ರಾಮನಗರ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅನೇಕ ಬಾರಿ ಹೀಯಾಳಿಸಿದ್ದಾರೆ. ಜೆಡಿಎಸ್ ಪಕ್ಷ ಸಭ್ಯತೆ ಕಲಿಸಿರುವ ಕಾರಣ ಕಾರ್ಯಕರ್ತರೆಲ್ಲರು ತಾಳ್ಮೆಯಿಂದ ಇದ್ದಾರೆ. ಇನ್ನು ಮುಂದೆ ಪ್ರತಿ ಹಳ್ಳಿಗಳಲ್ಲಿ ಅವರೇ ಉತ್ತರ ಕೊಡುತ್ತಾರೆ ಎಂದು ಜೆಡಿಎಸ್ ಮುಖಂಡರು ಆದ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ತಮ್ಮ ಬದ್ಧ ರಾಜಕೀಯ ವೖೆರಿಗಳನ್ನು ಬ್ರದರ್ ಅಂತಾನೆ ಕರೆಯುತ್ತಾರೆ. ಆ ಸಭ್ಯತೆಯನ್ನು ಕಾರ್ಯಕರ್ತರಿಗೂ ಕಲಿಸಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಉತ್ತರ ಕೊಡಲು ಕಾರ್ಯಕರ್ತರಿಗೂ ಬರುತ್ತದೆ ಎಂಬುದನ್ನು ಮರೆಯಬಾರದು ಎಂದರು.

ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡದ ಸಿದ್ದರಾಮಯ್ಯನವರ ಮೇಲಿನ ಕೋಪವನ್ನು ಡಿ.ಕೆ.ಶಿವಕುಮಾರ್ ಅವರು, ಕುಮಾರಸ್ವಾಮಿ ಮೇಲೆ ತೋರಿಸುತ್ತಿದ್ದಾರೆ. ದೇವೇಗೌಡರು ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದರು. ನಿಮಗೆ ಮುಖ್ಯಮಂತ್ರಿ ಹುದ್ದೆ ಕೊಟ್ಟಿಲ್ಲವಲ್ಲ ಒಂದು ಪ್ರಾದೇಶಿಕ ಪಕ್ಷ ಕಟ್ಟಿ ನೋಡೋಣ ಎಂದು ಸವಾಲು ಹಾಕಿದರು.

ಡಿ.ಕೆ.ಶಿವಕುಮಾರ್ ಅವರಿಗೆ ಡಿ.ಕೆ.ಸುರೇಶ್ ಸೋಲನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಸುರೇಶ್ ಅವರನ್ನು ಬಮೂಲ್ ಅಧ್ಯಕ್ಷ ಮತ್ತು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕರನ್ನಾಗಿ ಮಾಡಿದ್ದಾರೆ. ಕುಮಾರಸ್ವಾಮಿ ಅವರನ್ನು ಎರಡು ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದು ಹಾಗೂ ನಿಖಿಲ್ ಕುಮಾರಸ್ವಾಮಿಯನ್ನು ಮೂರು ಚುನಾವಣೆಗಳಲ್ಲಿ ಹೇಗೆ ಸೋಲಿಸಿದಿರಿ ಎಂಬ ಕುತಂತ್ರ ಗೊತ್ತಿದೆ. ನಿಖಿಲ್ ಮತಗಳಲ್ಲಿ ಸೋತಿರಬಹುದು, ಆದರೆ, ಜನಾಭಿಪ್ರಾಯದಲ್ಲಿ ಸೋತಿಲ್ಲ ಎಂದು ತಿರುಗೇಟು ನೀಡಿದರು.

ಕುಮಾರಸ್ವಾಮಿ ಸಾರಾಯಿ, ಲಾಟರಿ ನಿಷೇಧ, ಸಾಲಮನ್ನಾ ಮಾಡಿದರು. ಈ ಜಿಲ್ಲೆ ಮತ್ತು ರಾಜ್ಯಕ್ಕೆ ಡಿ.ಕೆ.ಶಿವಕುಮಾರ್ ಕೊಡುಗೆ ಏನಿದೆ? ರಾಮನಗರಕ್ಕೆ ಮಂಜೂರಾಗಿದ್ದ ಮೆಡಿಕಲ್ ಕಾಲೇಜನ್ನು ಕಸಿದುಕೊಳ್ಳಲು ಹೊರಟಿದ್ದರು. ಹೋರಾಟ ಮಾಡಿ ಅದನ್ನು ಉಳಿಸಿಕೊಳ್ಳಬೇಕಾಯಿತು. ಮೇಕೆದಾಟು ಯೋಜನೆ ಭರವಸೆಯಲ್ಲಿಯೇ ಉಳಿದಿದೆ ಎಂದು ಟೀಕಿಸಿದರು.


