ಹಾನಗಲ್ಲ:ಶಾಸಕ ಶ್ರೀನಿವಾಸ್ ಮಾನೆ ಅವರಿಗೆ ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದ್ದು, ಪಕ್ಷದ ಜವಾಬ್ದಾರಿ, ಲಭಿಸಿದ ಹುದ್ದೆಗಳಿಗೆ ರಾಜೀನಾಮೆ ನೀಡಲು ಪಕ್ಷದ ಕಾರ್ಯಕರ್ತರು ಚಿಂತನೆ ನಡೆಸಿದ್ದಾರೆ.ಕಳೆದೆರಡು ತಿಂಗಳಿನಿಂದ ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಲಭಿಸುವುದೆಂಬ ಬಹು ದೊಡ್ಡ ಪ್ರಮಾಣದ ನಿರೀಕ್ಷೆ ಹುಸಿಯಾಗಿದ್ದು, ಹಾನಗಲ್ಲ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿದೆ.

೧೯೯೬ರಿಂದಲೇ ಯುವ ಕಾಂಗ್ರೇಸ್ ನಾಯಕತ್ವದಿಂದ ಪಕ್ಷದಲ್ಲಿ ಗುರುತಿಸಿಕೊಂಡು, ಧಾರವಾಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ, ಉಪಾಧ್ಯಕ್ಷ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ, ಪಕ್ಷದ ಬಲವರ್ಧನೆಗೆ ಕಟಿಬದ್ಧರಾಗಿ ಶಾಸಕ ಶ್ರೀನಿವಾಸ್ ಮಾನೆ ಕೆಲಸ ಮಾಡಿದ್ದಾರೆ. ಪಕ್ಷ ವಹಿಸಿದ ರಾಜ್ಯ ಅಂತಾರಾಜ್ಯ ಕೆಲಸಗಳನ್ನು ಪಕ್ಷದ ಹಿತಕ್ಕೆ ತೃಪ್ತಿಕರವಾಗಿ ಸೇವೆ ಸಲ್ಲಿಸಿದ್ದಾರೆ. ತಮಿಳುನಾಡು ತೆಲಂಗಾಣ, ಮಧ್ಯಪ್ರದೇಶ, ದೆಹಲಿ, ಗೋವಾ, ಕೇರಳ ವಿಧಾನಸಭೆ ಚುನಾವಣೆಗಳಲ್ಲಿ ಎಐಸಿಸಿ ವೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.

ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಎರಡು ಬಾರಿ ಹಾನಗಲ್ಲ ಶಾಸಕರಾಗಿ ಆಯ್ಕೆಯಾಗಿ ಪಕ್ಷದ ಗಟ್ಟಿ ನಾಯಕರಾಗಿರುವ ಶ್ರೀನಿವಾಸ್ ಮಾನೆ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಖಚಿತ ಎಂಬ ವಿಶ್ವಾಸ ಕಾರ್ಯಕರ್ತರಲ್ಲಿತ್ತು. ಅದರೆ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಬಹುತೇಕ ನಾಯಕರು ಮೌನವಹಿಸಿದ್ದು, ಹೈಕಮಾಂಡ ನಿರ್ಣಯಕ್ಕೆ ಬದ್ಧ ಎಂದು ಮೌನಾಚರಣೆಯಲ್ಲಿದ್ದಾರೆ.

ಆದರೂ ಸಚಿವರಾಗುವ ಕನಸು ಹೊತ್ತ, ಕಾರ್ಯಕರ್ತರ ಅಪೇಕ್ಷೆಯೂ ಈಡೇರದ ಈ ಸಂದರ್ಭದಲ್ಲಿ ಶಾಸಕ ಶ್ರೀನಿವಾಸ್ ಮಾನೆ ಬರಿಗೈಲಿ ಬಂದದ್ದು ಮಾತ್ರ ತೀರ ನಿರಾಸೆಯ ಸಂಗತಿಯಾಗಿದೆ.

ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ ಈ ಕುರಿತು ಪ್ರತಿಕ್ರಿಯಿಸಿ, ನಮ್ಮ ಶಾಸಕ ಶ್ರೀನಿವಾಸ ಮಾನೆ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಖಂಡನೀಯ. ಪಕ್ಷದಲ್ಲಿ ಇದಕ್ಕಿಂತ ಹೆಚ್ಚು ಏನು ಕೆಲಸ ಮಾಡಿದರೆ ಸಚಿವ ಸ್ಥಾನ ಸಿಗುತ್ತದೆ ಎಂದು ತಿಳಿಯುತ್ತಿಲ್ಲ. ನಮ್ಮ ನಾಯಕ ಮಾನೆ ಪಕ್ಷಕ್ಕೆ ಕೊಡಮಾಡಿದ ಸೇವೆಯನ್ನು ಹೈಕಮಾಂಡ ಪರಿಗಣಿಸಲಿಲ್ಲ. ನಾವು ಪಕ್ಷದ ಕಾರ್ಯಕರ್ತರು ಒಂದೆರಡು ದಿನಗಳಲ್ಲಿ ಸಭೆ ಮಾಡಿ ನಮ್ಮ ಹುದ್ದೆಗಳಿಗೆ ರಾಜಿನಾಮೆ ನೀಡುತ್ತೇವೆ ಎಂದಿದ್ದಾರೆ.ಶ್ರೀನಿವಾಸ್ ಮಾನೆ ಅವರಿಗೆ ಈ ಬಾರಿ ಸಚಿವ ಸ್ಥಾನ ಖಚಿತ ಎಂಬ ವಿಶ್ವಾಸದಲ್ಲಿದ್ದೆವು. ಈ ಕುರಿತು ಅಸಮಾಧಾನವಿದೆ. ನಮ್ಮ ನಾಯಕ ಮಾನೆ ಅವರು ಕೂಡ ಈ ಬಗ್ಗೆ ಏನೂ ಪ್ರತಿಕ್ರಿಯಿಸಿಲ್ಲ. ನಾವು ಮೌನವಾಗಿದ್ದೇವೆ. ಮಾನೆ ಅವರು ಕ್ಷೇತ್ರಕ್ಕೆ ಬಂದ ಮೇಲೆ ಒಟ್ಟಾಗಿ ಕುಳಿತು ಉಳಿದ್ದನ್ನು ನಿರ್ಣಯಿಸುತ್ತೇವೆ. ಎಲ್ಲವನ್ನೂ ಕಾದು ನೋಡುತ್ತೇವೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಮರಗಡಿ ಹೇಳಿದರು.