ಮನುಷ್ಯನಿಗೆ ನೆಮ್ಮದಿ ಕೊಡುವುದು ತಂದೆಯ ಹೆಗಲು, ನೆಮ್ಮದಿ ಹೆಚ್ಚಿಸುವುದು ತಾಯಿಯ ಮಡಿಲು. ವಿ.ರವಿಚಂದ್ರನ್ ಗೆ ತಂದೆ-ತಾಯಿ ಹೆಗಲಾಗಿದ್ದು, ಅಂತಹ ನಾಯಕ ನಟ, ನಿರ್ಮಾಪಕನ ಜನ್ಮದಿನವನ್ನು ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಪುಣ್ಯಾಶ್ರಮದಲ್ಲಿ ವಿಶೇಷ ಮಕ್ಕಳೊಂದಿಗೆ ಆಚರಿಸುತ್ತಿರುವುದು ಅರ್ಥಪೂರ್ಣ ಮತ್ತು ಶ್ಲಾಘನೀಯ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೇಳಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಮನುಷ್ಯನಿಗೆ ನೆಮ್ಮದಿ ಕೊಡುವುದು ತಂದೆಯ ಹೆಗಲು, ನೆಮ್ಮದಿ ಹೆಚ್ಚಿಸುವುದು ತಾಯಿಯ ಮಡಿಲು. ವಿ.ರವಿಚಂದ್ರನ್ ಗೆ ತಂದೆ-ತಾಯಿ ಹೆಗಲಾಗಿದ್ದು, ಅಂತಹ ನಾಯಕ ನಟ, ನಿರ್ಮಾಪಕನ ಜನ್ಮದಿನವನ್ನು ಪುಟ್ಟರಾಜ ಗವಾಯಿಗಳ ಅಂಧ ಮಕ್ಕಳ ಪುಣ್ಯಾಶ್ರಮದಲ್ಲಿ ವಿಶೇಷ ಮಕ್ಕಳೊಂದಿಗೆ ಆಚರಿಸುತ್ತಿರುವುದು ಅರ್ಥಪೂರ್ಣ ಮತ್ತು ಶ್ಲಾಘನೀಯ ಎಂದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಹೇಳಿದರು.ನಗರದ ಹೊರ ವಲಯದ ಬಾಡಾ ಕ್ರಾಸ್‌ನ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ಅಖಿಲ ಕರ್ನಾಟಕ ಜಿಲ್ಲಾ ರವಿಚಂದ್ರನ್ ಅಭಿಮಾನಿಗಳ ಸಂಘ, ಕರ್ನಾಟಕ ಪೋಟೋ ಗ್ರಾಫರ್ ಮತ್ತು ವೀಡೀಯೇ ಗ್ರಾಫರ್ ಅಸೋಸಿಯೇಷನ್ ಹಾಗೂ ಮನು ಪೊಟೋಗ್ರಫಿ ಅಂಡ್ ಇವೆಂಟ್ಸ್‌ನಿಂದ ಹಮ್ಮಿಕೊಂಡಿದ್ದ ವಿ.ರವಿಚಂದ್ರನ್‌ರ 65ನೇ ವರ್ಷದ ಜನ್ಮದಿನ-ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡ ನಾಡಿನ ಸಿನಿಮಾರಂಗದಲ್ಲಿ ನಟನೆ, ನಿರ್ದೇಶನ, ನಿರ್ಮಾಣ, ಸಂಗೀತ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡ ಕ್ರೇಜಿಸ್ಟಾರ್ ಡಾ.ವಿ ರವಿಚಂದ್ರನ್ ಸಿನಿಮಾ ರಾಯಭಾರಿಯಾಗಿದ್ದಾರೆ ಎಂದರು.
ದಶಕಗಳ ಕಾಲ ಸಿನಿಮಾ ರಂಗದಲ್ಲೇ ಇದ್ದರೂ ರವಿಚಂದ್ರನ್ಅ ಸಿನಿಮಾಗಳಿಂದ ಹಣ ಗಳಿಸದಿರಬಹುದು. ಆದರೆ, ಕೋಟ್ಯಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಡಾ.ರಾಜಕುಮಾರ, ವಿಷ್ಣುವರ್ಧನ್, ಅಂಬರೀಶರ ಜೊತೆಯಲ್ಲಿ ಸಿನಿಮಾ ಪಯಣ ಮಾಡಿದವರು. ಹಿರಿಯ ನಟ, ನಿರ್ಮಾಪಕ ಹೀಗೆ ಚಿತ್ರರಂಗದ ಎಲ್ಲಾ ಜವಾಬ್ಧಾರಿ, ಹೊಣೆಗಾರಿಕೆ ನಿರ್ವಹಿಸಿರುವ ಅಪರೂಪದ ಪ್ರತಿಭೆ ರವಿಚಂದ್ರನ್‌ರ ಜನ್ಮದಿನವನ್ನು ವಿಶೇಷ ಮಕ್ಕಳೊಂದಿಗೆ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಅವರು ಶ್ಲಾಘಿಸಿದರು.ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇವತ್ತು ಕೆಲ ಸಂಘಟನೆಗಳಿಂದ ಮೋಜಿಗೆ, ಗುಂಪುಗಾರಿಕೆ ಮಾಡಿ ದುಂದು ವೆಚ್ಚ ಮಾಡುವ ಕಾರ್ಯಕ್ರಮ ಹೆಚ್ಚಾಗಿವೆ. ಆದರೆ, ಪುಣ್ಯಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸುವ ಅರ್ಥಪೂರ್ಣ, ಪುಣ್ಯದ ಕಾರ್ಯಕ್ರಮ ನಡೆಯುತ್ತಿದೆ. ರವಿಚಂದ್ರನ್ ಹಿರಿಯ ಕಲಾವಿದ ಎನ್ನುವುದಕ್ಕಿಂತ ಆದರ್ಶ ಮಹಾ ಪುರುಷ. ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರಾಜಕುಮಾರ ನಂತರ ಬರುವ ಮೇರು ನಟ ಎಂದರು.