ಕುಮಾರಸ್ವಾಮಿ ಮತ್ತು ನಿಖಿಲ್ ಸಭ್ಯಸ್ಥರ ಕುಟುಂಬದಿಂದ ಬಂದವರು. ಅವರಿಗೆ ಬೇರೆಯವರ ಉಪದೇಶ ಬೇಕಾಗಿಲ್ಲ. ಗಾಣಕಲ್ ನಟರಾಜ್ ಕುರ್ಚಿ ಉಳಿಸಿಕೊಳ್ಳಲು ಮಾತನಾಡುತ್ತಿದ್ದಾರೆ. ಅವರು ಕುಳಿತಿರುವ ಆ ಜಾಗವನ್ನು ಕುಮಾರಸ್ವಾಮಿ ಅವರೇ ಕಟ್ಟಿಸಿದ್ದು ಎಂಬುದು ಮರೆತಂತಿದೆ. ಇನ್ನು ಮುಂದೆ ನಮ್ಮ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿದರೆ ಸಹಿಸುವುದಿಲ್ಲ ಎಂದು ದೊರೆಸ್ವಾಮಿ ಎಚ್ಚರಿಸಿದರು.

ಡಿಕೆಶಿ ಬೈರಮಂಗಲಕ್ಕೆ ಹೋಗಲಿ ನೋಡೋಣ:

ಜೆಡಿಎಸ್ ತಾಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಮಾತನಾಡಿ, ಡಿ.ಕೆ.ಶಿವಕುಮಾರ್ ಬರೆದುಕೊಟ್ಟಂತೆ ಗಾಣಕಲ್ ನಟರಾಜ್ ಯುವ ನಾಯಕ ನಿಖಿಲ್ ವಿರುದ್ಧ ಮಾತನಾಡಿದ್ದಾರೆ. ಈ ಮೂಲಕ ಗಾಣಕಲ್ ನಟರಾಜ್ ತಾನು ಅಪ್ರಬುದ್ಧ ಎಂಬುದನ್ನು ಸಾಬೀತು ಪಡಿಸಿಕೊಂಡಿದ್ದಾರೆ. ಆ ಮನುಷ್ಯನಿಗೆ ಗೌರವ ಇಲ್ಲ, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕಷ್ಟೇ ಗೌರವ ಕೊಡುತ್ತೇವೆ ಎಂದರು.

ನಿಖಿಲ್ ಡಿ.ಕೆ.ಶಿವಕುಮಾರ್ ಸಾಹೆಬ್ರೆ ಎಂದು ಸಂಭೋದಿಸಿ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಿಯೂ ಏಕವಚನ ಬಳಸಿಲ್ಲ. ಡಿ.ಕೆ.ಶಿವಕುಮಾರ್, ಗಾಣಕಲ್ ನಟರಾಜ್ ಹಾಗೂ ನಿಖಿಲ್ ಕುಮಾರಸ್ವಾಮಿ ಬೈರಮಂಗಲಕ್ಕೆ ಹೋದರೆ ರೈತರು ಯಾರನ್ನು ಘೇರಾವ್ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ. ಇನ್ನಾದರು ನಟರಾಜ್ ಇತಿಮಿತಿಯಲ್ಲಿ ಮಾತನಾಡುವುದನ್ನು ಕಲಿಯಲಿ ಎಂದು ಸಲಹೆ ನೀಡಿದರು.

