ಸಾರಾಂಶ
ಕೊಪ್ಪ ಪ್ರವಾಸಿ ಮಂದಿರದಲ್ಲಿ ನಡೆದ ಸಭೆ । ಜಿಪಂ ಮಾಜಿ ಉಪಾಧ್ಯಕ್ಷ ಅಸಗೋಡು ನಾಗೇಶ್ ಭಾಗಿ
ಕನ್ನಡಪ್ರಭ ವಾರ್ತೆ, ಕೊಪ್ಪಕೆಪಿಸಿಸಿ, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಸುಮಾರು ೧೫೦ಕ್ಕೂ ಹೆಚ್ಚು ಕಾರ್ಯಕರ್ತರು ಭಾನುವಾರ ಕೊಪ್ಪ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದರು. ಸಭೆ ನಂತರ ಜಿಪಂ ಮಾಜಿ ಉಪಾಧ್ಯಕ್ಷ ಅಸಗೋಡು ನಾಗೇಶ್ ಪತ್ರಿಕಾ ಹೇಳಿಕೆ ನೀಡಿ, ಸುಧೀರ್ ಕುಮಾರ್ ಮುರೊಳ್ಳಿಯವರು ೨೦೧೩ರಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮೂಲಕ ಪಕ್ಷಕ್ಕೆ ಶಕ್ತಿ ತುಂಬಿ ದ್ದಾರೆ. ಚಿಕ್ಕಮಗಳೂರು-ಉಡುಪಿ ಲೋಕಸಭಾ ವ್ಯಾಪ್ತಿಗೆ ಬರುವ ಎಲ್ಲಾ ೮ ಕ್ಷೇತ್ರಗಳಲ್ಲೂ ಪರಿಚಿತರು ಹಾಗೂ ಜನಪ್ರಿಯ ರಾಗಿರುವ ಯುವ ಸಂಘಟಕ ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಟಿಕೆಟ್ ನೀಡುವ ಮೂಲಕ ಯುವಶಕ್ತಿಗೆ ಅವಕಾಶ ನೀಡಬೇಕು ಎಂದು ಕಾಂಗ್ರೆಸ್ ಪಕ್ಷವನ್ನು ಒತ್ತಾಯಿಸುತ್ತೇವೆ ಎಂದರು.
ಮಲೆನಾಡು ಕರಾವಳಿ ಜನಪರ ಒಕ್ಕೂಟದ ರಾಜ್ಯ ಸಂಚಾಲಕ ಅನಿಲ್ ಹೊಸಕೊಪ್ಪ ಮಾತನಾಡಿ ಸುಧೀರ್ ಕುಮಾರ್ ಮುರೊಳ್ಳಿಯವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಕ್ಷೇತ್ರದ ಶಾಸಕರಾದಿಯಾಗಿ ಉಡುಪಿ-ಚಿಕ್ಕಮಗಳೂರು ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಮನವಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿ ಟಿಕೆಟ್ ಕುರಿತು ಚರ್ಚಿಸುವ ಬಗ್ಗೆ ಭರವಸೆ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲೂ ಸುಧೀರ್ ಕುಮಾರ್ ಮುರೊಳ್ಳಿ ಹೆಸರು ಚರ್ಚೆಯಲ್ಲಿದೆ. ವರಿಷ್ಠರು ಚಿಕ್ಕಮಗಳೂರು-ಉಡುಪಿ ಕ್ಷೇತ್ರಕ್ಕೆ ಸುಧೀರ್ ಕುಮಾರ್ ಮುರೊಳ್ಳಿ ಹೆಸರನ್ನು ಪರಿಗಣಿಸುವಂತೆ ಸುಧೀರ್ ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಈ ಸಭೆಯ ಮೂಲಕ ಆಗ್ರಹಿಸುತ್ತಿದ್ದಾರೆ ಎಂದರು.ಮುಖಂಡರಾದ ಮಂಜುನಾಥ್, ರೈತಸಂಘದ ನವೀನ್ ಕರುವಾನೆ, ಕೊಪ್ಪ ಭೂ ಬ್ಯಾಂಕ್ ಮಾಜಿ ಅಧ್ಯಕ್ಷ ಎಚ್.ಕೆ. ಪ್ರಶಾಂತ್, ಪಪಂ ಸದಸ್ಯರಾದ ಮೈತ್ರಾ ಗಣೇಶ್, ಕೊಪ್ಪ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಪ್ರಿಯಾಂಕ ರಾಜೀವ್, ಯುವ ಕಾಂಗ್ರೆಸ್‌ನ ದುರ್ಗಾಚರಣ್, ನಿಸಾರ್ ಅಹಮ್ಮದ್, ಮಾಜಿ ಎಪಿಎಂಸಿ ಅಧ್ಯಕ್ಷ ಓಣಿತೋಟ ರತ್ನಾಕರ್, ಸುಂಕುರ್ಡಿ ಜಗದೀಶ್ ಸೇರಿದಂತೆ ಇತರರಿದ್ದರು.