ಸದೃಢ ಸಮಾಜ ನಿರ್ಮಾಣಕ್ಕೆ ಹೊಂದಾಣಿಕೆ ಅಗತ್ಯ: ಶುಭ ಮರವಂತೆ

| Published : Mar 14 2024, 02:06 AM IST

ಸಾರಾಂಶ

ಶಿಕಾರಿಪುರದ ಸುಗಂಧ ಬಳಗದ ವತಿಯಿಂದ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಲ್ಲಿ ಪರಸ್ಪರ ಹೊಂದಾಣಿಕೆಯ ಮನೋಭಾವನೆ ಅತ್ಯಗತ್ಯವಾಗಿದೆ. ಹೊಂದಾಣಿಕೆಯ ಮನೋಭಾವನೆ ಕುಟುಂಬದ ಮೂಲಕ ಅರಿತುಕೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಎನ್ಎಸ್ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಶುಭ ಮರವಂತೆ ಶ್ಲಾಘಿಸಿದರು.

ಪಟ್ಟಣದ ಸುಗಂಧ ಬಳಗದ ವತಿಯಿಂದ ಚನ್ನಕೇಶವ ನಗರದಲ್ಲಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈ ದಿಸೆಯಲ್ಲಿ ಸುಗಂಧ ಬಳಗ ಅತಿ ಹೆಚ್ಚು ಸದಸ್ಯರನ್ನು ಹೊಂದಿ ಹೊಂದಾಣಿಕೆಯ ಮೂಲಕ ಸಮಾಜಮುಖಿ ಕಾರ್ಯದಿಂದ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ ಎಂದರು.

ಕುಟುಂಬ ನಿರ್ವಹಣೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆಯರು ಇತ್ತೀಚಿನ ಹಲವು ವರ್ಷದಿಂದ ಸಮಾಜದಲ್ಲಿನ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿದ್ದು, ಸಮಾಜದ ಎಲ್ಲ ಆಗುಹೋಗುಗಳಲ್ಲಿ ಸೂಕ್ತ ಸಮರ್ಥ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಪಾತ್ರ ಬಹು ಮುಖ್ಯ ಎಂಬು ದನ್ನು ಸಾಬೀತುಪಡಿಸಿದ್ದಾರೆ ಎಂದ ಅವರು, ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯನ್ನು ದೊರಕಿಸಿಕೊಡಬೇಕಾಗಿದೆ ಎಂದರು.

ಹೆಣ್ಣಿಗೆ ಹೆಣ್ಣು ಶತ್ರುವಲ್ಲ, ಸದೃಢ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರಲ್ಲಿ ಪರಸ್ಪರ ಹೊಂದಾಣಿಕೆಯ ಮನೋಭಾವನೆ ಅತ್ಯಗತ್ಯವಾಗಿದೆ ಎಂದ ಅವರು ಕುಟುಂಬ ದಲ್ಲಿನ ಪ್ರತಿಯೊಬ್ಬರನ್ನೂ ಪರಸ್ಪರ ಪ್ರೀತಿಸಿ ಗೌರವಿಸುವ ಮನೋಭಾವನೆಯನ್ನು ಬೆಳೆಸಿಕೊಂಡಲ್ಲಿ ಸದೃಢ ಸಮಾಜ ನಿರ್ಮಾಣವಾಗಲಿದೆ ಈ ದಿಸೆಯಲ್ಲಿ ಸುಗಂಧ ಬಳಗ ಅತಿ ಹೆಚ್ಚು ಸದಸ್ಯರನ್ನು ಹೊಂದಿ ಪರಸ್ಪರ ಹೊಂದಾಣಿಕೆ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡು ಮಾದರಿ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಶ್ಲಾಘಿಸಿದರು.

ಪತಿ ಪತ್ನಿ ಪರಸ್ಪರ ಹೊಂದಾಣಿಕೆಯಿಂದ ಬದುಕಬೇಕು. ಇತ್ತೀಚಿನ ವರ್ಷದಲ್ಲಿ ಕ್ಷುಲ್ಲಕ ಕಾರಣಕ್ಕೆ ವಿವಾಹ ವಿಚ್ಛೇಧನ ಪ್ರಕರಣ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಎಂತಹ ಭಿನ್ನಾಭಿಪ್ರಾಯಗಳು ಉದ್ಭವಿಸಿದರೂ ಪರಸ್ಪರ ಹೊಂದಾಣಿಕೆಯಿಂದ ಸಮಸ್ಯೆ ಬಗೆಹರಿಸಿಕೊಂಡು ಮಾದರಿ ಸತಿಪತಿಯಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಈ ದಿಸೆಯಲ್ಲಿ ಸಂಘ ಸಂಸ್ಥೆಗಳು ಜಾಗೃತಿಯನ್ನು ಮೂಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಗಂಧ ಬಳಗದ ಅಧ್ಯಕ್ಷ ಎಂ.ಜಿ ಪ್ರಕಾಶ್ ಮಾತನಾಡಿ, ಬಳಗ ಪಟ್ಟಣದಲ್ಲಿ ದಶಕದ ಹೆಚ್ಚು ಅವಧಿಯಿಂದ ಕಾರ್ಯ ನಿರ್ವಹಿಸಿ ಕುಟುಂಬದ ಸರ್ವ ಸದಸ್ಯರು ಸಮಾಜಮುಖಿ ಕಾರ್ಯದಲ್ಲಿ ಪಾಲ್ಗೊಂಡು, ಎಲ್ಲರೊಂದಿಗೆ ಬೆರೆಯುವ ಅವಕಾಶವನ್ನು ಒದಗಿಸಿಕೊಡುತ್ತಿದೆ. ಈಗಾಗಲೇ ಮಹಿಳಾ ಪೊಲೀಸ್ ಅಧಿಕಾರಿಗಳು, ಪೌರಕಾರ್ಮಿಕರ ಸಹಿತ ವಿವಿಧ ಕ್ಷೇತ್ರದ ಸಾಧಕಿಯರನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿನ ಸಾಧಕಿಯರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಬಳಗದ ಗೌರವಾಧ್ಯಕ್ಷ ಎಂ.ಎಚ್.ರವೀಂದ್ರ, ಪುರಸಭಾ ಸದಸ್ಯ ಪಾಲಾಕ್ಷಪ್ಪ ಬಳಗದ ಪ್ರಮುಖರಾದ ಮಂಗಳಾ ಪ್ರಕಾಶ್, ವನಜಾಕ್ಷಿ ನಾಗರಾಜ್, ಗಿರಿಜಮ್ಮ ಪೃಥ್ವಿಕುಮಾರ್, ಜಯಮ್ಮ, ಸಣ್ಣಗೌಡ ಡಮ್ಮಳ್ಳಿ, ಕುಬೇರಪ್ಪ, ಪರಮೇಶ್ವರಪ್ಪ, ಶಿವಕುಮಾರ್, ರುದ್ರಯ್ಯ, ಚನ್ನಬಸವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.