ಮುಖಂಡ ಬಿ.ಉಮೇಶ್ ಮಾತನಾಡಿ, ರಾಜಕೀಯದಲ್ಲಿ ಬೇರೆಯವರ ಬಗ್ಗೆ ಮಾತನಾಡಿದರೆ ಗ್ರೇಟ್ ಆಗುತ್ತೇವೆಂದು ಭಾವಿಸಿದ್ದಾರೆ. ಅದರಲ್ಲಿ ನಟರಾಜ್ ಒಬ್ಬರು. ಯುವಕರಿಗೂ ಎಲ್ಲವನ್ನು ಪ್ರಶ್ನಿಸುವ ಹಕ್ಕಿದೆ. ಜೆಡಿಎಸ್ ಯುವ ಘಟಕ ಅಧ್ಯಕ್ಷರಾದ ನಿಖಿಲ್ ಕೇಳಿರುವ ಪ್ರಶ್ನೆಗೆ ಉತ್ತರ ನೀಡುವುದನ್ನು ಬಿಟ್ಟು ಪಲಾಯನ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಟೀಕಿಸಿದರು.

ಡಿಕೆಶಿ ಬೇರೆಯವರನ್ನು ಎತ್ತಿಕಟ್ಟಿ ಮಾತನಾಡಿಸುವುದು ಅವರಿಗೆ ಶೋಭೆ ತರುವುದಿಲ್ಲ. ಡಿಕೆ ಸಹೋದರರಿಗೆ ಕೇವಲ ಒಂದು ಸೋಲನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಮಂಡ್ಯದಲ್ಲಿ ಎಲ್ಲರು ಸೇರಿ ಚಿಕ್ಕ ಹುಡುಗನ ಬೆನ್ನಿಗೆ ಚೂರಿ ಹಾಕಿದರು. ಚನ್ನಪಟ್ಟಣದಲ್ಲಿ ಘಟಾನುಘಟಿಗಳು ಒಂದಾಗಿ ಸೋಲಿಸಿದಿರಿ. ನಿಮಗೆಲ್ಲ ನಿಖಿಲ್ ಬಗ್ಗೆ ಮಾತನಾಡುವ ನೖತಿಕತೆ ಇಲ್ಲ ಎಂದು ಸಬ್ಬಕೆರೆ ಶಿವಲಿಂಗಯ್ಯ ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸುಗ್ಗನಹಳ್ಳಿ ರಾಮಕೃಷ್ಣಯ್ಯ, ಗೌಡಯ್ಯನದೊಡ್ಡಿ ಕೃಷ್ಣೇಗೌಡ, ಅಂಜನಾಪುರ ವಾಸು, ಮಾವಿನಸಸಿ ವೆಂಕಟೇಶ್, ಬಾಲಗೇರಿ ರವಿ, ರಾಜಶೇಖರ್, ಗೂಳಿ ಕುಮಾರ್ ಗೌಡ, ಲಕ್ಷ್ಮಿಕಾಂತ್,‌ ಎನ್.ರಮೇಶ್, ಕೊತ್ತೀಪುರ ಗೋವಿಂದ, ಬೀರೇಶ್ , ಬೋರೆಗೌಡ, ಕಾಡನಕುಪ್ಪೆ ನವೀನ್, ಆಡಿಟರ್ ಕುಮಾರ್,ಪವನ್ ದೊಡ್ಡಿ ಉಮೇಶ್, ಜಯಕುಮಾರ್, ಕೆಂಪರಾಜು, ಶ್ರೀನಿವಾಸ್ ಮತ್ತಿತರರಿದ್ದರು.

ಬಾಕ್ಸ್‌.........

