ಹಿಂಸಾಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ನಿಶ್ಚಿತ: ಶಿವಾನಂದ ಪಾಟೀಲ

| Published : Mar 14 2024, 02:01 AM IST

ಹಿಂಸಾಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ನಿಶ್ಚಿತ: ಶಿವಾನಂದ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ಎಪಿಎಂಸಿಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕ್ರಮ ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದ್ದಾರೆ. ಈ ಘಟನೆಯಿಂದ ಮನಸ್ಸಿಗೆ ನೋವಾಗಿದೆ ಎಂದು ಹೇಳಿದರು.

ಬ್ಯಾಡಗಿ: ರೈತರು ಮುಗ್ಧರು, ಬೆಲೆ ಕಡಿಮೆಯಾದಾಗ ವ್ಯತಿರಿಕ್ತ ಭಾವನೆ ವ್ಯಕ್ತಪಡಿಸುವುದು ಸಹಜ. ಆದರೆ ಹಿಂಸಾಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಕ್ರಮ ನಿಶ್ಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಎಚ್ಚರಿಸಿದರು.ಬುಧವಾರ ಸ್ಥಳೀಯ ಎಪಿಎಂಸಿಗೆ ಭೇಟಿ ನೀಡಿ ಪರಿಶೀಲನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಇಂತಹದ್ದೊಂದು ಆಘಾತಕಾರಿ ಘಟನೆ ನಡೆಯಬಾರದಿತ್ತು. ಮನಸ್ಸಿಗೆ ತುಂಬಾ ನೋವಾಗಿದೆ ಎಂದು ಹೇಳಿದರು.ರೈತರು ನಮ್ಮವರೇ ಇರಲಿ ಅಥವಾ ಹೊರಗಿನ ರಾಜ್ಯದವರೇ ಇರಲಿ, ತಾನು ತಂದ ಮೆಣಸಿನಕಾಯಿಗೆ ಸೂಕ್ತ ದರ ಸಿಕ್ಕಿದೆಯೋ ಇಲ್ಲವೋ ಎಂಬ ಪರಾಮರ್ಶೆ ಮಾಡಿಕೊಳ್ಳಬೇಕು. ಒಂದು ವೇಳೆ ದರ ಸಿಗದಿದ್ದಲ್ಲಿ ಮರುದಿವಸ ಮತ್ತೆ ಟೆಂಡರ್‌ಗಿಡಲು ಅವಕಾಶವಿದೆ. ಇದನ್ನು ಬಿಟ್ಟು ದರ ಕುಸಿತವೊಂದನ್ನೇ ನೆಪವೊಡ್ಡಿ ಏಕಾಏಕಿ ಎಪಿಎಂಸಿ ಕಚೇರಿ ಮತ್ತು ವಾಹನಗಳಿಗೆ ಬೆಂಕಿ ಹಚ್ಚುವುದು, ದಾಂದಲೆ ನಡೆಸಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಮಾರುಕಟ್ಟೆ ಬೆಳೆದಂತೆಲ್ಲ ಹಲವು ತಳಿಗಳು ಪ್ರವರ್ಧಮಾನಕ್ಕೆ ಬಂದಿವೆ. ಇದರಲ್ಲಿ ಸಿಜೆಂಟಾ ಕಂಪನಿ ಹೊರತಂದಿರುವ ಬ್ಯಾಡಗಿ ಡಬ್ಬಿ (ಡಿಬಿ) ಮತ್ತು ಕಡ್ಡಿ ಜತೆಗೆ ಸಾಂಪ್ರದಾಯಿಕ ಬ್ಯಾಡಗಿ ಮೂಲ ಮೆಣಸಿನಕಾಯಿ ತಳಿ ಹೋಲಿಕೆ ಮಾಡಿ, ದರ ಕೇಳುವ ರೈತರ ನಿಲುವು ಸರಿಯಲ್ಲ. ಅದಕ್ಕೆ ಸೂಕ್ತವಾದ ದರವನ್ನು ಬ್ಯಾಡಗಿ ವ್ಯಾಪಾ ರಸ್ಥರು ನೀಡಿದ್ದಾರೆ. ಪೂರ್ವಗ್ರಹಪೀಡಿತ ಕೆಲವು ರೈತರು ಇಂತಹ ಕೃತ್ಯಕ್ಕೆ ಇಳಿದಿದ್ದು ಖೇದದ ಸಂಗತಿ ಎಂದರು.

ವಾರದಲ್ಲಿ ಎರಡು ದಿವಸ ಟೆಂಡರ್: ವಿವಿಧ ಕಾರಣಗಳಿಗೆ ಬ್ಯಾಡಗಿ ವರ್ತಕರು ವಾರದಲ್ಲಿ ಒಂದೇ ದಿವಸ ಮಾರುಕಟ್ಟೆ ಮಾಡಿದ್ದು ತಪ್ಪು. ಇದರಿಂದ ರೈತರು ಗೊಂದಲಕ್ಕೊಳಗಾಗಿ ಒಟ್ಟಿಗೆ ಮಾರಾಟ ಮಾಡಲು ಮುಂದಾದ ಪರಿಣಾಮ ಇಷ್ಟೆಲ್ಲ ಅವಾಂತರಗಳು ನಡೆದಿವೆ. ಅವರಿಗೂ ಮನವಿ ಮಾಡಿಕೊಳ್ಳಲಾಗಿದ್ದು, ಬರುವ ಸೋಮವಾರದಿಂದ ಎಪಿಎಂಸಿಯಲ್ಲಿ ವಾರಕ್ಕೆ ಎರಡು ದಿವಸ ಟೆಂಡರ್ ನಡೆಸಲಾಗುವುದು ಎಂದರು.

