ಮಡಿಕೇರಿ: ಕರ್ನಾಟಕ ರತ್ನ, ಪದ್ಮಭೂಷಣ, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಡಾ.ರಾಜ್ ಕುಮಾರ್ ಅವರು ಕನ್ನಡ ನಾಡು, ನುಡಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ಡಾ.ರಾಜ್ ಕುಮಾರ್ ಅವರ 97 ನೇ ಜನ್ಮ ದಿನಾಚರಣೆ ಹಾಗೂ ಡಾ.ರಾಜ್‌ಕುಮಾರ್ ಅವರ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ನಿವೃತ್ತ ಶಿಕ್ಷಕ ಉ.ರಾ.ನಾಗೇಶ್ ಅವರು ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿ ಡಾ.ರಾಜ್ ಕುಮಾರ್ ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಮನೋಜ್ಞ ಅಭಿನಯ ನೀಡಿ ಇಂದಿಗೂ ಸಹ ನಾಡಿನ ಜನರಲ್ಲಿ ಕಣ್ಣಿಗೆ ಕಟ್ಟುವಂತೆ ಇದ್ದಾರೆ ಎಂದರು. ಕೊಡಗು ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಮಾತನಾಡಿ ‘ಡಾ.ರಾಜ್ ಕುಮಾರ್ ಅವರ ಸರಳತೆ, ಕನ್ನಡ ಭಾಷೆಯ ಮೇಲಿನ ಪ್ರೀತಿ, ಸಂಸ್ಕೃತಿಯ ಕೊಡುಗೆಯಿಂದ ಡಾ.ರಾಜ್ ಕುಮಾರ್ ಅವರನ್ನು ಅಣ್ಣಾವ್ರು ಎಂದು ಕರೆಯುತ್ತಾರೆ ಎಂದು ತಿಳಿಸಿದರು. ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿ ಡಾ.ರಾಜ್ ಕುಮಾರ್ ಜಯಂತಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜೊತೆ ಕೈಜೋಡಿಸಿ ಕಾರ್ಯಕ್ರಮ ಆಯೋಜಿಸಬೇಕೆಂದು ತೀರ್ಮಾನಿಸಲಾಗಿತ್ತು, ಅದರಂತೆ ಆಯೋಜಿಸಲಾಗಿದೆ ಎಂದರು.

ತಹಸೀಲ್ದಾರ್ ಶ್ರೀಧರ್ ಅವರು ಮಾತನಾಡಿ ಡಾ.ರಾಜ್ ಕುಮಾರ್ ಅವರ ಚಲನಚಿತ್ರ ಗೀತೆಗಳ ಹಾಡುಗಳನ್ನು ಕೇಳುತ್ತಿದ್ದರೆ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಎಂದರು. ಸರ್ವೋದಯ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಡಿವೈಎಸ್‌ಪಿ ಸೂರಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ, ನಗರಸಭೆ ಮಾಜಿ ಅಧ್ಯಕ್ಷರಾದ ಲತಾ ಬಂಗೇರ, ಪ್ರಮುಖರಾದ ಸಂಪತ್ ಕುಮಾರ್, ಅಂಬೆಕಲ್ ನವೀನ್, ಜಯಕುಮಾರ್, ಜಯಲಕ್ಷ್ಮಿ, ಕಿಗ್ಗಾಲು ಗಿರೀಶ್ ಇತರರು ಇದ್ದರು.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಸ್ವಾಗತಿಸಿದರು. ಸಮರ್ಥ ಕನ್ನಡಿಗ ಬಳಗದ ಅಧ್ಯಕ್ಷರಾದ ಜಯಕ್ಷ್ಮಿ ಮತ್ತು ತಂಡದವರು ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

ಕನ್ನಡ ಸಿರಿ ಸ್ನೇಹ ಬಳಗದಿಂದ ಗಾಯನ: ಕುಶಾಲನಗರದ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷರಾದ ಲೋಕೇಶ್ ಸಾಗರ್ ಅವರ ನೇತೃತ್ವದಲ್ಲಿ, ಡಾ.ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಪ್ರಯುಕ್ತ ಡಾ.ರಾಜ್ ಕುಮಾರ್ ಅವರ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.