ಡಿಕೆಶಿ ಸಿಎಂ ಅಭ್ಯರ್ಥಿಯೇ ಎಂಬ ಅನುಮಾನ ಕಾಡ್ತಿದೆ: ನರಸಿಂಹಮೂರ್ತಿ

ರಾಮನಗರ: ಮುಖ್ಯಮಂತ್ರಿ ಅಭ್ಯರ್ಥಿಯಾದವರಿಗೆ ಸಂಸ್ಕಾರ, ಸೌಜನ್ಯ ಇರಬೇಕು. ಆದರೆ, ಕೊತ್ವಾಲನ ಬಳಿ ಬೆಳೆದಿರುವ ಡಿ.ಕೆ.ಶಿವಕುಮಾರ್ ಅವರಲ್ಲಿ ಅದ್ಯಾವ ಗುಣಗಳು ಕಾಣುತ್ತಿಲ್ಲ. ಅವರೇನಾದರು ಮುಖ್ಯಮಂತ್ರಿಯಾದರೆ ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡುತ್ತಾರೆ ಎಂದು ಜೆಡಿಎಸ್ ವಕ್ತಾರ ನರಸಿಂಹಮೂರ್ತಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು ಸಾಧನಾ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು, ಸಿದ್ದರಾಮಯ್ಯನವರ ಮೇಲಿನ ಕೋಪವನ್ನು ಕುಮಾರಸ್ವಾಮಿ ಮೇಲೆ ತೋರಿಸಿದ್ದಾರೆ. ಭಾಷೆ ಮೇಲೆ ಹಿಡಿತವಿಲ್ಲದೆ ಏನೊ ಹರಿತೀನಿ... ಅಂತ ಅವಹೇಳನ ಪದ ಬಳಸಿದ್ದಾರೆ. ಅವರು ತಮ್ಮನ್ನು ಉಪಮುಖ್ಯಮಂತ್ರಿ ಅಂದುಕೊಂಡಿದ್ದಾರ ಅಥವಾ ಕೊತ್ವಾಲನ ಶಿಷ್ಯ ಎನ್ನುವ ಭ್ರಮೆಯಲ್ಲಿ ಇದ್ದಾರ ಗೊತ್ತಿಲ್ಲ. ಮುಖ್ಯಮಂತ್ರಿ ಅಭ್ಯರ್ಥಿಯೇ ಎಂಬ ಅನುಮಾನವೂ ಕಾಡುತ್ತಿದೆ ಎಂದು ಟೀಕಿಸಿದರು.

ಆ ಚಿಕ್ಕ ಹುಡುಗನನ್ನು ಸೋಲಿಸಲು ಮಂಡ್ಯದಲ್ಲಿ ನಿಮ್ಮದೇ ಪಕ್ಷದವರು ಕುತಂತ್ರ ನಡೆಸಿ ಬೆನ್ನಿಗೆ ಚೂರಿ ಹಾಕಿದರು. ರಾಮನಗರದಲ್ಲಿ ಕೂಪನ್ ಕಾರ್ಡ್ ಕೊಟ್ಟು ಜನರನ್ನು ವಂಚಿಸಿದರು. ಚನ್ನಪಟ್ಟಣದಲ್ಲಿ ಇಡೀ ಸಚಿವ ಸಂಪುಟ ಠಿಕಾಣಿ ಹೂಡಿತ್ತು. ಆಗ ನಿಮಗೆ ನಾಚಿಕೆ ಆಗಲಿಲ್ಲವೆ. ಇನ್ನಾದರು ಅಹಂಕಾರ ಬಿಟ್ಟು ಬಡವರ ಪರವಾಗಿ ಕೆಲಸ ಮಾಡಿ ಎಂದು ಹೇಳಿದರು.

ಕೋಟ್ ...............

ಬೈರಮಂಗಲ ಮತ್ತು ಕಂಚುಗಾರನಹಳ್ಳಿಗಳಲ್ಲಿ 2 ಸಾವಿರಕ್ಕೂ ಹೆಚ್ಚು ಎಕರೆ ಸರ್ಕಾರಿ ಜಮೀನಿತ್ತು. ಅದು 750 ಎಕರೆಗೆ ಬಂದಿದೆ. ಅಷ್ಟೂ ಜಮೀನು ಏನಾಯಿತು ಎಂಬುದೇ ಗೊತ್ತಿಲ್ಲ. ಸರ್ಕಾರಿ ಸರ್ವೆ ನಂಬರ್‌ಗಳಲ್ಲಿ ಯಾರ್ಯಾರು ಏನೆಲ್ಲ ಮಾಡಿದ್ದಾರೆ ಎಂಬುದು ಗೊತ್ತಿದೆ. ದಾಖಲೆಗಳ ಸಮೇತ ಎಲ್ಲರ ಬಂಡವಾಳ ಬಯಲು ಮಾಡುತ್ತೇವೆ.

-ಸಬ್ಬಕೆರೆ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷರು, ಜೆಡಿಎಸ್

22ಕೆಆರ್ ಎಂಎನ್ 1.ಜೆಪಿಜಿ

ಜೆಡಿಎಸ್ ಮುಖಂಡರು ಆದ ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.