ಕನ್ನಡಪ್ರಭ ವಾರ್ತೆ ಬೆಂಗಳೂರು

ಜನಪ್ರಿಯ ನಟ, ಕಿರುತೆರೆ ನಿರ್ಮಾಪಕ, ಕಂಠದಾನ ಕಲಾವಿದ ದಿಲೀಪ್‌ರಾಜ್‌ (48) ತೀವ್ರ ಹೃದಯ ಸ್ತಂಭನಕ್ಕೆ ಒಳಗಾಗಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಬುಧವಾರ ಬೆಳಗ್ಗೆ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲೇ ಅಸುನೀಗಿದ್ದಾರೆ.

ಆಪ್ತಮೂಲಗಳ ಪ್ರಕಾರ, ಮಂಗಳವಾರ ಬೆಳಗ್ಗೆಯೇ ದಿಲೀಪ್‌ ಅವರಿಗೆ ಕೊಂಚ ಅಸ್ವಸ್ಥತೆ ಉಂಟಾಗಿತ್ತು. ಆಗ ಮೊಬೈಲ್‌ ಆ್ಯಪ್‌ ಮೂಲಕ ಆರೋಗ್ಯ ಮಾಹಿತಿ ಪರೀಕ್ಷಿಸಿದ್ದರು. ಅದರಲ್ಲಿ ಏನೂ ಸಮಸ್ಯೆ ಕಾಣಿಸದ ಕಾರಣ ತಕ್ಷಣ ವೈದ್ಯರ ಬಳಿ ಹೋಗದೆ ಬುಧವಾರ ಬೆಳಗ್ಗೆ ವೈದ್ಯಕೀಯ ತಪಾಸಣೆಗೆ ಡಾಕ್ಟರ್‌ ಅಪಾಯಿಂಟ್‌ಮೆಂಟ್‌ ಪಡೆದಿದ್ದರು. ಆದರೆ ಅದಕ್ಕೂ ಮೊದಲೇ ಪ್ರಾಣಪಕ್ಷಿ ಹಾರಿ ಹೋಗಿದೆ.

ಪತ್ನಿ, ನಿರ್ಮಾಪಕಿ ಶ್ರೀವಿದ್ಯಾ ರಾಜ್‌, ಇಬ್ಬರು ಹೆಣ್ಣು ಮಕ್ಕಳು, ಅಪಾರ ಅಭಿಮಾನಿಗಳು, ಬಂಧುಮಿತ್ರರನ್ನು ದಿಲೀಪ್‌ ಅಗಲಿದ್ದಾರೆ.

ರಿಷಬ್‌ ಶೆಟ್ಟಿ, ಶಿವರಾಜ್‌ ಕುಮಾರ್‌, ಗಣೇಶ್‌, ದೊಡ್ಡಣ್ಣ, ಡಾರ್ಲಿಂಗ್‌ ಕೃಷ್ಣ, ಹಿರಿಯ ನಿರ್ದೇಶಕ ಎಸ್‌.ನಾರಾಯಣ್‌ ಸೇರಿ ಹಿರಿತೆರೆ, ಕಿರುತೆರೆಯ ಅನೇಕ ಗಣ್ಯರು ದಿಲೀಪ್‌ ರಾಜ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.


ಕಳೆದ ಎರಡು ದಶಕಗಳಿಂದ ಕಿರುತೆರೆ ಹಾಗೂ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದ ದಿಲೀಪ್‌ರಾಜ್‌ 2005ರಲ್ಲಿ ತೆರೆಕಂಡ ‘ಬಾಯ್‌ಫ್ರೆಂಡ್‌’ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ್ದರು. ಆ ಬಳಿಕ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಮಿಲನ’ ಚಿತ್ರದಲ್ಲಿ ನಟಿಸಿ ಅಪಾರ ಜನಮೆಚ್ಚುಗೆಗೆ ಪಾತ್ರರಾಗಿದ್ದರು.

‘ಯೂಟರ್ನ್’, ‘ಆರ್ಕೆಸ್ಟ್ರಾ ಮೈಸೂರು’, ‘ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು’ ಸೇರಿ 24ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್‌ ಕೃಷ್ಣ ನಿರ್ದೇಶನದ ‘ಲವ್‌ ಮಾಕ್‌ಟೇಲ್‌ 3’ ಇವರ ನಟನೆಯ ಕೊನೆಯ ಚಿತ್ರ.

ಕೆಲ ವರ್ಷಗಳ ಹಿಂದೆ ಪ್ರಸಾರವಾಗಿದ್ದ ‘ಹಿಟ್ಲರ್‌ ಕಲ್ಯಾಣ’ ಇವರಿಗೆ ಹೆಸರು ತಂದುಕೊಟ್ಟಿದ್ದ ಧಾರಾವಾಹಿ. ‘ಕಿಚ್ಚು’, ‘ಮಳೆಬಿಲ್ಲು’, ‘ಜನನಿ’, ‘ಅರ್ಧ ಸತ್ಯ’, ‘ಪ್ರೀತಿ ಇಲ್ಲದ ಮೇಲೆ’, ‘ಪ್ರೀತಿಗಾಗಿ’ ಮುಂತಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ಡಬ್ಬಿಂಗ್‌ ಕಲಾವಿದರಾಗಿಯೂ ಗಮನಸೆಳೆದಿದ್ದರು. ‘ಆ ದಿನಗಳು’, ‘ಮೈನಾ’ ಮೊದಲಾದ ಸಿನಿಮಾಗಳ ನಾಯಕ ಪಾತ್ರಕ್ಕೆ ಧ್ವನಿ ನೀಡಿದ್ದರು. ಕಾಲೇಜು ದಿನಗಳಿಂದಲೇ ರಂಗಭೂಮಿ, ನೃತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ದಿಲೀಪ್‌ ರಾಜ್‌ ಸೊಗಸಾಗಿ ಕಾರ್ಯಕ್ರಮ ನಿರ್ವಹಣೆಯನ್ನೂ ಮಾಡುತ್ತಿದ್ದರು. ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಬ್ರಹ್ಮಗಂಟು’, ‘ಕೃಷ್ಣ ರುಕ್ಕು’ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದರು. ರಾಮನಗರದ ಗುನ್ನೂರು ಬಳಿಯ ಅವರ ಫಾರ್ಮ್‌ಹೌಸ್‌ನಲ್ಲಿ ಲಿಂಗಾಯತ ಸಂಪ್ರದಾಯದಂತೆ ದಿಲೀಪ್‌ ರಾಜ್‌ ಅವರ ಅಂತ್ಯಕ್ರಿಯೆ ನೆರವೇರಿತು.