ಕನ್ನಡಪ್ರಭ ವಾರ್ತೆ ಹೊಸದುರ್ಗ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಈ ಬಾರಿ ತಾಲೂಕಿಗೆ ಉತ್ತಮ ಫಲಿತಾಂಶ ತರುವಲ್ಲಿ ಸಹಕರಿಸಿದ ಬಿಇಓ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಹೇಳಿದರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 600ಕ್ಕಿಂತ ಹೆಚ್ಚು ಅಂಕ, ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಶೇ.100ರಷ್ಟು ಫಲಿತಾಂಶ ಪಡೆದ ಮುಖ್ಯ ಶಿಕ್ಷಕರಿಗೆ ಸಾಧಕರಿಗೆ ಸತ್ಕಾರ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ, ಅನುದಾನ ರಹಿತ ಶಾಲೆಗಳ ಫಲಿತಾಂಶ ಉತ್ತಮಗೊಂಡಿದ್ದು ಅನುದಾನ ಸಹಿತ ಶಾಲೆಗಳ ಫಲಿತಾಂಶ ಕಡಿಮೆಯಾಗಿದೆ. ಅನುದಾನ ಸಹಿತ ಶಾಲೆಗಳಲ್ಲಿ ನ್ಯೂನತೆಗಳು ಇದ್ದಲ್ಲಿ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಹೊರತುಪಡಿಸಿ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಬಾರದು. ಈ ಕುರಿತು ಮುಂದಿನ ದಿನಗಳಲ್ಲಿ ಅನುದಾನಿತ ಶಾಲೆಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಭೆ ಕರೆದು, ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ಸೈಯದ್ ಮೋಸಿನ್ ಮಾತನಾಡಿ, ಈ ಬಾರಿ ತಾಲೂಕಿಗೆ ಶೇ.91.23ರಷ್ಟು ಫಲಿತಾಂಶ ಬಂದಿದೆ. ಸರ್ಕಾರಿ ಶಾಲೆಗಳಿಗೆ ಶೇ.92, ಅನುದಾನ ರಹಿತ ಶಾಲೆಗಳು ಶೇ.98ಫಲಿತಾಂಶ ಪಡೆದಿದೆ.
ಅನುದಾನ ಸಹಿತ ಶಾಲೆಗಳು ಶೇ.86ರಷ್ಟು ಫಲಿತಾಂಶ ಪಡೆದಿದೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರ ಪರಿಶ್ರಮದಿಂದ ಈ ಬಾರಿ ನಪಾಸಾಗಿರುವವರ ಸಂಖ್ಯೆ ಕಳೆದ ಬಾರಿಗಿಂತ ಕಡಿಮೆಯಿದೆ. 241 ವಿದ್ಯಾರ್ಥಿಗಳು ನಪಾಸಾಗಿದ್ದಾರೆ. ನಪಾಸಾಗುವವರ ಸಂಖ್ಯೆ ಇನ್ನೂ ಕಡಿಮೆಯಾಗಬೇಕು. ಈ ಬಾರಿ ನಡೆಯಲಿರುವ ಮರು ಪರೀಕ್ಷೆಯಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗುವ ನಿರೀಕ್ಷೆಯಿದ್ದು ನಂತರ ತಾಲೂಕಿಗೆ ಶೇ.94ರಷ್ಟು ಫಲಿತಾಂಶ ಆಗುವ ನಿರೀಕ್ಷೆಯಿದೆ ಎಂದು ಭರವಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಬಿಆರ್‌ಸಿ ಶ್ರೀನಿವಾಸ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಾಂತಪ್ಪ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಗುರುಮೂರ್ತಿ, ಮುಖಂಡರಾದ ವಜ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ಎಂ.ಆರ್.ಶಾಂತಪ್ಪ, ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ನಾಗೇಂದ್ರಪ್ಪ, ಪ್ರೌಢಶಾಲೆಯ ಸಹ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್, ಡಯಟ್ ಉಪನ್ಯಾಸಕ ಶಂಕರ್ ನಾಯ್ಕ, ಶಿಕ್ಷಣ ಸಂಯೋಜಕ ಶಶಿಧರ್, ಸೇರಿದಂತೆ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿದ್ದರು.