ ಪಡೆದುಕೊಂಡು ರೈತರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಶೀಘ್ರದಲ್ಲಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಅವರು ಹೇಳಿದರು.

ಈ ವೇಳೆ ತಹಸೀಲ್ದಾರ್ ವಾಸುದೇವ ಸ್ವಾಮಿ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ, ಶಂಕ್ರಪ್ಪ ಸೊರಟೂರ, ಮಹಾದೇವಪ್ಪ ಸೊರಟೂರ, ಶಂಭುಲಿಂಗಪ್ಪ ಸೊರಟೂರ, ಮಹಾಂತಪ್ಪ ಸೊರಟೂರ, ಶೇಖರಪ್ಪ ಸೊರಟೂರ ಗ್ರಾಮ ಲೆಕ್ಕಾಧಿಕಾರಿ ವಿಭೂತಿ ಇದ್ದರು.