ಸಾರಾಂಶ
ಶಿರಾಳಕೊಪ್ಪ: ಯೋಗ, ವೈರಾಗ್ಯಗಳನ್ನು ಬಯಸುವ ಮನುಷ್ಯ ಧರ್ಮದ ಪರಿಪಾಲನೆ ಮಾಡದಿದ್ದರೆ ಯಾವ ಪ್ರಯೋಜನವೂ ಇಲ್ಲ. ಕ್ರಿಯಾಶೀಲ ಬದುಕು ಜೀವನ ಶ್ರೇಯಸ್ಸಿಗೆ ಮೂಲವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.ಪಟ್ಟಣ ಸಮೀಪದ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರು ಪರಂಪರೆ ಜಾತ್ರೋತ್ಸವದಲ್ಲಿ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಶ್ರೀ ಜಗದ್ಗುರು ರೇಣುಕಾಚಾರ್ಯರು ಬದುಕಿ ಬಾಳುವ ಮನುಷ್ಯರಿಗಾಗಿ ದಶ ಧರ್ಮ ಸೂತ್ರಗಳನ್ನು ಬೋಧಿಸಿದ್ದು ಅವು ಎಲ್ಲರಿಗೂ ಮಾನ್ಯವಾಗಿವೆ. ಮಠಗಳು ಸಂಸ್ಕಾರ ನೀಡುವ ಕೇಂದ್ರಗಳಾಗಿ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸುವ ಕಾರ್ಯ ಮಾಡುತ್ತ ಬಂದಿವೆ. ವೀರಶೈವ ಧರ್ಮ ಮಾನವ ಧರ್ಮವನ್ನು ಎತ್ತಿ ಹಿಡಿದಿದೆ. ಇದರಲ್ಲಿರುವ ಧರ್ಮ ಚಿಂತನಗಳು ಎಲ್ಲರ ಉನ್ನತಿಗಾಗಿ ಇವೆಯೇ ಹೊರತು ಅವನತಿಗಾಗಿ ಅಲ್ಲ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ರೇವಣಸಿದ್ದೇಶ್ವರ ಶಿವಾಚಾರ್ಯರು ಭಕ್ತರ ಶ್ರೇಯೋಭಿವದ್ಧಿಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದಾರೆ. ಹಿಂದೂ ಧರ್ಮವನ್ನು ಅವಹೇಳನ ಮಾಡುವುದು ಸಲ್ಲದು, ಇದು ಒಳ್ಳೆಯ ಬೆಳವಣಿಗೆ ಅಲ್ಲ. ರಂಭಾಪುರಿ ಶ್ರೀಗಳು ಈ ಇಳಿ ವಯಸ್ಸಿನಲ್ಲಿಯೂ ಹಗಲಿರುಳೆನ್ನದೇ ಸಂಚರಿಸಿ ಧರ್ಮ ಜಾಗೃತಿ ಕಾರ್ಯ ಮಾಡುತ್ತಿದ್ದು, ನಾವೆಲ್ಲ ಅವರ ಮಾರ್ಗದರ್ಶನದಲ್ಲಿ ಮುಂದುವರಿಯಬೇಕು ಎಂದು ಹೇಳಿದರು.ಗೌರಿಗದ್ದೆ ಅಧೂತ ವಿನಯ ಗುರೂಜಿ ಮಾತನಾಡಿ, ಮನುಷ್ಯ ತನ್ನಲ್ಲಿರುವ ಅಹಂಕಾರವನ್ನು ತೊರೆದು ಶರಣಾದಾಗ ಮಾತ್ರ ಗುರುವಿನ ಆಶೀರ್ವಾದ ದೊರೆಯುವುದು. ಇಂದು ಸಂಸ್ಕಾರ ಏನಾದರೂ ಉಳಿದಿದ್ದರೆ ಅದು ಮಠಗಳಿಂದ ಮಾತ್ರ. ನಾವು ರೇಣುಕರನ್ನು ನೋಡಿಲ್ಲ. ಆದರೆ ಶ್ರೀ ರಂಭಾಪುರಿ ಜಗದ್ಗುರುಗಳಲ್ಲಿ ರೇಣುಕರನ್ನು ಕಾಣುತ್ತಿದ್ದೇವೆ. ಐವರು ಪಂಚ ಪೀಠಾಧೀಶ್ವರರ ದರ್ಶನ ಮಾಡಿದರೆ ಕುಂಭಮೇಳದಲ್ಲಿ ಸಿಗುವ ಪುಣ್ಯ ಇಲ್ಲಿಯೇ ಪ್ರಾಪ್ತಿಯಾಗುತ್ತದೆ ಎಂದರು.
ಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಮಿತಿ ಮೀರಿದ ಜನಸಂದಣೆಯಿಂದ ಈ ದುರಂತ ಸಂಭವಿಸಿರುವುದು ತುಂಬಾ ನೋವು ತಂದಿದೆ. ಇಲ್ಲಿ ಸರ್ಕಾರವನ್ನು ದೋಷಿಸುವುದು ಸರಿಯಲ್ಲ ಎಂದು ಹೇಳಿದರು.ನೇತೃತ್ವ ವಹಿಸಿದ ಕಡೇನಂದಿಹಳ್ಳಿ ಶ್ರೀಗಳು ಮಾತನಾಡಿದರು.ಇದೇ ವೇಳೆ ಗುತ್ತಿಗೆದಾರ ದೇವೇಂದ್ರಪ್ಪ.ಪಿ.ಎಸ್ ಅವರಿಗೆ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕನ್ನೂರು-ಸಿಂದನೂರು ಶ್ರೀಗಳು, ಕಾರ್ಜುವಳ್ಳಿ ಶ್ರೀಗಳು ಮಾತನಾಡಿದರು. ಚನ್ನಗಿರಿ, ಜಕ್ಕಲಿ-ಹಾರನಹಳ್ಳಿ, ನಾಗವಂದ, ನಂದೀಪುರ, ಗೋವಿನಕೋವಿಯ ಶ್ರೀಗಳು ಮತ್ತು ಲಿಂಗಸುಗೂರಿನ ನಂದಿಕೇಶ್ವರಿ ಅಮ್ಮನವರು ಉಪಸ್ಥಿತರಿದ್ದರು.