ಸಾರಾಂಶ
ಕನ್ನಡಪ್ರಭ ವಾರ್ತೆ ಮಳವಳ್ಳಿ
ನಿರ್ಮಾಪಕ ಉಮಾಪತಿ ಬಗ್ಗೆ ನಟ ದರ್ಶನ್ ನೀಡಿರುವ ಹಗುರ ಹೇಳಿಕೆಗಳು ಖಂಡನೀಯ. ಕೂಡಲೇ ಕ್ಷಮೆಯಾಚಿಸದಿದ್ದರೆ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವಿ.ಪಿ.ನಾಗೇಶ್ ಎಚ್ಚರಿಕೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಮಾಜ ಅಭಿವೃದ್ಧಿಗೆ ದುಡಿಯುತ್ತಿರುವ ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕ ಉಮಾಪತಿ ಬಗ್ಗೆ ಕೀಳು ಭಾಷೆಯಲ್ಲಿ ಮಾತನಾಡಿರುವ ನಟ ದರ್ಶನ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದರು.
ಉಪಮಾತಿ ಅವರಲ್ಲಿ ದರ್ಶನ್ ಕ್ಷಮೆಯಾಚಿಸದಿದ್ದರೆ ರಾಜ್ಯದೆಲ್ಲಡೆ ಒಕ್ಕಲಿಗರ ಸಂಘ ಹಾಗೂ ಪ್ರಗತಿಪರ ಸಂಘಟನೆಗಳೊಂದಿಗೆ ಸೇರಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಲ ತಿಂಗಳ ಹಿಂದೆ ರಾಬರ್ಟ್ ಚಿತ್ರ ಬಿಡುಗಡೆಯಾಗಿದ್ದಾಗ ದರ್ಶನ್ ಅವರೇ ಉಮಾಪತಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಕನ್ನಡ ಚಿತ್ರರಂಗದ ಹಿರಿಯ ನಟರು ನಿರ್ಮಾಪಕರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದರು. ಅಲ್ಲದೇ ನಮಗೂ ಸಹ ದರ್ಶನ್ ಬಗ್ಗೆ ಗೌರವವಿತ್ತು. ಆದರೆ, ಈ ರೀತಿಯ ಹೇಳಿಕೆ ಅವರಿಗೆ ಶೋಭೆಯಲ್ಲ ಎಂದರು.
ಉಮಾಪತಿ ಅವರು ಒಕ್ಕಲಿಗರ ಸಂಘದ ನಿರ್ದೇಶಕರಾದ ಮೇಲೆ ಕಿಮ್ಸ್ ಆಸ್ಪತ್ರೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗುವಂತೆ ಮಾಡಿದ್ದಾರೆ. ಇಂಥವರ ಬಗ್ಗೆ ದರ್ಶನ್ ಆಡಿರುವ ಅತಿಯಾದ ಮಾತುಗಳು ಬದಲಾಗಬೇಕು ಎಂದರು.
ಕೂಡಲೇ ಕ್ಷಮೆಯಾಚನೆ ಮಾಡದಿದ್ದರೆ ರಾಜ್ಯದೆಲ್ಲಡೆ ಒಕ್ಕಲಿಗರ ಸಂಘ ಹಾಗೂ ವಿವಿಧ ಸಂಘಟನೆಗಳೊಂದಿಗೆ ಸೇರಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟ ನಡೆಸುವ ಜೊತೆಗೆ ದರ್ಶನ್ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಕೀಲರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿ.ಎಂ.ನಂಟೇಶ್ ಮಾತನಾಡಿ, ನಟ ದರ್ಶನ್ ಒಬ್ಬ ಕಲಾವಿದ. ಅವರನ್ನು ಲಕ್ಷಾಂತರ ಅಭಿಮಾನಿಗಳು ಹಿಂಬಾಲಿಸುತ್ತಾರೆ.
ಅವರು ಯುವ ಸಮುದಾಯಕ್ಕೆ ಮಾದರಿಯಾಗಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಅವರು ಬಳಸುವ ಪದಗಳು ಅವರಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.
ಮುಖಂಡ ಕುಮಾರ್ ಮಾತನಾಡಿ, ನಟ ದರ್ಶನ್ ತಮ್ಮ ನಡವಳಿಕೆಯನ್ನು ತಿದ್ದಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆ ಹೋರಾಟಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಹೇಮಂತ್, ನಾಗೇಶ್, ಮುಖಂಡರಾದ ಕೆ.ಸಿ.ನಾಗೇಗೌಡ ಹಾಗೂ ರಮೇಶ್ ಇದ್ದರು.