ಸಾರಾಂಶ
ಅದಾನಿ ಸಮೂಹದ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ (ಸಿಎಸ್‌ಆರ್) ನಿರ್ವಹಿಸುವ ಅದಾನಿ ಫ಼ೌಂಡೇಶನ್ ಮೂಡುಬಿದರಿಯ ಶ್ರೀ ಮಹಾವೀರ ಕಾಲೇಜಿಗೆ ೨೫ ಲಕ್ಷ ರು. ಅನುದಾನ ನೀಡಿದೆ.
ಕನ್ನಡಪ್ರಭ ವಾರ್ತೆ ಕಾಪು
ಶೈಕ್ಷಣಿಕ ಮೂಲಸೌಕರ್ಯ ಬಲಪಡಿಸುವ ಉದ್ದೇಶದಿಂದ ಅದಾನಿ ಸಮೂಹದ ಸಾಮಾಜಿಕ ಜವಾಬ್ದಾರಿ ಹೊಣೆಗಾರಿಕೆ (ಸಿಎಸ್‌ಆರ್) ನಿರ್ವಹಿಸುವ ಅದಾನಿ ಫ಼ೌಂಡೇಶನ್ ಮೂಡುಬಿದರಿಯ ಶ್ರೀ ಮಹಾವೀರ ಕಾಲೇಜಿಗೆ ೨೫ ಲಕ್ಷ ರು. ಅನುದಾನ ನೀಡಿದೆ. ಮಣಿಪಾಲದ ಅಕಾಡೆಮಿ ಆಫ಼್ ಜನರಲ್ ಎಜುಕೇಶನ್‌ನಡಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಮಹಾವೀರ ಕಾಲೇಜು ಸಂಸ್ಥೆ ದಶಕಗಳಿಂದ ಉನ್ನತ ಶಿಕ್ಷಣದಲ್ಲಿ ಮಹತ್ವದ ಪಾತ್ರವಹಿಸಿದೆ.ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಅಧ್ಯಕ್ಷ ಕಿಶೋರ್ ಆಳ್ವ ಅವರು ಈ ಅನುದಾನದ ಚೆಕ್‌ನ್ನು ಕಾಲೇಜಿನ ಪ್ರಾಂಶುಪಾಲ ಡಾ. ರಾಧಾಕೃಷ್ಣ ಮತ್ತು ಮಾಜಿ ಸಚಿವ ಹಾಗೂ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಅವರಿಗೆ ಹಸ್ತಾಂತರಿಸಿದರು.
ನಂತರ ಮಾತನಾಡಿದ ಕಿಶೋರ್ ಆಳ್ವ, ಶಿಕ್ಷಣದ ಉನ್ನತೀಕರಣವೂ ಅದಾನಿ ಫೌಂಡೇಶನ್‌ನ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ. ಶ್ರೀ ಮಹಾವೀರ ಕಾಲೇಜು ದಶಕಗಳಿಂದ ಜ್ಞಾನ ಮತ್ತು ಮೌಲ್ಯಗಳ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಈ ಅನುದಾನದ ಮೂಲಕ ಕಾಲೇಜಿನ ಮೂಲಸೌಕರ್ಯ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಬೆಳವಣಿಗೆಗೆ ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಅದಾನಿ ಸಮೂಹದ ಸಿಎಸ್‌ಆರ್ ಯೋಜನೆಗಳು ಗ್ರಾಮೀಣ ಪ್ರದೇಶಗಳಿಗೆ ವರದಾನವಾಗಿದ್ದು, ಸಂಸ್ಥೆಯು ಶಿಕ್ಷಣ, ಆರೋಗ್ಯ ಹಾಗೂ ಮೂಲಭೂತ ಸೌಕರ್ಯ ಕ್ಷೇತ್ರಗಳಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳನ್ನು ಹಮ್ಮಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಕೆ. ಅಭಯಚಂದ್ರ ಜೈನ್ ಹರ್ಷ ವ್ಯಕ್ತಪಡಿಸಿದರು. ಪ್ರಾಂಶುಪಾಲ ಡಾ. ರಾಧಾಕೃಷ್ಣ ಕಾಲೇಜು ಪರವಾಗಿ ಅದಾನಿ ಸಮೂಹಕ್ಕೆ ಅಭಿನಂದಿಸಿದರು.