ಪ್ರತಿಯೊಬ್ಬ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಸಂಪರ್ಕ ಸಾಧಿಸುವುದು, ಹೊಸ ಮತದಾರರ ನೋಂದಣಿ ಮಾಡಿಸುವುದು

ಗಂಗಾವತಿ: ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಡ್ಡಾಯವಾಗಿ ಹೊಸ ಮತದಾರರ ನೋಂದಣಿ ಮಾಡಿಸಬೇಕು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು. ತಾಲೂಕಿನ ಹನುಮನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಗಂಗಾವತಿ ವಿಧಾನಸಭಾ ಕ್ಷೇತ್ರದ ಗ್ರಾಮೀಣ ಹಾಗೂ ನಗರ ಮಂಡಲಗಳ (ಬಿಎಲ್ಎ-2) ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ಮಹತ್ವ ವಿವರಿಸಿ, ಬಿಎಲ್ಎ 2 ಕಾರ್ಯಕರ್ತರು ಕೈಗೊಳ್ಳಬೇಕಾದ ಪ್ರಮುಖ ಜವಾಬ್ದಾರಿಗಳ ಬಗ್ಗೆ ವಿಸ್ತೃತವಾಗಿ ಮಾರ್ಗದರ್ಶನ ನೀಡಿದರು.

ಪ್ರತಿಯೊಬ್ಬ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಸಂಪರ್ಕ ಸಾಧಿಸುವುದು, ಹೊಸ ಮತದಾರರ ನೋಂದಣಿ ಮಾಡಿಸುವುದು, ತಪ್ಪು ವಿವರ ಸರಿಪಡಿಸುವುದು ಹಾಗೂ ಮತಪಟ್ಟಿ ಶುದ್ಧೀಕರಣದ ಕಾರ್ಯ ಆದ್ಯತೆ ಮೇರೆಗೆ ನಿರ್ವಹಿಸಬೇಕೆಂದು ಸೂಚನೆ ನೀಡಿದರು.

ಚುನಾವಣಾ ಯಶಸ್ಸಿಗೆ ನಿಖರವಾದ ಮತಪಟ್ಟಿಯೇ ಅಡಿಪಾಯ. ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಬೂತ್ ಮಟ್ಟದಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ಪ್ರತಿಯೊಬ್ಬ ಅರ್ಹ ಮತದಾರರ ಹೆಸರು ಮತಪಟ್ಟಿಯಲ್ಲಿ ಸೇರ್ಪಡೆಯಾಗುವಂತೆ ಕಾಳಜಿ ವಹಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ, ಜಿ.ವೀರಪ್ಪ, ಬಳ್ಳಾರಿ ವಿಭಾಗದ ಸಹ ಪ್ರಭಾರಿ ಚನ್ನಬಸವನಗೌಡ ಪಾಟೀಲ್, ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣನವರ್, ಮಾಜಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ್, ಗೀರೆಗೌಡ, ತಿಪ್ಪೇರುದ್ರಸ್ವಾಮಿ, ನಗರ ಮಂಡಲದ ಅಧ್ಯಕ್ಷ ಚಂದ್ರಶೇಖರ ಹಿರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ವೀರೇಶ್ ಬಲಕುಂದಿ ಸೇರಿದಂತೆ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿ ಹಾಗೂ ಬಿಎಲ್ಎ-2 ಕಾರ್ಯಕರ್ತರು ಉಪಸ್ಥಿತರಿದ್ದರು.