ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಹಾಗೂ ನಟ ದರ್ಶನ್ ಅವರು ತಮ್ಮ ಹುಟ್ಟುಹಬ್ಬವನ್ನು ಜೈಲಿನಲ್ಲೇ ಸೋಮವಾರ ಆಚರಿಸಿಕೊಂಡಿದ್ದಾರೆ.ಪ್ರತಿ ವರ್ಷ ಮನೆ ಮುಂದೆ ಸಾವಿರಾರು ಅಭಿಮಾನಿಗಳ ಜತೆ ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿದ್ದ ದರ್ಶನ್ ಅವರು ಈ ಬಾರಿ ಜನ್ಮದಿನವನ್ನು ನಿರಾಡಂಬರವಾಗಿ ಸೆರೆಮನೆಯ ನಾಲ್ಕು ಗೋಡೆಗಳ ಮಧ್ಯೆ ಕಳೆದರು.
ಇನ್ನು ಹುಟ್ಟುಹಬ್ಬ ದಿನ ಜೈಲಿಗೆ ಭೇಟಿ ನೀಡಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್, ಸೋದರ ದಿನಕರ್, ಸ್ನೇಹಿತರಾದ ನಟ ಧನ್ವೀರ್ ಹಾಗೂ ಸಂಗೀತ ನಿರ್ದೇಶಕ ಹರಿಕೃಷ್ಣ ಭೇಟಿಯಾಗಿ ಶುಭ ಕೋರಿದ್ದಾರೆ. ಈ ವೇಳೆ ನಟನಿಗೆ ಸಿಹಿ ತಿನ್ನಿಸಿ ಕೆಲ ಹೊತ್ತು ಅವರ ಕುಟುಂಬದವರು ಹಾಗೂ ಸ್ನೇಹಿತರು ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡ ಬಳಿಕ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಬಂಧನದಲ್ಲಿದ್ದಾರೆ. ನಟನ ಮೇಲೆ ಕಾರಾಗೃಹ ಅಧಿಕಾರಿಗಳು ಬಿಗಿ ಕಣ್ಗಾವಲಿಟ್ಟಿದ್ದಾರೆ.
ಅಭಿಮಾನಿಗೆ ಎಎಸ್‌ಐ ಕಪಾಳ ಮೋಕ್ಷ:
ನೆಚ್ಚಿನ ನಟನ ಹುಟ್ಟುಹಬ್ಬದ ದಿನ ಮನೆ ಬಳಿ ಬಂದಿದ್ದ ದರ್ಶನ್ ಅಭಿಮಾನಿಯೊಬ್ಬನಿಗೆ ರಾಜರಾಜೇಶ್ವರಿ ನಗರ ಠಾಣೆ ಎಎಸ್‌ಐ ಕಪಾಳ ಮೋಕ್ಷ ಮಾಡಿದ ಘಟನೆ ನಡೆದಿದೆ. ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆರ್.ಆರ್.ನಗರದ ಐಡಿಯಲ್ ಹೋಂ ಲೇಔಟ್‌ನಲ್ಲಿ ನಟ ದರ್ಶನ್ ಅವರ ನಿವಾಸ ಮುಂದೆ ಸೋಮವಾರ ಹುಟ್ಟುಹಬ್ಬದ ನಿಮಿತ್ತ ಕೆಲ ಅಭಿಮಾನಿಗಳು ಜಮಾಯಿಸಿದ್ದರು. ಈ ವೇಳೆ ತಮ್ಮ ನೆಚ್ಚಿನ ನಟನ ಮನೆ ಪ್ರವೇಶದ್ವಾರಕ್ಕೆ ಹೂವಿನ ಹಾರ ಹಾಕಿ ಶುಭಕೋರಲು ಅಭಿಮಾನಿಯೊಬ್ಬ ಮುಂದಾಗಿದ್ದಾನೆ. ಇದಕ್ಕೆ ಅಲ್ಲೇ ಭದ್ರತೆಯಲ್ಲಿದ್ದ ಪೊಲೀಸರು ತಡೆಹಿಡಿದಿದ್ದಾರೆ. ಈ ವೇಳೆ ಪೊಲೀಸರ ಜತೆ ದರ್ಶನ್ ಅಭಿಮಾನಿಯ ಮಾತಿನ ಚಕಮಕಿ ನಡೆದಿದೆ. ಈ ಹಂತದಲ್ಲಿ ಕೋಪಗೊಂಡ ಸಹಾಯಕ ಸಬ್ ಇನ್ಸ್‌ಪೆಕ್ಟರ್, ಆ ಅಭಿಮಾನಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಹಲ್ಲೆ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಕೊಡುವುದಾಗಿ ಅಭಿಮಾನಿ ಹೇಳಿದ್ದಾನೆ.