ಇಲಾಖೆಯಿಂದ ನಷ್ಟ ಭರಣ: ಘಟನೆಯಿಂದ ಸುಮಾರು ₹4.50 ಕೋಟಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹಳೆಯ ಕಟ್ಟಡವನ್ನು ತಾತ್ಕಾಲಿಕವಾಗಿ ಕಚೇರಿಯಾಗಿ ಬಳಸಲು ಸೂಚನೆ ನೀಡಿದ್ದೇನೆ. ಆಗಿರುವ ನಷ್ಟವನ್ನು ಇಲಾಖೆಯಿಂದಲೇ ಭರಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವೆ ಎಂದರು.

ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 80 ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ. ಅಂಥವರ ವಿರುದ್ಧ ಯಾವುದೇ ಕ್ರಮಗಳಾಗುವುದಿಲ್ಲ. ಆದರೆ ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಮೆಣಸಿನಕಾಯಿ ಬೆಳೆಗೂ ಎಂಎಸ್‌ಪಿ ನಿಗದಿಪಡಿಸುವ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆಯಲಾಗಿದೆ. ಆದರೆ ರೈತರ ಉತ್ಪನ್ನಗಳ ಬಗ್ಗೆ ಕೇಂದ್ರದ ನೀತಿ ಸರಿಯಿಲ್ಲ. ದೇಶದ ರೈತರ ಉತ್ಪನ್ನಗಳಿಗೆ ವೈಜ್ಞಾನಿಕ ದರ ನಿಗದಿಪಡಿಸುವ ಬದಲು ಆಮದು ಮಾಡಿಕೊಳ್ಳುತ್ತಿದೆ. ದರ ಕುಸಿತವಾದಾಗ ಬೆಂಬಲ ಬೆಲೆ ಸಿಗುತ್ತಿಲ್ಲ. ಕೂಗು ಕೇವಲ ಬ್ಯಾಡಗಿಗೆ ಸೀಮಿತವಾಗಿಲ್ಲ. ಬದಲಾಗಿ ದೇಶಾದ್ಯಂತ ನಡೆಯುತ್ತಿದ್ದು ಇದಕ್ಕೆ ದೆಹಲಿ ರೈತರ ಪ್ರತಿಭಟನೆ ಸಾಕ್ಷಿಯಾಗಿದೆ ಎಂದರು.

ಮಾರುಕಟ್ಟೆಯಲ್ಲಿ ಜಾಗದ ಕೊರತೆ ಬಗ್ಗೆ ಸ್ಥಳೀಯ ವರ್ತಕರ ಜತೆ ಚರ್ಚಿಸಲಾಗಿದೆ. ಜಾಗವನ್ನು ತೋರಿಸಿದಲ್ಲಿ ಖರೀದಿಸಲು ಸರ್ಕಾರ ಸಿದ್ಧವಾಗಿದೆ. ಮಾರುಕಟ್ಟೆಗೆ ಎಪಿಎಂಸಿ ವತಿಯಿಂದ ಕೋಲ್ಡ್ ಸ್ಟೋರೇಜ್ ಮಂಜೂರಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಸಚಿವರು ಹೇಳಿದರು.

ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣವರ, ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ ಪಾಟೀಲ, ವರ್ತಕ ಎಸ್.ಆರ್. ಪಾಟೀಲ, ಜಿಲ್ಲಾಧಿಕಾರಿ ರಘುನಂದನಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಸ್ಪಿ ಅಂಶುಕುಮಾರ, ಸಂಜೀವಕುಮಾರ ನೀರಲಗಿ, ದಾನಪ್ಪ ಚೂರಿ, ಕಾಯದರ್ಶಿ ಎಚ್.ವೈ. ಸತೀಶ, ಎಸ್.ಜಿ. ನ್ಯಾಮಗೌಡ ಇನ್ನಿತರರಿದ್ದರು.ಆವಕ ಹೆಚ್ಚಾದ ಸಮಯದಲ್ಲಿ ರೈತರನ್ನು ಸಂಭಾಳಿಸುವುದು ಕಷ್ಟ ಸಾಧ್ಯ. ಯಾವುದೇ ರೀತಿಯ ಸಂಭವನೀಯ ಅವಘಡಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಬ್ಯಾಡಗಿ ಮಾರುಕಟ್ಟೆ ಉಪ ಪೊಲೀಸ್‌ ಠಾಣೆ ಮಂಜೂರು ಮಾಡಿಸಲಾಗುವುದು ಎಂದು ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.