ಪಾಲಿಕೆ ಮಾಜಿ ಮೇಯರ್ ಬಿ.ಜೆ.ಅಜಯಕುಮಾರ ಮಾತನಾಡಿ, ರವಿಚಂದ್ರನ್ ಒಬ್ಬ ಮೇರು ನಟ. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬಂತೆ ಕೋಟಿಗಟ್ಟಲೆ ದಾನ ಮಾಡಿದ್ದಾರೆ. ಚಿತ್ರದಿಂದ ಬಂದ ಹಣವನ್ನು ಮತ್ತೆ ಚಿತ್ರರಂಗಕ್ಕೆ ಹಾಕಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಕೊಟ್ಟಂತ ಸೇವೆ ಅಪಾರ. ಹಂಸಲೇಖ ಶ್ರೀರಾಮಚಂದ್ರ, ರವಿಚಂದ್ರನ್ ಆಂಜನೇಯನಿದ್ದಂತಿದ್ದರು. ಅವರ ಸಿನಿಮಾಗಳಿಗೆ ಹಂಸಲೇಖ ಅಪಾರ ಶ್ರಮ ಹಾಕಿದ್ದಾರೆ. ಈ ಇಬ್ಬರ ಜೋಡಿ ಸ್ಮರಣೀಯ ಕೊಡುಗೆ ನೀಡಿದೆ ಎಂದು ತಿಳಿಸಿದರು.ಪರಬಾಷೆಯ ನಟಿಯರನ್ನು ಕರೆಸಿ ಕನ್ನಡ ಚಿತ್ರರಂಗದಲ್ಲಿ ಅವಕಾಶ ಕೊಟ್ಟ ಚಿತ್ರ ಮಾಂತ್ರಿಕ. ರವಿಚಂದ್ರನ್ ಸಾಧನೆ ಅಪಾರ ಅಮೋಘ, ಕೇವಲ ಚಿತ್ರರಂಗ ಅಲ್ಲ ಟೀವಿಗಳಲ್ಲೂ ಉತ್ತಮ ಗುಣಗಳನ್ನು ಅನಾವರಣ ಮಾಡುತ್ತಿದ್ದಾರೆ. ಈಚೆಗೆ ಟಿವಿ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿ ಆಗಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪುಣ್ಯಾಶ್ರಮದಲ್ಲಿ ನಡೆದ ಸಿನಿಮಾ ನಟರ ಉತ್ತಮ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು.
ಅಖಿಲ ಕರ್ನಾಟಕ ದಾವಣಗೆರೆ ಜಿಲ್ಲಾ ರವಿಚಂದ್ರನ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಮನು ಎಂ. ದೇವನಗರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ ಬಡದಾಳ್, ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆ ಅಧ್ಯಕ್ಷ ಚಿತ್ರದುರ್ಗದ ಮಾಲತೇಶ ಅರಸ್, ಕರ್ನಾಟಕ ಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಎಚ್.ವೈ.ಹನುಮಂತ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಎಂ.ಎನ್.ಕಾಂತರಾಜ, ವಿಶ್ವ ಕರವೇ ರಾಜ್ಯ ಸಂಚಾಲಕ ಬಿ.ಈ.ದಯಾನಂದ, ಚಿತ್ರದುರ್ಗ ಅಧ್ಯಕ್ಷ ಜೆ.ಎಸ್.ಶಂಭು. ಜಿಲ್ಲಾ ಉಪಾಧ್ಯಕ್ಷ ಸಿದ್ದೇಶ್ ಕೋಟೆಹಾಳ್, ಕರ್ನಾಟಕ ಪೋಟೋ ಗ್ರಾಫರ್ ಮತ್ತು ವೀಡೀಯೋ ಗ್ರಾಫರ್ ಅಸೋಸಿಯೇಷನ್ ಉಪಾಧ್ಯಕ್ಷ ಡಿ.ರಮೇಶ, ಪ್ರಧಾನ ಕಾರ್ಯದರ್ಶಿ ಕೆ. ದೇವೇಂದ್ರಪ್ಪ. ಡಿ ರಂಗನಾಥ, ದಿಗ್ವಿಜಯ್, ತರಳಬಾಳು ಜ್ಯೂಯಲರ್ಸ್‌ನ ಬಿ. ಆರ್.ಮಂಜುನಾಥ, ಚಂದ್ರಮೌಳಿ. ಮಾಲಾ, ಸುಕನ್ಯಾ , ಮುರುಗೇಶ, ಗಣೇಶ್ ಇತರರು ಇದ್ದರು. ಪುಣ್ಯಾಶ್ರಮದ ಮಕ್ಕಳು ಪ್ರಾರ್ಥನೆ ಮಾಡಿದರು. ಸುಕನ್ಯಾ ಕಾರ್ಯಕ್ರಮ ನಿರೂಪಿಸಿದರೆ, ಹನುಮಂತ್ ವಂದಿಸಿದರು.