ನಟ ದುನಿಯಾ ವಿಜಯ್‌ ವಿಚ್ಛೇದನ ಅರ್ಜಿ ವಜಾ

| Published : Jun 14 2024, 01:05 AM IST

ಸಾರಾಂಶ

ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಟ ದುನಿಯಾ ವಿಜಯ್ ಅವರು ಪತ್ನಿ ನಾಗರತ್ನ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಆದೇಶಿಸಿದೆ.

ಕ್ರೌರ್ಯ ಆಧಾರದ ಮೇಲೆ ಪತ್ನಿ ನಾಗರತ್ನ ಅವರ ಜೊತೆಗಿನ ತಮ್ಮ ವಿವಾಹವನ್ನು ಅನೂಜಿರ್ತಗೊಳಿಸಿ ವಿಚ್ಛೇದನ ಮಂಜೂರು ಮಾಡಬೇಕು ಎಂದು ದುನಿಯಾ ವಿಜಯ್‌ ಅರ್ಜಿ ಸಲ್ಲಿಸಿದ್ದರು.

ಆದರೆ, ಅರ್ಜಿಯಲ್ಲಿ ಪತ್ನಿ ವಿರುದ್ಧ ಮಾಡಿರುವ ಆರೋಪಗಳನ್ನು ಸಾಕ್ಷ್ಯಧಾರ ಸಮೇತ ಸಾಬೀತುಪಡಿಸುವಲ್ಲಿ ದುನಿಯಾ ವಿಜಯ್‌ ವಿಫಲವಾಗಿದ್ದಾರೆ. ಆದ್ದರಿಂದ ಇಬ್ಬರ ನಡುವಿನ ವಿವಾಹ ರದ್ದುಪಡಿಸಿ ವಿಚ್ಛೇದನ ಮಂಜೂರು ಮಾಡಲಾಗದು ಎಂದು ತೀರ್ಮಾನಿಸಿದ ನಗರದ 1ನೇ ಪ್ರಧಾನ ಕೌಟುಂಬಿಕ ನ್ಯಾಯಾಲಯ, ದುನಿಯಾ ವಿಜಯ್‌ ಅವರ ಅರ್ಜಿ ವಜಾಗೊಳಿಸಿ ಆದೇಶಿಸಿದೆ ಎಂದು ತಿಳಿದು ಬಂದಿದೆ. ವಿಸ್ತೃತ ಆದೇಶ ಇನ್ನೂ ಲಭ್ಯವಾಗಿಲ್ಲ.

ಪತ್ನಿ ನಾಗರತ್ನ ಅವರು ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡು ದಾಂಪತ್ಯ ಜೀವನ ನಡೆಸುತ್ತಿಲ್ಲ. ಪೋಷಕರಿಗೆ ಗೌರವ ತೋರುತ್ತಿಲ್ಲ. ಪತ್ನಿಯೊಂದಿಗೆ ಮನಸ್ತಾಪ ಹೆಚ್ಚಾಗಿದೆ. ಇದರಿಂದ ತಮಗೆ ಮಾನಸಿಕ ಕಿರುಕುಳ ಉಂಟಾಗುತ್ತಿದೆ. ಹಾಗಾಗಿ, ಕ್ರೌರ್ಯ ಆಧಾರದ ಮೇಲೆ ಪತ್ನಿ ನಾಗರತ್ನ ಅವರ ಜೊತೆಗಿನ ತಮ್ಮ ವಿವಾಹವನ್ನು ರದ್ದುಪಡಿಸಬೇಕು. ಆ ಮೂಲಕ ವಿಚ್ಛೇದನ ಮಂಜೂರು ಮಾಡಬೇಕು ಎಂದು ಕೋರಿ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯಕ್ಕೆ ದುನಿಯಾ ವಿಜಯ್‌ ಅರ್ಜಿ ಸಲ್ಲಿಸಿದ್ದರು.