ಸಾರಾಂಶ
ಕಿಚ್ಚ ಸುದೀಪ್ ತನ್ನ 52ನೇ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ರಾಜಕಾರಣ ಪ್ರವೇಶ ಕುರಿತಾಗಿ ಮಾರ್ಮಿಕವಾಗಿ ಮಾತನಾಡಿದ್ದಾರೆ. ‘ನಾನು ರಾಜಕೀಯಕ್ಕೆ ಬರುವ ಬಗ್ಗೆ ಗೊತ್ತಿಲ್ಲ. ಆದರೆ, ಕೆಲವರು ರಾಜಕೀಯಕ್ಕೆ ಬರಬೇಕು ಅನಿಸೋ ರೀತಿ ಆಗಾಗ ಮಾಡ್ತಾರೆ’ ಎಂದು ಹೇಳಿದ್ದಾರೆ.
ಬೆಂಗಳೂರು : ಕಿಚ್ಚ ಸುದೀಪ್ ತನ್ನ 52ನೇ ಹುಟ್ಟುಹಬ್ಬ ಆಚರಣೆ ಸಂದರ್ಭದಲ್ಲಿ ರಾಜಕಾರಣ ಪ್ರವೇಶ ಕುರಿತಾಗಿ ಮಾರ್ಮಿಕವಾಗಿ ಮಾತನಾಡಿದ್ದಾರೆ. ರಾಜಯಕೀಯಕ್ಕೆ ಬರುತ್ತೀರಾ ಎಂಬ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ನಾನು ರಾಜಕೀಯಕ್ಕೆ ಬರುವ ಬಗ್ಗೆ ಗೊತ್ತಿಲ್ಲ. ಆದರೆ, ಕೆಲವರು ರಾಜಕೀಯಕ್ಕೆ ಬರಬೇಕು ಅನಿಸೋ ರೀತಿ ಆಗಾಗ ಮಾಡ್ತಾರೆ’ ಎಂದು ಹೇಳಿದ್ದಾರೆ.
ಹುಟ್ಟುಹಬ್ಬದ ಆಚರಣೆ ಕುರಿತು ಹೇಳಿಕೊಳ್ಳಲು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾಧ್ಯಮದವರು ಕೇಳಿದ ರಾಜಕೀಯಕ್ಕೆ ಹೋದರೆ ಯಾವ ನಟ್ಟು, ಬೋಲ್ಟು ಟೈಟ್ ಮಾಡುತ್ತೀರಿ ಎಂಬ ಪ್ರಶ್ನೆಗೆ, ‘ಈ ಪ್ರಶ್ನೆ ಮೂಲಕ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಪರೋಕ್ಷವಾಗಿ ನೆನಪಿಸುತ್ತಿದ್ದೀರಿ. ನಾನು ಯಾರದ್ದೂ ಮತ್ತು ಯಾವುದೇ ನಟ್ಟು, ಬೋಲ್ಟು ಟೈಟ್ ಮಾಡಲ್ಲ. ನೀವು ಹೇಳುವಂತೆ ರಾಜಕೀಯಕ್ಕೆ ಹೋದರೂ ನಾನು ಬದಲಾಗದೆ ಇರೋ ರೀತಿ ನನ್ನ ನಾನೇ ಟೈಟ್ ಮಾಡಿಕೊಳ್ಳುತ್ತೇನೆ. ಚಿತ್ರೋತ್ಸವ ಕಾರ್ಯಕ್ರಮದಲ್ಲಿ ನಟ್ಟು-ಬೋಲ್ಟು ಟೈಟ್ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದರಲ್ಲಿ ತಪ್ಪಿಲ್ಲ. ಯಾಕೆಂದರೆ ಇದರಲ್ಲಿ ಸಾಧು ಕೋಕಿಲ ಅವರ ಕಿತಾಪತಿ ಇದೆ. ಚಿತ್ರರಂಗದಲ್ಲಿ ಯಾರನ್ನು ವೈಯಕ್ತಿಕವಾಗಿ ಕರೆದಿದ್ದಾರೋ ಅವರೆಲ್ಲ ಅಂದು ಚಿತ್ರೋತ್ಸವದ ಕಾರ್ಯಕ್ರಮಕ್ಕೆ ಹೋಗಿದ್ದಾರೆ. ಎಲ್ಲರನ್ನೂ ಕರೆಯಲು ಸೆಕ್ಯುರಿಟಿ ಕಾರಣ ಕೊಟ್ಟಿದ್ದಾರೆ. ಹೀಗಾಗಿ ತುಂಬಾ ಮಂದಿ ಹೋಗಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಹೇಳಿದ ನಟ್ಟು, ಬೋಲ್ಟು ಟೈಟ್ ಮಾಡುವ ಹೇಳಿಕೆಯಲ್ಲಿ ಸಾಧು ಕೋಕಿಲಾ ಅವರದ್ದೇ ತಪ್ಪಿದೆ’ ಎಂದು ಸುದೀಪ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಮ್ಮ ಹೊಸ ಸಿನಿಮಾ ಬಿಡುಗಡೆ ದಿನವೇ ಡೆವಿಲ್ ಮತ್ತು 45 ಬಿಡುಗಡೆ ಆಗಲಿದೆ ಎಂಬುದರ ಕುರಿತ ಪ್ರಶ್ನೆಗೆ, ‘ಕ್ರಿಸ್ಮಸ್ ಸಂಭ್ರಮಕ್ಕೆ ನನ್ನ 47ನೇ ಚಿತ್ರ ಬರಲಿದೆ ಎಂದು ನಾವು ತುಂಬಾ ಹಿಂದೆಯೇ ಘೋಷಣೆ ಮಾಡಿದ್ದೆವು. ಆಗ ಯಾವ ಚಿತ್ರವೂ ಬಿಡುಗಡೆ ದಿನಾಂಕ ಘೋಷಣೆ ಮಾಡಿರಲಿಲ್ಲ. ಈಗ ‘ಡೆವಿಲ್’ ಹಾಗೂ ‘45’ ಚಿತ್ರಗಳು ಬರುತ್ತಿವೆ ಎನ್ನುತ್ತಿದ್ದಾರೆ. ‘ಡೆವಿಲ್’ ಚಿತ್ರಕ್ಕೂ ಒಳ್ಳೆಯದಾಗಲಿ. ‘45’ ಚಿತ್ರವೂ ಬರಲಿ. ನಮ್ಮ ಚಿತ್ರವೂ ಬರುತ್ತದೆ. ನಾನು ಯಾರಿಗೂ ಸ್ಪರ್ಧಿಯಲ್ಲ’ ಎಂದು ಸುದೀಪ್ ಹೇಳಿದರು.
ಇಂದು ಸುದೀಪ್ 52ನೇ ಹುಟ್ಟುಹಬ್ಬ
ಕಿಚ್ಚ ಸುದೀಪ್ ಅವರು ಮಂಗಳವಾರ (ಸೆ.2) 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಹುಟ್ಟುಹಬ್ಬದ ಅಂಗವಾಗಿ ಸೆ.1ರ ಮಧ್ಯರಾತ್ರಿಯಿಂದಲೇ ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್‌ನಲ್ಲಿ ಸಂಭ್ರಮಾಚರಣೆ ನಡೆಯುತ್ತಿದೆ. ರಾತ್ರಿಯೇ ಸುದೀಪ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಆಗಮಿಸಿದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.