ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶಕ್ತಿಮೀರಿ ಯತ್ನಿಸಲಿ: ಜಗದೀಪ್‌ ತೆಂಗೇರಿ

| Published : Apr 18 2024, 02:19 AM IST

ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗೆ ಕಾರ್ಯಕರ್ತರು ಶಕ್ತಿಮೀರಿ ಯತ್ನಿಸಲಿ: ಜಗದೀಪ್‌ ತೆಂಗೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಪಕ್ಷದ ಕಾರ್ಯಕರ್ತರು ಹಗಲು- ರಾತ್ರಿ ಪರಿಶ್ರಮಿಸಿ ಕಾಂಗ್ರೆಸ್ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದು ಜಗದೀಪ್ ಎನ್. ತೆಂಗೇರಿ ತಿಳಿಸಿದರು.

ಹೊನ್ನಾವರ: ಲೋಕಸಭಾ ಚುನಾವಣೆಯನ್ನು ಗೆಲ್ಲಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಉತ್ತಮ ಸಂಘಟನೆ ನಡೆಸುತ್ತಿದೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ತಿಳಿಸಿದರು.

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಪ್ರತಿ ಪಂಚಾಯಿತಿ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಭೇಟಿಯಾಗಿ, ಕಾರ್ಯಕರ್ತರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡಲಾಗಿದೆ. ಹಾಗೆಯೇ ಪ್ರತಿ ಮತಗಟ್ಟೆ ಮತ್ತು ಪಂಚಾಯಿತಿ ಘಟಕಗಳನ್ನು ಪುನರ್ ರಚಿಸಿ ಸಕ್ರಿಯಗೊಳಿಸುವ ಉದ್ದೇಶದಿಂದ ಪ್ರತಿ ಗ್ರಾಮೀಣ ಘಟಕಗಳಿಗೆ ಬ್ಲಾಕ್ ಕಾಂಗ್ರೆಸ್‌ನಿಂದ ತಲಾ ಇಬ್ಬರೂ ಪದಾಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಿ ಆದೇಶ ಹೊರಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡಾ. ಅಂಜಲಿಯವರು ಹೊನ್ನಾವರ ಬ್ಲಾಕ್ ವ್ಯಾಪ್ತಿಯ ಎರಡು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಲಿದ್ದಾರೆ. ಪಕ್ಷದ ಕಾರ್ಯಕರ್ತರು ಹಗಲು- ರಾತ್ರಿ ಪರಿಶ್ರಮಿಸಿ ಕಾಂಗ್ರೆಸ್ ಗೆಲುವಿಗೆ ಪಣ ತೊಟ್ಟಿದ್ದಾರೆ ಎಂದರು.

ಬ್ಲಾಕ್ ಹಿಂದುಳಿದ ವರ್ಗದ ವಿಭಾಗದ ಅಧ್ಯಕ್ಷ ಕೆ.ಎಚ್. ಗೌಡ ಮಾತನಾಡಿ, ಪಕ್ಷದ ಗೆಲುವಿಗಾಗಿ ಹೋರಾಡುವುದರಲ್ಲಿ ಎರಡು ಮಾತಿಲ್ಲ. ಆದರೆ ಪ್ರತಿ ಚುನಾವಣೆಯಲ್ಲಿ ನಮ್ಮನ್ನು ಬಳಸಿಕೊಳ್ಳುವ ಪಕ್ಷದ ಮುಖಂಡರು, ಚುನಾವಣೆಯ ಬಳಿಕ ಅವರನ್ನು ದುರ್ಬಿನು ಮೂಲಕ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ವಿನೋದ ನಾಯ್ಕ ಮಾತನಾಡಿ, ಪಕ್ಷದ ಕಾರ್ಯಕರ್ತರೆಂದರೆ ಪಕ್ಷದ ಸಭೆ- ಸಮಾರಂಭಗಳಿಗೆ ಜನರನ್ನು ಕೊಂಡೊಯ್ಯಲೂ ಮಾತ್ರ ಸೀಮಿತವೇ ಎಂದು ಪ್ರಶ್ನಿಸಿದರು.

ಹೊನ್ನಾವರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಮಹೇಶ್ ಮಾತನಾಡಿ, ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಪಕ್ಷದ ಕಾರ್ಯಚಟುವಟಿಕೆಯಲ್ಲಿ ಎಂದೂ ಕಾಣದ ಮುಖಗಳು ನಮ್ಮ ನಾಯಕರ ಮುಂದೆ ಗೋಚರಿಸುತ್ತಿರುವುದು ವಿಷಾದನೀಯ ಎಂದರು. ನವಿಲಗೋಣ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಮಾದೇವಿ ನಾಯ್ಕ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ , ಕಾರ್ಯದರ್ಶಿ ಸುರೇಶ್ ಮೇಸ್ತ, ಇಂಟೆಕ್ ಪ್ರಧಾನ ಕಾರ್ಯದರ್ಶಿ ಕೇಶವ ಮೇಸ್ತ, ಹೊನ್ನಾವರ ನಗರ ಘಟಕದ ಮಾಜಿ ಅಧ್ಯಕ್ಷ ಸುರೇಶ ರುಕ್ಕು ಮೇಸ್ತ, ಜಿಲ್ಲಾ ಸೇವಾದಳದ ಪ್ರಧಾನ ಕಾರ್ಯದರ್ಶಿ ಕೃಷ್ಣ ಮಾರಿಮನೆ ಇತರರು ಮುಖಂಡರು ತಮ್ಮ ತೀವ್ರ ಅಸಮಾದಾನವನ್ನು ಹೊರಹಾಕಿದರು.

ಇದಕ್ಕೆಲ್ಲಾ ಉತ್ತರಿಸಿದ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಈ ಎಲ್ಲ ಬೆಳವಣಿಗೆಗಳು ನನ್ನ ಗಮನಕ್ಕೂ ಇದ್ದು, ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ನಮ್ಮೆಲ್ಲ ನೋವನ್ನು ಮರೆತು ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಹೋರಾಡೋಣ ಎಂದರು.

ವೇದಿಕೆಯಲ್ಲಿ ಕುಮಟಾ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿಯ ಅಧ್ಯಕ್ಷ ಹೊನ್ನಪ್ಪ ನಾಯಕ, ಬ್ಲಾಕ್ ಶಿಕ್ಷಕರ ವಿಭಾಗದ ಅಧ್ಯಕ್ಷ ಪ್ರೊ. ಎಸ್.ಡಿ. ಹೆಗಡೆ, ಸೇವಾದಳದ ಅಧ್ಯಕ್ಷ ಮೋಹನ್ ಆಚಾರಿ, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಕೃಷ್ಣ ಹರಿಜನ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಜಕ್ರಿಯ್ಯಾ ಶೇಖ, ಯುವ ಕಾಂಗ್ರೆಸ್ ಅಧ್ಯಕ್ಷ ನವೀನ್ ಪಟಗಾರ, ನಗರ ಘಟಕದ ಅಧ್ಯಕ್ಷ ಚಂದ್ರಶೇಖರ ಚಾರೋಡಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.