ಸಾರಾಂಶ
ಹೊರ ಜಿಲ್ಲೆಗಳಿಂದ ಆಗಮಿಸುವ ಬಸ್‌ಗಳನ್ನು ಸುರಕ್ಷಿತವಾಗಿ ಬರುವಂತೆ ಎಸ್ಕಾರ್ಟ್ ಮೂಲಕ ನಮ್ಮ ಸಿಬ್ಬಂದಿ ಮೂಲಕ ಕರೆತರುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಮುಷ್ಕರ ನಡೆಸುತ್ತಿರುವ ನೌಕರರು ಶಾಂತಿಯುತವಾಗಿ ಪ್ರತಿಭಟನೆಗೆ ನಡೆಸಲಿ.
ಹುಬ್ಬಳ್ಳಿ: ಮುಷ್ಕರ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ನಗರಾದ್ಯಂತ ಬಸ್ ಸಂಚಾರ ಅವ್ಯವಸ್ಥೆಯಿಂದ ಪ್ರಯಾಣಿಕರಿಗೆ ಕೆಲವು ಕಡೆ ಅನಾನುಕೂಲವಾಗಿದೆ. ಅವಳಿ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ವಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.
ಅವರು ಮಂಗಳವಾರ ನಗರದ ಹೊಸೂರು ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.ಹೊರ ಜಿಲ್ಲೆಗಳಿಂದ ಆಗಮಿಸುವ ಬಸ್‌ಗಳನ್ನು ಸುರಕ್ಷಿತವಾಗಿ ಬರುವಂತೆ ಎಸ್ಕಾರ್ಟ್ ಮೂಲಕ ನಮ್ಮ ಸಿಬ್ಬಂದಿ ಮೂಲಕ ಕರೆತರುತ್ತಿದ್ದಾರೆ. ಪ್ರಯಾಣಿಕರ ಹಿತದೃಷ್ಟಿಯಿಂದ ಕಟ್ಟೆಚ್ಚರ ವಹಿಸಲಾಗಿದೆ. ಮುಷ್ಕರ ನಡೆಸುತ್ತಿರುವ ನೌಕರರು ಶಾಂತಿಯುತವಾಗಿ ಪ್ರತಿಭಟನೆಗೆ ನಡೆಸಲಿ. ಅಹಿತಕರ ಘಟನಗಳಿಗೆ ಕಾರಣವಾದರೆ ಕಾನೂನು ಕ್ರಮ ಜರುಗಿಸುವುದಾಗಿ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದರು.
ಹುಬ್ಬಳ್ಳಿಯಲ್ಲಿ ಸಾಮಾನ್ಯ ಸ್ಥಿತಿ ಇದೆ. ಬಹುತೇಕ ಬಸ್‌ಗಳು ಸಂಚರಿಸುತ್ತಿವೆ. ಹುಬ್ಬಳ್ಳಿ ನಗರ ವಿಭಾಗದಲ್ಲಿ ಬಸ್‌ಗಳ ಸಂಚಾರ ಸಮಸ್ಯೆಯಾಗಿದೆ. ಸಮಸ್ಯೆಯಾದ ಕಡೆಗೆ ಆಟೋ, ಮ್ಯಾಕ್ಸಿ ಕ್ಯಾಬ್, ಖಾಸಗಿ ವಾಹನಗಳ ಮಾಲೀಕರ ಜತೆ ಮಾತನಾಡಿ ಪ್ರಯಾಣಿಕರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ಅಪರ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ಹೇಳಿದರು.